ಕರ್ನಾಟಕ

karnataka

ETV Bharat / state

ಕಾವೇರಿ ಕೂಗು ಯೋಜನೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಕಳೆದ ಕೆಲ ದಿನಗಳಿಂದ ಕಾನೂನು ತೊಡಕು ಎದುರಿಸುತ್ತಿದ್ದ ಸದ್ಗುರು ಜಗ್ಗಿ ವಾಸುದೇವ್ ಅವರ ಕಾವೇರಿ ಕೂಗು ಯೋಜನೆ ಮುಂದುವರಿಕೆಗೆ ಹೈಕೋರ್ಟ್​ನಿಂದ ಹಸಿರು ನಿಶಾನೆ ದೊರಕಿದೆ.

high-court
ಹೈಕೋರ್ಟ್

By

Published : Sep 8, 2021, 6:25 AM IST

ಬೆಂಗಳೂರು: ಕಾವೇರಿ ಕೂಗು ಯೋಜನೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಈ ವಿಚಾರವನ್ನು ಕೈಗೆತ್ತಿಕೊಂಡ ಹೈಕೋರ್ಟ್, ಬಂಜರು ಭೂಮಿಯಲ್ಲಿ ಮರಗಳನ್ನು ಬೆಳೆಸುವುದು ಅಪರಾಧವಲ್ಲ ಎಂದು ಹೇಳಿದ್ದು, ಕಾವೇರಿ ನದಿ ಪಾತ್ರ ಪ್ರದೇಶದಲ್ಲಿ ಸಸಿಗಳನ್ನು ನೆಡಲು ಈಶ ಔಟ್‌ರೀಚ್ ಹಮ್ಮಿಕೊಂಡಿರುವ ಯೋಜನೆಯನ್ನು ಮುಂದುವರಿಸಲು ಹಸಿರು ನಿಶಾನೆ ನೀಡಿದೆ.

ವಕೀಲ ಎ.ವಿ. ಅಮರನಾಥನ್ ಅವರು ಹೈಕೋರ್ಟ್‌ಗೆ ಸಲ್ಲಿಕೆ ಮಾಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕಾವೇರಿ ಕೂಗು ಅಭಿಯಾನ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿ ದೂರು ಸಲ್ಲಿಸಿದ್ದರು. ಇದನ್ನು ಕೂಲಂಕಷವಾಗಿ ವಾದ - ಪ್ರತಿವಾದ ಆಲಿಸಿ ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ಹಂಗಾಮಿ ಸಿಜೆ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ ಮಂಗಳವಾರ ಈ ಸಂಬಂಧ ತೀರ್ಪು ಪ್ರಕಟಿಸಿದೆ.

ತೀರ್ಪಿನಲ್ಲಿ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳು, ಈಗಿರುವ ಪರಿಸ್ಥಿತಿಯಲ್ಲಿ ಅರಣ್ಯ ಬೆಳೆಸುವ ಅಗತ್ಯತೆ ಹೆಚ್ಚಿದೆ. ಈಶ ಔಟ್‌ರೀಚ್ ಸಕಾರಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದ್ದು ಬರಡು ಭೂಮಿಯಲ್ಲಿ ಮರ ಬೆಳೆಸುವ ಮಹತ್ವದ ಕಾರ್ಯಕ್ಕೆ ಮುಂದಾಗಿದೆ. ಇಂತಹ ಕಾರ್ಯವನ್ನು ನಾವು ಅಡ್ಡಿಪಡಿಸುವ ಬದಲು ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ. ಹಾಗೂ ವಕೀಲರಿಂದ ಸಲ್ಲಿಕೆಯಾಗಿದ್ದ ಅರ್ಜಿಯನ್ನು ತಿರಸ್ಕರಿಸಿದ್ದಾರೆ.

ಕಳೆದ ಕೆಲದಿನಗಳಿಂದ ಕಾನೂನು ತೊಡಕು ಎದುರಿಸುತ್ತಿದ್ದ ಸದ್ಗುರು ಜಗ್ಗಿ ವಾಸುದೇವ್ ಅವರ ಕಾವೇರಿ ಕೂಗು ಯೋಜನೆ ಮುಂದುವರಿಕೆಗೆ ಹಸಿರು ನಿಶಾನೆ ದೊರಕಿದೆ. ತೀರ್ಪಿನಲ್ಲಿ ಅತ್ಯಂತ ಸ್ಪಷ್ಟವಾಗಿ ವಿವರಿಸಲಾಗಿದ್ದು, ಈಶ ಔಟ್ ರೀಚ್ ಸಂಸ್ಥೆಯು ಬಂಜರು ಭೂಮಿಯಲ್ಲಿ ಸಸಿ ನೆಡುವ ಕಾರ್ಯವನ್ನು ಮಾಡುತ್ತಿದೆ. ಒಂದು ವೇಳೆ, ಸರ್ಕಾರಿ ಜಾಗದಲ್ಲಿ ಮರ ಬೆಳೆಸುವುದು ನಿಷಿದ್ಧ ಎಂಬ ನಿರ್ಧಾರಕ್ಕೆ ಬಂದರೆ ಸರ್ಕಾರಿ ಜಾಗದಲ್ಲಿ ನಡೆಸುತ್ತಿರುವ ದೊಡ್ಡಮಟ್ಟದ ಸಾಮಾಜಿಕ ಕಳಕಳಿ ಹಾಗೂ ಪರಿಸರ ಸಂರಕ್ಷಣಾ ಕಾರ್ಯ ನಿಂತುಹೋಗುತ್ತದೆ ಎಂದು ತಿಳಿಸಲಾಗಿದೆ.

ಮರಗಳನ್ನು ಬೆಳಸದಂತೆ ಯಾವುದಾದರೂ ಕಾನೂನು ಇದೆಯಾ?

ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸರ್ಕಾರಿ ಜಾಗದಲ್ಲಿ ಮರಗಳನ್ನು ಬೆಳೆಸದಂತೆ ದೇಶದ ಯಾವುದೇ ಪ್ರಜೆಯನ್ನು ನಿರ್ಬಂಧಿಸಿಲು ಯಾವುದಾದರೂ ಕಾನೂನು ಇದೆಯೇ ಎಂಬ ನೇರ ಪ್ರಶ್ನೆಯೊಂದನ್ನು ಸರ್ಕಾರದ ಮುಂದಿಡಲಾಗಿತ್ತು. ಆದರೆ, ಅಂಥ ಯಾವುದೇ ಕಾನೂನನ್ನು ಸರ್ಕಾರ ಕೋರ್ಟ್ ಗಮನಕ್ಕೆ ತಂದಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

ಇಂತಹ ಯೋಜನೆಯಲ್ಲಿ ನಮ್ಮ ಮಧ್ಯಪ್ರವೇಶದ ಅಗತ್ಯವಿಲ್ಲ

ಈ ಮಹತ್ವಾಕಾಂಕ್ಷಿ ಯೋಜನೆಗೆ ಪ್ರಶಂಸೆ ವ್ಯಕ್ತಪಡಿಸಿರುವ ಹೈಕೋರ್ಟ್ ಇಂತಹ ಮಹತ್ವದ ಯೋಜನೆಯ ತಡೆಗೆ ಹೈಕೋರ್ಟ್ ಮಧ್ಯಪ್ರವೇಶಿಸುವ ಅಗತ್ಯವಿಲ್ಲ. ಅರಣ್ಯ ನಾಶದಿಂದ ಉಂಟಾಗುವ ವಿಪತ್ತು ಸಂಬಂಧ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ.

ಯೋಜನೆ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ಹಂತದಲ್ಲೇ ಹೈಕೋರ್ಟ್ ಅದನ್ನು ಸ್ವಯಂಪ್ರೇರಿತ ಅರ್ಜಿಯನ್ನಾಗಿ ಪರಿವರ್ತಿಸಿಕೊಂಡಿದೆ. ಇಲ್ಲವಾದರೆ ಈ ಅರ್ಜಿಗೆ ಭಾರಿ ದಂಡ ವಿಧಿಸಿ ವಜಾಗೊಳಿಸಿ ಬಹುದಾಗಿದೆ. ಆದರೆ, ಅರ್ಜಿ ಪರಿವರ್ತನೆ ಆದ ಹಿನ್ನೆಲೆ ದಂಡ ವಿಧಿಸುವ ನಿರ್ಧಾರವನ್ನು ಕೈಬಿಡಲಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.

ABOUT THE AUTHOR

...view details