ಬೆಂಗಳೂರು :ರಸ್ತೆ ಅಪಘಾತದಲ್ಲಿ ಟೆಕ್ಕಿ ಮೃತಪಟ್ಟಿದ್ದ ಪ್ರಕರಣ ಸಂಬಂಧ ಕುಟುಂಬಕ್ಕೆ ಆತನು ಕೆಲಸ ಮಾಡುತ್ತಿದ್ದ ಸಂಸ್ಥೆಯಿಂದ ಮರಣ ಪರಿಹಾರ ಮೊತ್ತವನ್ನೇ ಮಾಸಿಕ ವೇತನ ಎಂಬುದಾಗಿ ಪರಿಗಣಿಸಿ 3.66 ಕೋಟಿ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದ ವಿಚಾರಣಾ ನ್ಯಾಯಾಲಯದ ಆದೇಶ ರದ್ದು ಪಡಿಸಿರುವ ಹೈಕೋರ್ಟ್, 1.99 ಕೋಟಿ ರೂ.ಗೆ ಇಳಿಕೆ ಮಾಡಿದೆ.
ರಸ್ತೆ ಅಪಘಾತದಲ್ಲಿ ಮೃತರಾದ ವ್ಯಕ್ತಿಗೆ ಕಂಪೆನಿ ನೀಡಿದ್ದ ಪರಿಹಾರವನ್ನು ವೇತನವನ್ನಾಗಿ ತಪ್ಪಾಗಿ ಪರಿಗಣಿಸಿ ಪರಿಹಾರ ಘೋಷಣೆ ಮಾಡಿದ್ದ ಮೋಟಾರು ಅಪಘಾತಗಳ ಪರಿಹಾರ ನ್ಯಾಯಾಧಿಕರಣ (ಎಂಎಸಿಟಿ) ಆದೇಶ ಪ್ರಶ್ನಿಸಿ ವಿಮಾ ಕಂಪೆನಿಯು ಹೈಕೋರ್ಟ್ ಮೆಟ್ಟಿಲೇರಿತ್ತು. ಅಲ್ಲದೆ, ಪರಿಹಾರ ಮೊತ್ತ ಹೆಚ್ಚಳ ಮಾಡುವಂತೆ ಕೋರಿ ಮೃತರ ಕುಟುಂಬಸ್ಥರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ಅವರಿದ್ದ ವಿಭಾಗೀಯ ಪೀಠ, ಅರ್ಜಿಗಳನ್ನು ಭಾಗಶಃ ಪುರಸ್ಕರಿಸಿ ಈ ಆದೇಶ ನೀಡಿದೆ.
ವಿಚಾರಣೆ ವೇಳೆ ವಿಮಾ ಕಂಪೆನಿ ಪರ ವಕೀಲರು, ನ್ಯಾಯಾಧಿಕರಣ ಮೃತರ ಕಾರ್ಯ ನಿರ್ವಹಿಸುತ್ತಿದ್ದ ಸಂಸ್ಥೆಯಿಂದ ಕುಟುಂಬಕ್ಕೆ ಸುಮಾರು ಆರು ತಿಂಗಳ ವೇತನದ ಪ್ರಮಾಣವನ್ನು ಮರಣ ಪರಿಹಾರವನ್ನು ಪಾವತಿಸಿತ್ತು. ಈ ಮೊತ್ತವನ್ನು ಮಾಸಿಕ ವೇತನವನ್ನಾಗಿ ಪರಿಗಣಿಸಿದೆ. ಅದರ ಬದಲಿಗೆ ಮಾಸಿಕವಾಗಿ ಮೃತರು ಪಡೆಯುತ್ತಿದ್ದ ವೇತನ ಪರಿಗಣಿಸಬೇಕು ಎಂದು ಕೋರಿದ್ದರು.
ಅಲ್ಲದೆ, ಮೃತರ ಕುಟುಂಬಸ್ಥರ ಪರ ವಕೀಲರು, ರಸ್ತೆ ಅಪಘಾತ ನಡೆದ ಸಂದರ್ಭದಲ್ಲಿ ಮೃತರ ಕಾರು ತಪ್ಪು ಮಾರ್ಗದಲ್ಲಿ ಚಲಾಯಿಸಿದ್ದಾರೆ ಎಂಬ ಕಾರಣಕ್ಕೆ ಪರಿಹಾರ ಮೊತ್ತದಲ್ಲಿ ಶೇ. 25ರಷ್ಟನ್ನು ಕಡಿತ ಮಾಡಲಾಗಿದೆ. ಇದರಿಂದ ಪರಿಹಾರ ಮೊತ್ತ ಕಡಿಮೆಯಾಗಿದೆ. ಹೀಗಾಗಿ ಸಂಪೂರ್ಣ ಪರಿಹಾರ ಕೊಡಿಸಬೇಕು ಎಂದು ಕೋರಿದ್ದರು.