ಬೆಂಗಳೂರು: ಎಲ್ಲವನ್ನೂ ಏರಿಸಿರುವ ಕೇಂದ್ರ ತನ್ನದು ‘ಆತ್ಮನಿರ್ಭರ ಭಾರತ’ ರೂಪಿಸುವ ಬಜೆಟ್ ಎಂದು ಆತ್ಮವಂಚನೆಯ ಮಾತುಗಳನ್ನಾಡುತ್ತಿದೆ. ಇಷ್ಟು ಏರಿಕೆಗಳನ್ನು ಕಂಡ ಭಾರತವು ಆತ್ಮನಿರ್ಭರತೆಯನ್ನು ಸಾಧಿಸಲು ಸಾಧ್ಯವೇ? ಡೀಸೆಲ್, ಪೆಟ್ರೋಲ್ ಈಗಾಗಲೇ ಏರುತ್ತಿದೆ. ಅದರ ಜೊತೆಗೆ ಈಗಿನ ಭಾರಿ ಏರಿಕೆ ಪರಿಣಾಮ ಏನಾಗಲಿದೆ ಎಂದು ಕೇಂದ್ರ ಯೋಚಿಸಿದಂತೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಬಜೆಟ್ ಟೀಕಿಸಿದ್ದಾರೆ.
ಕೇಂದ್ರದ ಬಜೆಟ್ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಏರಿಕೆಗಳನ್ನು ಸಮರ್ಥಿಸಿಕೊಳ್ಳುತ್ತಾ ಕೃಷಿ ಸೆಸ್ ಅನ್ನು ಕೇಂದ್ರ ಸರ್ಕಾರ ಮುಂದಿಟ್ಟಿದೆ. ಒಂದೆಡೆ ರೈತರನ್ನು ದೇಶದ್ರೋಹಿಗಳೆಂದು ಬಿಂಬಿಸುವ ಸರ್ಕಾರ ತನ್ನ ರಕ್ಷಣೆಗೆ ಮಾತ್ರ ಕೃಷಿ ಕ್ಷೇತ್ರದ ನೆರವು ಪಡೆದಂತಿದೆ. ಕೃಷಿ ಸೆಸ್‌ನಿಂದ ಸಂಗ್ರಹವಾಗುವ ಹಣವನ್ನು ಕೃಷಿ ರಂಗದ ಅಭಿವೃದ್ದಿಗೆ ಬಳಸಲಾಗುತ್ತದೆಯೇ ಎಂಬುದರ ವಿವರಣೆಯೇ ಬಜೆಟ್‌ನಲ್ಲಿ ಇಲ್ಲ ಎಂದು ಹೇಳಿದ್ದಾರೆ.
2020-21ರಲ್ಲಿ ಶೇ. 9.5 ಮತ್ತು 2022ರಲ್ಲಿ ಶೇ. 6.8 ವಿತ್ತೀಯ ಕೊರತೆ ಇರುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಇದು ಒಂದು ಅರ್ಥವ್ಯವಸ್ಥೆಯಲ್ಲಿನ ಭೀಕರ ಪರಿಸ್ಥಿತಿಯೇ ಸರಿ. ಈ ಕೊರತೆಯನ್ನು ಸರ್ಕಾರ ಎಲ್ಲಿಂದ ತುಂಬಿಸಿಕೊಳ್ಳುತ್ತದೆ? ಇದರ ಪರಿಹಾರಕ್ಕಾಗಿ ನೋಟು ಪ್ರಿಂಟ್ ಮಾಡಲು ಆಗುವುದಿಲ್ಲ. ಕಡೆಗೆ ಅದು ಬ್ಯಾಂಕ್‌ಗಳಿಗೆ ಕೈ ಹಾಕುತ್ತದೆ. ಭಾರೀ ಪ್ರಮಾಣದ ವಿತ್ತೀಯ ಕೊರತೆಯನ್ನು ನೀಗಿಸಿಕೊಳ್ಳಲು ಕೇಂದ್ರ ಸರ್ಕಾರವು ಮುಂದಿನ ದಿನಗಳಲ್ಲಿ ಬ್ಯಾಂಕ್‌ಗಳಲ್ಲಿನ ಸಂಪನ್ಮೂಲವನ್ನು ಅಕ್ಷರಶಃ ದೋಚಲು ಆರಂಭಿಸುತ್ತದೆ. ಇದು ಮತ್ತೊಂದು ಆರ್ಥಿಕ ವಿಷಮ ಪರಿಸ್ಥಿತಿಗೆ ಕಾರಣವಾಗುತ್ತದೆ. ಅದರ ಪರಿಣಾಮ ಸಾಮಾನ್ಯ ಜನರ ಮೇಲೆ ಆಗುತ್ತದೆ. ಜನರ ಶೋಷಣೆಗೆ ಇದು ಕಾರಣವಾಗುವುದರಲ್ಲಿ ಅನುಮಾನವೇ ಇಲ್ಲ ಎಂದಿದ್ದಾರೆ.