ಬೆಂಗಳೂರು : ಬೆಂಗಳೂರು ನಗರ ಜಿಲ್ಲೆಯ ವಿವಿಧ ಭಾಗಗಳಲ್ಲಿನ 28 ಪಶುವೈದ್ಯ ಕೇಂದ್ರಗಳನ್ನು ಸ್ಥಳಾಂತರ ಮಾಡುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಅನಿಮಲ್ ರೈಟ್ಸ್ ಫಂಡ್ ಸಂಸ್ಥೆ ಹಾಗೂ ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಆರ್ ವಿಶ್ವನಾಥ್ ಸಲ್ಲಿಸಿದಂತೆ ಮತ್ತಿತರರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಪಶುಸಂಗೋಪನಾ ಇಲಾಖೆಯ ಆಯುಕ್ತರು ಮತ್ತು ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಬೆಂಗಳೂರು ನಗರ ಜಿಲ್ಲೆಯ ಆನೇಕಲ್, ಬೆಂಗಳೂರು ಈಶಾನ್ಯ, ಬೆಂಗಳೂರು ಉತ್ತರ ಮತ್ತು ಬೆಂಗಳೂರು ದಕ್ಷಿಣ ತಾಲೂಕುಗಳಲ್ಲಿ ಸುಮಾರು 13 ಲಕ್ಷಕ್ಕೂ ಹೆಚ್ಚು ವಿವಿಧ ಜಾತಿಗೆ ಸೇರಿದ ಪ್ರಾಣಿಗಳು ಮತ್ತು ಸಾಕು ಪ್ರಾಣಿಗಳನ್ನು ಸಾರ್ವಜನಿಕರು ಸಾಕಣೆ ಮಾಡುತ್ತಿದ್ದಾರೆ. ಆದರೆ, ಯಲಹಂಕ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಾಕಷ್ಟು ಪಶುಗಳಿವೆ. ಈ ನಡುವೆ 1300 ಪಶುಗಳಿಗಿಂತಲೂ ಕಡಿಮೆ ಸಂಖ್ಯೆಯಲ್ಲಿರುವ ಆಸ್ಪತ್ರೆಗಳ ವ್ಯಾಪ್ತಿಯಲ್ಲಿನ ಪಶು ಆಸ್ಪತ್ರೆಗಳನ್ನು ಸ್ಥಳಾಂತರಿಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಅಸಂಬದ್ಧ, ಹಾಗೂ ತಪ್ಪುದಾರಿಗೆ ಎಳೆಯುವಂತಾಗಿದೆ.
ಪ್ರಸ್ತುತ ಉಲ್ಲೇಖಿಸಿರುವ ಪಶು ಚಿಕಿತ್ಸಾಲಯಗಳ ವ್ಯಾಪ್ತಿಯಲ್ಲಿ ಹಲವು ಗೋವುಗಳು, ಸೇರಿದಂತೆ ಇತರ ಸಾಕು ಪ್ರಾಣಿಗಳಿವೆ. ಆದರೆ, ಈ ನಡುವೆ ಸರ್ಕಾರ 2023ರ ಡಿಸೆಂಬರ್ 15ರಂದು ಗಂಟಿಗಾನಹಳ್ಳಿ, ಲಿಂಗನಹಳ್ಳಿ ಹನಿಯೂರು ಮತ್ತು ಮಾದಪ್ಪನಹಳ್ಳಿಯಲ್ಲಿ ಪಶು ಚಿಕಿತ್ಸಾಲಯವನ್ನು ಸ್ಥಳಾಂತರ ಮಾಡುವುದಕ್ಕೆ ನಿರ್ಧರಿಸಿದೆ. ಇದರಿಂದಾಗಿ ಈ ಭಾಗದ ರೈತರು ಹಾಗೂ ಪ್ರಾಣಿ ಸಾಕಾಣಿಕೆದಾರರಿಗೆ ತೀವ್ರ ತೊಂದರೆಯಾಗಿದೆ. ಆದ್ದರಿಂದ ಸರ್ಕಾರದ ಸ್ಥಳಾಂತರ ನಿರ್ಧಾರ ಹಿಂಪಡೆಯಲು ನಿರ್ದೇಶನ ನೀಡಬೇಕು ಎಂದು ಕೋರಿದರು.
ಅಲ್ಲದೇ, ರಾಜ್ಯ ಸರ್ಕಾರ 2022-23ನೇ ಸಾಲಿನಲ್ಲಿ 100 ಪಶು ವೈದ್ಯಕೀಯ ಕೇಂದ್ರಗಳ ಪ್ರಾರಂಭಕ್ಕೆ ನಿರ್ಧರಿಸಿದ್ದು, 2022ರ ಮೇ 17ರಂದು ಆದೇಶ ಹೊರಡಿಸಿದೆ. ಜತೆಗೆ, ಮೊದಲ ಹಂತವಾಗಿ 20 ಪಶು ವೈದ್ಯಕೀಯ ಕೇಂದ್ರಗಳನ್ನು ಪ್ರಾರಂಭಿಸಿದೆ. ಈ ಆದೇಶವನ್ನು ಜಾರಿ ಮಾಡುವುದಕ್ಕೂ ಮುನ್ನ ಪಶು ವೈದ್ಯಕೀಯ ಆಸ್ಪತ್ರೆಗಳನ್ನು ಸ್ಥಳಾಂತರಕ್ಕೆ ಮುಂದಾಗಿರುವ ನಿರ್ಧಾರಿಂದ ಸ್ಥಳೀಯ ರೈತರು ತಮ್ಮ ಪಶುಗಳೊಂದಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸುವಂತಾಗಲಿದ್ದು, ತೊಂದರೆ ಅನುಭವಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸ್ಥಳಾಂತರ ಆದೇಶ ರದ್ದುಪಡಿಸಬೇಕು ಅರ್ಜಿಯಲ್ಲಿ ಕೋರಿದ್ದರು. ಆದ್ದರಿಂದ ಈ ಗ್ರಾಮಗಳಲ್ಲಿನ ಪಶು ಆಸ್ಪತ್ರೆಗಳನ್ನು ಸ್ಥಳಾಂತರ ಮಾಡುವ ಸಂಬಂಧ ಹೊರಡಿಸಿರುವ ಆದೇಶ ರದ್ದು ಮಾಡಬೇಕು. ಈ ಭಾಗಗಳಲ್ಲಿನ ಆಸ್ಪತ್ರೆಗಳಲ್ಲಿ ಸೇವೆ ಮುಂದುವರೆಸಬೇಕು ಎಂದು ಸೂಚನೆ ನೀಡಲು ಮನವಿ ಮಾಡಿದರು.
ಇದನ್ನೂ ಓದಿ :ಶಾಸಕರು, ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣ; ಮಾಹಿತಿ ನೀಡಲು ರಿಜಿಸ್ಟ್ರಾರ್‌ಗೆ ಹೈಕೋರ್ಟ್ ಸೂಚನೆ