ಕರ್ನಾಟಕ

karnataka

By

Published : Feb 2, 2022, 9:29 PM IST

ETV Bharat / state

ಹೈಕೋರ್ಟ್ ಕಚೇರಿಗಳಿಗೆ ಜಾಗದ ಕೊರತೆ: ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸೂಚನೆ

ಹೈಕೋರ್ಟ್ ನೆಲಮಹಡಿಯ ಕಚೇರಿಗಳನ್ನು ಸ್ಥಳಾಂತರಿಸಲು ಜಾಗದ ಕೊರತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಶೀಘ್ರ ಕ್ರಮಕ್ಕೆ ಕೋರ್ಟ್​​ ಸೂಚಿಸಿದೆ.

High Court orders govt to take action about building problem
ಜಾಗದ ಕೊರತೆ ವಿಚಾರವಾಗಿ ಕ್ರಮಕ್ಕೆ ಹೈಕೋರ್ಟ್ ಸೂಚನೆ

ಬೆಂಗಳೂರು:ಹೈಕೋರ್ಟ್ ನೆಲಮಹಡಿಯ ಕಚೇರಿಗಳನ್ನು ಸ್ಥಳಾಂತರಿಸಲು ಜಾಗದ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಆವರಣದಲ್ಲಿ ರಾಜ್ಯ ವಕೀಲರ ಪರಿಷತ್ತು ಕಾರ್ಯ ನಿರ್ವಹಿಸುತ್ತಿರುವ ಹಳೆಯ ಚುನಾವಣಾ ಆಯೋಗದ ಕಟ್ಟಡ ಹಾಗೂ ಕೆಜಿಐಡಿ ಕಟ್ಟಡಗಳನ್ನು ತನಗೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತಕ್ಷಣವೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಹೈಕೋರ್ಟ್ ಸೂಚಿಸಿದೆ.

ಇದೇ ವೇಳೆ ರಾಜ್ಯ ವಕೀಲರ ಪರಿಷತ್ತು ಶಾಸನಾತ್ಮಕ ಸಂಸ್ಥೆ, ಹೈಕೋರ್ಟ್ ಆವರಣದಲ್ಲಿಯೇ ಜಾಗ ಬೇಕೆಂದು ಕೇಳಲಾಗದು. ಬೇರೆ ಯಾವುದೇ ರಾಜ್ಯದ ಹೈಕೋರ್ಟ್ ಆವರಣದಲ್ಲಿ ವಕೀಲರ ಪರಿಷತ್ತಿನ ಕಚೇರಿ ಇಲ್ಲ. ಹೀಗಾಗಿ ರಾಜ್ಯ ವಕೀಲರ ಪರಿಷತ್ತು ತನ್ನ ಕಚೇರಿ ನಿರ್ವಹಣೆಗೆ ತನ್ನದೇ ಸ್ವಂತ ಜಾಗ ನೋಡಿಕೊಳ್ಳಬೇಕು ಎಂದಿದೆ.

ಹೈಕೋರ್ಟ್ ನೆಲಮಹಡಿಯಲ್ಲಿರುವ ಕಚೇರಿಗಳನ್ನು ಸ್ಥಳಾಂತರಿಸುವಂತೆ ಕೋರಿ ವಕೀಲ ರಮೇಶ್ ಎಲ್.ನಾಯಕ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾತ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮನವಿ ಮಾಡಿ, ಹೈಕೋರ್ಟ್​ಗೆ ಅಗತ್ಯ ಕಚೇರಿ ಸ್ಥಳವನ್ನು ಒದಗಿಸಲು ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ. ಈ ಕುರಿತು ಅಡ್ವೊಕೇಟ್ ಜನರಲ್ ಕೂಡ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಜೊತೆ ಮಾತುಕತೆ ನಡೆಸಿದ್ದಾರೆ. ಸಿಎಸ್ ಅಗತ್ಯ ಜಾಗ ಒದಗಿಸಿಕೊಡಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ 4 ವಾರ ಕಾಲಾವಕಾಶ ನೀಡಬೇಕು ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಹೈಕೋರ್ಟ್​ಗೆ ಅಗತ್ಯ ಮೂಲ ಸೌಕರ್ಯ ಒದಗಿಸುವುದಕ್ಕಿಂತ ರಾಜ್ಯ ಸರ್ಕಾರಕ್ಕೆ ಮುಖ್ಯವಾದ ಕೆಲಸವೇನಿದೆ. ಈ ವಿಚಾರದಲ್ಲಿ ಎಜಿ ಕೂಡ ಅಷ್ಟು ಮುತುವರ್ಜಿ ವಹಿಸುವಂತೆ ನಮಗೆ ಕಾಣುತ್ತಿಲ್ಲ. ಕೋವಿಡ್ ನಡುವೆಯೂ ನ್ಯಾಯಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಕೆಲಸ ನಿರ್ವಹಿಸಲು ಸೂಕ್ತವಲ್ಲದ ನೆಲ ಮಹಡಿಯಲ್ಲೇ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿತು.

ಅಲ್ಲದೆ ಹೈಕೋರ್ಟ್ ಕಚೇರಿಗಳ ನಿರ್ವಹಣೆಗೆ ಅಗತ್ಯ ಜಾಗ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಫೆಬ್ರವರಿ.14ರೊಳಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಮುಂದಿನ ವಿಚಾರಣೆ ವೇಳೆ ನ್ಯಾಯಾಲಯವೇ ಕೆಜಿಐಡಿ ಕಟ್ಟಡ ಹಾಗೂ ಹಳೆ ಚುನಾವಣಾ ಬಿಲ್ಡಿಂಗ್ ಖಾಲಿ ಮಾಡಿಸಲು ಆದೇಶ ಹೊರಡಿಸಲಿದೆ ಎಂದು ಎಚ್ಚರಿಕೆ ನೀಡಿತು.

ಇದನ್ನೂ ಓದಿ:ಕೊರೊನಾಗೆ ಜನ ತತ್ತರ.. ರಾಜ್ಯದಲ್ಲಿಂದು ಕೋವಿಡ್​ನಿಂದ 81 ಮಂದಿ ಸಾವು!

ಹೈಕೋರ್ಟ್ ನೆಲಮಹಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಚೇರಿಗಳಿಗೆ ಸೂಕ್ತ ಗಾಳಿ, ಬೆಳಕಿನ ವ್ಯವಸ್ಥೆ ಇಲ್ಲ. ಇದು ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಆದ್ದರಿಂದ ಅಲ್ಲಿರುವ ಕಚೇರಿಗಳನ್ನು ಸೂಕ್ತ ಜಾಗಕ್ಕೆ ಸ್ಥಳಾಂತರಿಸಬೇಕು ಎಂದು ಕೋರಿ ಪಿಐಎಲ್ ಸಲ್ಲಿಸಲಾಗಿತ್ತು.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details