ಕರ್ನಾಟಕ

karnataka

ETV Bharat / state

ಮಾಸ್ಕ್, ಸ್ಯಾನಿಟೈಸರ್​​ನ್ನು ಅಗತ್ಯವಸ್ತು ಪಟ್ಟಿಯಿಂದ ಕೈಬಿಟ್ಟಿದ್ದೇಕೆ?: ಕೇಂದ್ರಕ್ಕೆ ಹೈಕೋರ್ಟ್ ಪ್ರಶ್ನೆ

ಎನ್-95 ಸೇರಿದಂತೆ ಇತರೆ ಮಾಸ್ಕ್ ಹಾಗೂ ಸ್ಯಾನಿಟೈಸರ್​ಗಳನ್ನು ಅಗತ್ಯ ವಸ್ತುಗಳ ಪಟ್ಟಿಯಿಂದ ಹೊರಗಿಡಲಾಗಿದೆ. ಹೀಗಾಗಿ ಇವುಗಳ ಮೇಲೆ ಬೆಲೆ ನಿಯಂತ್ರಣ ಸಹ ಇಲ್ಲ. ಇಂದರಿಂದಾಗಿ ಅಗತ್ಯ ಪ್ರಮಾಣದಲ್ಲಿ ಲಭ್ಯವೂ ಆಗುತ್ತಿಲ್ಲ.

By

Published : Aug 6, 2020, 11:33 PM IST

High Court Question to Center about Mask and Sanitizer
ಹೈಕೋರ್ಟ್

ಬೆಂಗಳೂರು :ಕೊರೊನಾ ನಿಯಂತ್ರಿಸಲು ಅತ್ಯಗತ್ಯವಾಗಿರುವ ಮಾಸ್ಕ್ ಮತ್ತು ಸ್ಯಾನಿಟೈಸರ್​ಗಳನ್ನು "ಅವಶ್ಯಕ ವಸ್ತುಗಳ'' ಪಟ್ಟಿಯಿಂದ ಹೊರಗಿಟ್ಟಿರುವುದೇಕೆ ಎಂದು ಕೇಂದ್ರ ಸರ್ಕಾರಕ್ಕೆ ಪ್ರಶ್ನಿಸಿರುವ ಹೈಕೋರ್ಟ್, ಕೂಡಲೇ ಇವುಗಳನ್ನು ಮರು ಸೇರ್ಪಡೆಗೊಳಿಸುವಂತೆ ತಾಕೀತು ಮಾಡಿದೆ.

ಅನಿಯಂತ್ರಿತ ಬೆಲೆಗಳಿಗೆ ಮಾರಾಟವಾಗುತ್ತಿರುವ ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್​ಗಳ ಖರೀದಿಗೆ ದರ ನಿಗದಿ ಮಾಡುವಂತೆ ಸರ್ಕಾರಕ್ಕೆ ನಿರ್ದೇಶಿಸಲು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಶ್ರೀಧರ್ ಪ್ರಭು ವಾದಿಸಿ, ಎನ್-95 ಸೇರಿದಂತೆ ಇತರೆ ಮಾಸ್ಕ್ ಹಾಗೂ ಸ್ಯಾನಿಟೈಸರ್​ಗಳನ್ನು ಅಗತ್ಯ ವಸ್ತುಗಳ ಪಟ್ಟಿಯಿಂದ ಹೊರಗಿಡಲಾಗಿದೆ. ಹೀಗಾಗಿ ಇವುಗಳ ಮೇಲೆ ಬೆಲೆ ನಿಯಂತ್ರಣ ಸಹ ಇಲ್ಲ. ಇಂದರಿಂದಾಗಿ ಅಗತ್ಯ ಪ್ರಮಾಣದಲ್ಲಿ ಲಭ್ಯವೂ ಆಗುತ್ತಿಲ್ಲ ಎಂದು ಪೀಠಕ್ಕೆ ವಿವರಿಸಿದರು.

ಇದಕ್ಕೆ ಉತ್ತರಿಸಿದ ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಂ.ಬಿ. ನರಗುಂದ, ಎನ್-95 ಮಾಸ್ಕ್, ಸ್ಯಾನಿಟೈಸರ್​ಗಳ ಬೆಲೆ ನಿಗದಿಯನ್ನು ಮಾರುಕಟ್ಟೆಯ ವಿವೇಚನೆಗೆ ಬಿಡಲಾಗಿದೆ. ಮಾಸ್ಕ್, ಸ್ಯಾನಿಟೈಸರ್ ಅಭಾವದ ಬಗ್ಗೆ ಯಾವುದೇ ವರದಿ ಇಲ್ಲದ ಹಿನ್ನೆಲೆಯಲ್ಲಿ ಇವನ್ನು ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಸೇರಿಸಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಮಾಸ್ಕ್ ಹಾಗೂ ಸ್ಯಾನಿಟೈಸರ್​ಗಳನ್ನು ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಮರು ಸೇರ್ಪಡೆಗೊಳಿಸುವ ಬಗ್ಗೆ ಕೇಂದ್ರ ಸರ್ಕಾರದ ಸಕ್ಷಮ ಅಧಿಕಾರಿಯಿಂದ ಪ್ರಮಾಣಪತ್ರ ಸಲ್ಲಿಸುವಂತೆ ಸೂಚಿಸಿತು. ಅಲ್ಲದೇ ರಾಜ್ಯದಲ್ಲಿ ಮಾಸ್ಕ್, ಸ್ಯಾನಿಟೈಸರ್​ಗೆ ದರ ನಿಗದಿ ಇದೆಯೇ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ ಪೀಠ, ರಾಜ್ಯ ಸರ್ಕಾರ ಯಾವ ಬೆಲೆಗೆ ಇವುಗಳನ್ನು ಖರೀದಿ ಮಾಡುತ್ತಿದೆ ಮತ್ತು ಲಭ್ಯತೆ ಎಷ್ಟಿದೆ ಎಂಬ ಬಗ್ಗೆ ಪ್ರಮಾಣಪತ್ರ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆ ಮುಂದೂಡಿತು.

ABOUT THE AUTHOR

...view details