ಬೆಂಗಳೂರು : ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಿಬಿಎಂಪಿ ವಾರ್ಡ್‌ಗಳ ರಚನೆಯಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧಿಸಿದಂತೆ ಹೈಕೋರ್ಟ್, ನೋಟಿಸ್ ಜಾರಿ ಮಾಡಿದೆ. ಆಗಸ್ಟ್ 16 ರವರೆಗೆ ಮೀಸಲಾತಿ ಪಟ್ಟಿ ಅಂತಿಮಗೊಳಿಸಬೇಡಿ ಎಂದು ಸರ್ಕಾರಕ್ಕೆ ಮೌಖಿಕವಾಗಿ ಸೂಚಿಸಿದೆ.
ನಗರದ ಹಿರಿಯ ವಕೀಲ ಎಸ್. ಇಸ್ಮಾಯಿಲ್ ಜಬಿವುಲ್ಲಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ಕೈಗೆತ್ತಿಕೊಂಡು ಬುಧವಾರ ವಾದ ಆಲಿಸಿದ ಹೈಕೋರ್ಟ್ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ನೇತೃತ್ವದ ಪೀಠವು ರಾಜ್ಯ ಸರ್ಕಾರ, ರಾಜ್ಯ ಚುನಾವಣಾ ಆಯೋಗ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿದೆ. ಅದರಲ್ಲಿ ಮೀಸಲಾತಿ ಪಟ್ಟಿ ಅಂತಿಮಗೊಳಿಸದಂತೆ ಮೌಖಿಕ ಸೂಚನೆ ನೀಡಿದೆ.
ಬಿಬಿಎಂಪಿ ವಾರ್ಡ್ ಪುನರ್ವಿಂಗಡಣೆ ಪ್ರಶ್ನಿಸಿ ಈ ರಿಟ್ ಅರ್ಜಿ ಒಳಗೊಂಡಂತೆ ಹಲವು ರಿಟ್ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಬೆಂಗಳೂರು ನಗರ ಜಿಲ್ಲಾಧಿಕಾರಿ, ಸೀಮಾ ನಿರ್ಣಯ ಆಯೋಗದ ಅಧ್ಯಕ್ಷ, ಬಿಬಿಎಂಪಿ ಮುಖ್ಯ ಆಯುಕ್ತ ಹಾಗೂ ರಾಜ್ಯ ಚುನಾವಣಾ ಆಯೋಗದ ವಾದ ಆಲಿಸಿದ ಬಳಿಕವೇ ಮಧ್ಯಂತರ ಆದೇಶ ನೀಡಲಿದೆ ಎಂದು ಮಾಹಿತಿ ದೊರೆತಿದೆ.
ವಾರ್ಡ್‌ಗಳ ರಚನೆಯಲ್ಲಿ ತಾರತಮ್ಯ ಆರೋಪ :ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಬಿಎಂಪಿ ವಾರ್ಡ್‌ಗಳ ರಚನೆಯಲ್ಲಿ ತಾರತಮ್ಯ ಮಾಡಲಾಗಿದೆ. ಗೋವಿಂದರಾಜ ನಗರ, ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರತಿ ವಾರ್ಡ್‌ಗೆ ಸರಾಸರಿ 30 ಸಾವಿರ ಜನಸಂಖ್ಯೆ ನಿಗದಿಪಡಿಸಿದ್ದಲ್ಲದೇ, ವಾರ್ಡ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಆದರೆ, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಾತ್ರ ಪ್ರತಿ ವಾರ್ಡ್‌ಗೆ ಸರಾಸರಿ 29 ಸಾವಿರ ಜನಸಂಖ್ಯೆ ನಿಗದಿಪಡಿಸಿ, ಹಿಂದೆ ಇದ್ದ ಏಳು ವಾರ್ಡ್‌ಗಳ ಸಂಖ್ಯೆಯನ್ನು 6ಕ್ಕೆ ಇಳಿಸಲಾಗಿದೆ. ಪ್ರಸಿದ್ದ ಕೆ ಆರ್ ಮಾರ್ಕೆಟ್ ವಾರ್ಡ್ನ್ನು ಕ್ಷೇತ್ರದಿಂದಲೇ ಕೈಬಿಡಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಅರ್ಜಿ ಇತ್ಯರ್ಥವಾದ ನಂತರ ಚುನಾವಣೆ ಅಧಿಸೂಚನೆ ಹೊರಡಿಸಿ :ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಬಿಎಂಪಿ ವಾರ್ಡ್‌ಗಳನ್ನು ಪುನರ್ ರಚಿಸಿ 2022ರ ಜುಲೈ, 14ರಂದು ಸರ್ಕಾರ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು. ಹೊಸದಾಗಿ ವಾರ್ಡ್‌ಗಳನ್ನು ರಚಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಐತಿಹಾಸಿಕ ಕೆ ಆರ್ ಮಾರ್ಕೆಟ್ ವಾರ್ಡ್ ಮರು ಸೇರಿಸಬೇಕು. ಅರ್ಜಿ ಇತ್ಯರ್ಥಗೊಳ್ಳುವ ತನಕ ಬಿಬಿಎಂಪಿ ಚುನಾವಣೆಗೆ ಅಧಿಸೂಚನೆ ಹೊರಡಿಸದಂತೆ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.
ಇದನ್ನೂ ಓದಿ:ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಉದಯ್ ಉಮೇಶ್ ಲಲಿತ್ ನೇಮಕ