ಕರ್ನಾಟಕ

karnataka

ETV Bharat / state

ಪೋಕ್ಸೋ ಕಾಯಿದೆಯ ಸೆಕ್ಷನ್ 19ರ ಕಟ್ಟುನಿಟ್ಟಿನ ಜಾರಿಗೆ ಸರ್ಕಾರಕ್ಕೆ ನಿರ್ದೇಶನ

ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯಗಳನ್ನು ತಡೆಯಲು ಪೋಕ್ಸೋ ಕಾಯಿದೆ ಸೆಕ್ಷನ್ 19ರ ಕಟ್ಟುನಿಟ್ಟಿನ ಜಾರಿಗೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ ನಿರ್ದೇಶನ ನೀಡಿದೆ.

high-court-directs-government-to-strict-implementation-of-pocso-act-19
ಪೋಕ್ಸೋ ಕಾಯಿದೆ 19ರ ಕಟ್ಟು ನಿಟ್ಟಿನ ಜಾರಿಗೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

By

Published : Jun 6, 2023, 3:13 PM IST

ಬೆಂಗಳೂರು : ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯಗಳ ಕುರಿತು ಸಂಬಂಧಪಟ್ಟ ಪ್ರಾಧಿಕಾರಗಳಿಗೆ (ಪೊಲೀಸರಿಗೆ) ದೂರು ನೀಡಬಹುದಾದ ಪೋಕ್ಸೋ ಕಾಯಿದೆ ಸೆಕ್ಷನ್ 19ರ ಕಟ್ಟುನಿಟ್ಟಿನ ಜಾರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸಿರುವ ಹೈಕೋರ್ಟ್, ಅಪ್ರಾಪ್ತೆಯೊಬ್ಬರಿಗೆ ಗರ್ಭಪಾತ ಮಾಡಿದ ಆರೋಪದಲ್ಲಿ ವೈದ್ಯರೊಬ್ಬರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲು ನಿರಾಕರಿಸಿತು. ಅಲ್ಲದೆ, ಸೆಕ್ಷನ್ 19ರ ಕಟ್ಟುನಿಟ್ಟಿನ ಜಾರಿಯಲ್ಲಿ ವೈದ್ಯರ ಪಾತ್ರ ಮಹತ್ವದ್ದು. ಇದು ವಿಫಲವಾದಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮಾಡುವ ಅಪರಾಧಿಗಳು ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳುತ್ತಾರೆ. ಇದು ಕಾಯಿದೆಯ ಮೂಲ ಉದ್ದೇಶವನ್ನು ವಿಫಲಗೊಳಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹಲವು ಪ್ರಕರಣಗಳಲ್ಲಿ ತಿಳಿಸಿದೆ. ಆದ್ದರಿಂದ ರಾಜ್ಯ ಸರ್ಕಾರ ಸೆಕ್ಷನ್ 19 ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ತಿಳಿಸಿತು.

ಚಿಕ್ಕಮಗಳೂರಿನ ಆಸ್ಪತ್ರೆಯೊಂದರ ಮುಖ್ಯಸ್ಥ ಡಾ.ಚಂದ್ರಶೇಖರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಅರ್ಜಿ ವಜಾಗೊಳಿಸಿದ್ದು, ಈ ನಿರ್ದೇಶನ ನೀಡಿದೆ. ಪೋಕ್ಸೋ ಕಾಯಿದೆಯ ಸೆಕ್ಷನ್ 19ರ ಪ್ರಕಾರ ಅಪ್ರಾಪ್ತ ಮಕ್ಕಳ ಮೇಲಿನ ದೌರ್ಜನ್ಯ ಕುರಿತಂತೆ ಮಾಹಿತಿ ಸಿಕ್ಕ ತಕ್ಷಣ ವಿಳಂಬ ಮಾಡದೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು ಎಂಬುದಾಗಿದೆ. ಆದರೆ, ಅರ್ಜಿದಾರ ವೈದ್ಯರು, ಸಂತ್ರಸ್ತೆಯ ವಯಸ್ಸು 12 ವರ್ಷ ಎಂಬುದಾಗಿ ಗೊತ್ತಾಗಿಲ್ಲ. ಹೀಗಾಗಿ ದೂರು ನೀಡಲು ಮುಂದಾಗಿಲ್ಲ ಎಂಬುದಾಗಿ ತಿಳಿಸಿದ್ದಾರೆ. ಆದರೆ, ಅರ್ಜಿದಾರ ಸ್ತ್ರೀರೋಗ ತಜ್ಞರಾಗಿದ್ದು ಸುಮಾರು 35 ವರ್ಷಗಳ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಮುಂದುವರೆಸುತ್ತಿರುವುದಾಗಿ ವಿವರಿಸಿದ್ದಾರೆ. ಸಂತ್ರಸ್ತೆ ಸೀರೆ ತೊಟ್ಟಿದ್ದಳು ಎಂಬುದಾಗಿ ವಯಸ್ಸನ್ನು ಪರಿಗಣಿಸಿ ಚಿಕಿತ್ಸೆ ನೀಡಿರುವುದಾಗಿ ಹೇಳಿದ್ದಾರೆ. ಅರ್ಜಿದಾರರ ವಿರುದ್ದದ ಅಪರಾಧ ಭಯಾನಕವಾಗಿದ್ದು, ವಿಚಾರಣೆ ಮುಂದುವರೆಯಬೇಕಾಗಿದೆ.

ಅಲ್ಲದೆ, ಹಲವು ವರ್ಷಗಳ ಕಾಲ ಸರ್ಕಾರಿ ಸೇವೆ ಸಲ್ಲಿಸಿರುವ ವೈದ್ಯರು, ಅಪ್ರಾಪ್ತರ ವಿರುದ್ದದ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಜಾಗರೂಕರಾಗಿರಬೇಕಾಗಿದ್ದು, ಪೊಲೀಸರಿಗೆ ತಿಳಿಸುವ ಜವಾಬ್ದಾರಿ ಇದೆ. ಇದನ್ನು ಮಾಡದಿರುವುದು ಗಂಭೀರ ಲೋಪವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ:12 ವರ್ಷದ ಸಂತ್ರಸ್ತೆಯು ಕೆಲವು ಸಂಬಂಧಿಕರೊಂದಿಗೆ 2022ರ ಡಿಸೆಂಬರ್ 17ರಂದು ಅರ್ಜಿದಾರರ ಆಸ್ಪತ್ರೆಗೆ ತೀವ್ರತರದ ರಕ್ತಸ್ರಾವದಿಂದ ಆಗಮಿಸಿ ಚಿಕಿತ್ಸೆ ನೀಡುವಂತೆ ಕೋರಿದ್ದರು. ಚಿಕಿತ್ಸೆ ನೀಡಿದ್ದ ಅರ್ಜಿದಾರ ವೈದ್ಯರು ಅವರ ಜೀವಕ್ಕೆ ಹಾನಿಯಾಗದಂತೆ ಕ್ರಮವಹಿಸಿ ಎರಡು ದಿನಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದರು. ಘಟನೆ ನಡೆದ ಒಂದು ತಿಂಗಳ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ, ಈ ದೂರಿನಲ್ಲಿ ಅರ್ಜಿದಾರರನ್ನು ಆರೋಪಿಯನ್ನಾಗಿಸಿರಲಿಲ್ಲ. ಇದಾದ ಬಳಿಕ ತನಿಖೆ ಮುಂದುವರೆಸಿದ್ದ ಪೊಲೀಸರು, ಘಟನೆ ಸಂಬಂಧಿಸಿದಂತೆ ಅರ್ಜಿದಾರರಿಗೆ 2023ರ ಫೆಬ್ರವರಿ 17ರಂದು ನೋಟಿಸ್ ನೀಡಿದ್ದರು. ಅಲ್ಲದೆ, 12 ವರ್ಷ 11 ತಿಂಗಳ ಸಂತ್ರಸ್ತೆಗೆ ಗರ್ಭಪಾತ ಮಾಡಲಾಗಿದೆ ಎಂದು ವಿವರಿಸಿದ್ದರು. ಈ ಕುರಿತು ಅರ್ಜಿದಾರರನ್ನು ವಿಚಾರಣೆಗೊಳಪಡಿಸಿ ಪೋಕ್ಸೋ ಕಾಯ್ದೆ 17 ಮತ್ತು 21ರ ಅಡಿಯಲ್ಲಿ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಆರೋಪ ಪಟ್ಟಿ ಮತ್ತು ಪ್ರಕರಣವನ್ನು ರದ್ದು ಮಾಡುವುದನ್ನು ಕೋರಿ ಚಂದ್ರಶೇಖರ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಪಿ.ಪಿ.ಹೆಗಡೆ, ಅರ್ಜಿದಾರ ವೈದ್ಯರಿಗೆ ಯಾವುದೇ ತಪ್ಪು ಮಾಡಬೇಕು ಎಂಬ ಉದ್ದೇಶವಿರಲಿಲ್ಲ. ಸಂತ್ರಸ್ತೆ ಆಸ್ಪತ್ರೆಗೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ತೀವ್ರ ರಕ್ತ ಸ್ರಾವವಾಗುತ್ತಿದ್ದು, ಪರಿಸ್ಥಿತಿ ಗಂಭೀರವಾಗಿತ್ತು. ಈ ಸಂದರ್ಭದಲ್ಲಿ ಸಂತ್ರಸ್ತೆಯೊಂದಿಗೆ ಬಂದಿದ್ದ ಮೂರು ನಾಲ್ಕು ಮಂದಿ ನಾವೆಲ್ಲ ಅವರ ಸಂಬಂಧಿಕರು, ಒಬ್ಬರು ಪತಿ ಎಂಬುದಾಗಿ ಪರಿಚಯಿಸಿಕೊಂಡಿದ್ದರು. ಅಲ್ಲದೆ, ಸಂತ್ರಸ್ತೆಗೆ 18 ವರ್ಷಕ್ಕೂ ಮೇಲಾಗಿದೆ ಎಂದು ವಿವರಿಸಿದ್ದರು. ಹೀಗಾಗಿ ಸಂತ್ರಸ್ತೆ ಜೀವ ಉಳಿಸುವುದಕ್ಕಾಗಿ ಗರ್ಭಪಾತ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧದ ಪ್ರಕರಣ ರದ್ದು ಮಾಡಬೇಕು ಎಂದು ಕೋರಿದ್ದರು. ಇದಕ್ಕೆ ಸರ್ಕಾರದ ಪರ ವಕೀಲರು ಆಕ್ಷೇಪಿಸಿದ್ದರು.

ಇದನ್ನೂ ಓದಿ :ಅಕ್ರಮ ಹಣ ವರ್ಗಾವಣೆ ಆರೋಪ: ಐಎಎಸ್ ಅಧಿಕಾರಿ ಪತ್ನಿ ವಿರುದ್ಧದ ಇಡಿ ಸಮನ್ಸ್ ರದ್ದು ಪಡಿಸಿದ ಹೈಕೋರ್ಟ್

ABOUT THE AUTHOR

...view details