ಬೆಂಗಳೂರು:''ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ರಾಷ್ಟ್ರದ ಪ್ರಮುಖ ನಾಯಕರು. ನಮ್ಮ ರಾಷ್ಟ್ರೀಯ ಅಧ್ಯಕ್ಷ ಹೆಚ್. ಡಿ. ದೇವೇಗೌಡರನ್ನು ಇಂದು ಭೇಟಿ ಮಾಡಿದ್ದಾರೆ. ಇದು ಒಂದು ಸೌಹಾರ್ದಯುತ ಭೇಟಿಯಷ್ಟೇ. ಯಾವುದೇ ರೀತಿಯ ರಾಜಕೀಯ ಬೆಳವಣಿಗೆ ಬಗ್ಗೆ ಆಗಲಿ, ಮುಂದಿನ 2024ರ ಚುನಾವಣೆ ಬಗ್ಗೆ ಚರ್ಚೆಯಾಗಿಲ್ಲ'' ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಪದ್ಮನಾಭ ನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಫಾರೂಕ್ ಅಬ್ದುಲ್ಲಾ ಅವರು ಭೇಟಿ ನೀಡಿ ತೆರಳಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಹೆಚ್ಡಿಕೆ, ''ಫಾರೂಕ್ ಅಬ್ದುಲ್ಲಾ ಅವರು ಈ ದಿನ ದೇವೇಗೌಡರನ್ನು ಭೇಟಿಯಾಗಲು ಕಾರಣ, ಕಳೆದ ಕೆಲವು ದಿನಗಳ ಹಿಂದೆ ದೇವೇಗೌಡರ ಆರೋಗ್ಯ ಸಮಸ್ಯೆ ಇತ್ತು. ಆ ವಿಷಯ ಗೊತ್ತಾಗಿ ದೇವೇಗೌಡರನ್ನು ಭೇಟಿಯಾಗಲು ಬಂದಿದ್ದಾರೆ. ಇದೇ ಸಂದರ್ಭದಲ್ಲಿ ದೇವೇಗೌಡ್ರು ಪ್ರಧಾನಿಯಾದ ಸಂದರ್ಭದಲ್ಲಿ ಜಮ್ಮು ಕಾಶ್ಮೀರಕ್ಕೆ ಕೊಟ್ಟ ಕೊಡುಗೆಯನ್ನು ಸ್ಮರಿಸಿದ್ದಾರೆ. ನಿಮ್ಮಂತ ಪ್ರಧಾನಮಂತ್ರಿ ಈ ದೇಶದಲ್ಲಿ ಈಗ ಇದ್ದಿದ್ದರೆ, ಇವತ್ತು ಭಾರತ-ಪಾಕಿಸ್ತಾನದ ಸಮಸ್ಯೆಗಳಿಗೆ ಸಂಪೂರ್ಣವಾದ ತೆರೆ ಹೇಳುತ್ತಿದ್ರಿ. ಸೌಹಾರ್ದಯುತವಾಗಿ ಇಂಡಿಯಾ- ಪಾಕಿಸ್ತಾನ ಸಮಸ್ಯೆ ಬಗೆಹರಿಸಲು ಪ್ರಯತ್ನ ಪಟ್ಟಿದ್ರಿ. ಅದನ್ನು ಇವತ್ತು ಸಹ ನೆನಪಿಸಿಕೊಳ್ಳುತ್ತೇವೆ ಎಂದು ಫಾರೂಕ್ ಅಬ್ದುಲ್ಲಾ ಹೇಳಿದರೆಂದರು.
ಪ್ರಧಾನಿಮಂತ್ರಿಗಳಾಗಿ ಓಪನ್ ಜೀಪ್ನಲ್ಲಿ ಸಂಚರಿಸಿ ಎರಡು ದೇಶಗಳಿಗೆ ನೀವು ಕೊಟ್ಟ ಸಂದೇಶ. ಇವತ್ತು ಸಹ ಮರೆಯಲು ಸಾಧ್ಯವಿಲ್ಲ. ಅವತ್ತಿನ ಹಲವಾರು ಬೆಳವಣಿಗೆಗಳ ಬಗ್ಗೆ ಚರ್ಚೆ ಮಾಡಿದ್ರು. ಜಮ್ಮು ಕಾಶ್ಮೀರ ಜನರಲ್ಲಿ ವಿಶ್ವಾಸ ಮೂಡಿಸಲು ಮತ್ತು ಪಾಕಿಸ್ತಾನದ ಅಲ್ಲಿಯ ಜನರಲ್ಲಿ ಹೊಂದಾಣಿಕೆ ಆಗಬೇಕು ಭಾವನೆ ಇದೆ. ಅದಕ್ಕೆ ನೀವು ಆಶಾಭಾವನೆ ಮೂಡಿಸಿದ್ರಿ ಅವತ್ತಿನ ದಿನಗಳ ಬಗ್ಗೆ ಸ್ಮರಿಸಿಕೊಳ್ಳುವ ಕೆಲಸ ಮಾಡಿದ್ರು. ಎಲ್ಲಾ ವಿಚಾರಗಳನ್ನು ಹೃದಯ ತುಂಬಿ ಮಾತನಾಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.