ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ದೂರುಗಳನ್ನು ಶೀಘ್ರಗತಿಯಲ್ಲಿ ವಿಚಾರಣೆ ನಡೆಸುವಂತೆ ಹೈಕೋರ್ಟ್, ಸಿಬಿಐ ಕೋರ್ಟ್ಗೆ ಬುಧವಾರ ನಿರ್ದೇಶಿಸಿದೆ.
ಐಎಂಎ ಬಹುಕೋಟಿ ವಂಚನೆ ಪ್ರಕರಣ: ವಿಚಾರಣೆ ತ್ವರಿತಗೊಳಿಸಲು ಹೈಕೋರ್ಟ್ ನಿರ್ದೇಶನ
ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ದೂರುಗಳನ್ನು ಶೀಘ್ರಗತಿಯಲ್ಲಿ ವಿಚಾರಣೆ ನಡೆಸುವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠವು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.
ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲರು, ತನಿಖೆ ಹಾಗೂ ವಿಚಾರಣೆ ವಿಳಂಬವಾದಷ್ಟು ಹಣ ಕಳೆದುಕೊಂಡಿರುವ ಸಾರ್ವಜನಿಕರಿಗೆ ನಷ್ಟವಾಗುತ್ತದೆ ಎಂಬ ಬಗ್ಗೆ ಕೋರ್ಟ್ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಿಸಿರುವ ದೂರುಗಳನ್ನು ಕ್ಷಿಪ್ರಗತಿಯಲ್ಲಿ ವಿಚಾರಣೆ ನಡೆಸಬೇಕು ಎಂದು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ನಿರ್ದೇಶಿಸಿತು.
ಇದೇ ವೇಳೆ, ಹೈಕೋರ್ಟ್ ಆಡಳಿತ ವಿಭಾಗದ ರಿಜಿಸ್ಟ್ರಾರ್ ಅವರಿಗೆ ನಿರ್ದೇಶಿಸಿ, ಸಾರ್ವಜನಿಕರಿಗೆ ವಂಚನೆ ಮಾಡಿರುವ ಪ್ರಕರಣಗಳ ಕುರಿತಂತೆ ಶೀಘ್ರ ವಿಚಾರಣೆ ನಡೆಸಲು ಅಗತ್ಯವಿರುವಷ್ಟು ವಿಶೇಷ ನ್ಯಾಯಾಲಯಗಳ ರಚನೆ ಮಾಡಲು ಯಾವೆಲ್ಲ ಸಾಧ್ಯತೆಗಳಿವೆ ಎಂಬುದನ್ನು ಪರಿಶೀಲಿಸುವಂತೆ ಪೀಠ ಸೂಚಿಸಿತು. ಹಾಗೆಯೇ ಐಎಂಎ ಆಸ್ತಿ ಮುಟ್ಟುಗೋಲು ಪ್ರಕ್ರಿಯೆ ನಡೆಸಲು ನೇಮಕಗೊಂಡಿರುವ ಸಕ್ಷಮ ಪ್ರಾಧಿಕಾರಕ್ಕೆ ಒಂದು ತಿಂಗಳೊಳಗೆ ಎಲ್ಲ ಅಗತ್ಯ ಮೂಲಸೌಕರ್ಯ ಒದಗಿಸುವಂತೆ ಮತ್ತು ಪ್ರಕರಣದಲ್ಲಿ ಆರೋಪಿಯಾಗಿರುವ ಸರಕಾರಿ ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್ ನಡೆಸಲು ಸಿಬಿಐ ಸಲ್ಲಿಸಿರುವ ಮನವಿಯನ್ನು ಶೀಘ್ರವಾಗಿ ಅನುಮೋದಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಮಾ.5ಕ್ಕೆ ಮುಂದೂಡಿತು.