ಕರ್ನಾಟಕ

karnataka

ETV Bharat / state

ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ಹಗರಣ : ಆರೋಪಿಗಳ ಆಸ್ತಿ ಮುಟ್ಟುಗೋಲಿಗೆ ನಿರ್ದೇಶನ

ಬಸವನಗುಡಿಯ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್​ ನಿರ್ದೇಶಕರ ಆಸ್ತಿಯನ್ನು ಇಡಿ ಅಧಿಕಾರಿಗಳು ಮುಟ್ಟುಗೋಲು ಹಾಕುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.

By

Published : Jul 23, 2020, 11:19 PM IST

ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಠೇವಣಿದಾರರ ಹಣ ದುರ್ಬಳಕೆ ಮಾಡಿರುವ ನಗರದ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್​ನ ಆರೋಪಿ ನಿರ್ದೇಶಕರ ಆಸ್ತಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪಿಎಮ್ಎಲ್ಎ ಕಾಯ್ದೆ ಅಡಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಹೈಕೋರ್ಟ್ ನಿರ್ದೇಶಿಸಿದೆ.

ಬಸವನಗುಡಿಯ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಮತ್ತು ಗುರು ಸಾರ್ವಭೌಮ ಸೌಹಾರ್ದ ಕೋ-ಆಪರೇಟಿಸ್ ಸೊಸೈಟಿ ಅವ್ಯವಹಾರ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ವಹಿಸುವಂತೆ ಕೋರಿ ಕೆ.ಆರ್​. ನರಸಿಂಹಮೂರ್ತಿ ಮತ್ತಿತರರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ಅರ್ಜಿಯ ವಿಚಾರಣೆ ನಡೆಸಿತು.

ಈ ವೇಳೆ ಅರ್ಜಿದಾರರ ಪರ ವಕೀಲರು ಪ್ರಕರಣ ದಾಖಲಿಸಿ ತಿಂಗಳುಗಳಾಗುತ್ತಾ ಬಂದಿವೆ. ಫೋರೆನ್ಸಿಕ್ ಆಡಿಟ್ ಸೇರಿದಂತೆ 3 ಬಗೆಯ ಆಡಿಟ್ ನಡೆಸಲು ಆದೇಶಿಸಲಾಗಿದೆ. ಆದರೆ ಈವರೆಗೆ ಯಾವೊಂದು ಆಡಿಟ್ ಕೂಡ ಪೂರ್ಣಗೊಂಡಿಲ್ಲ ಎಂದು ಆರೋಪಿಸಿದರು. ಹಾಗೆಯೇ, 40 ಸಾವಿರ ಠೇವಣಿದಾರರು, 7 ಬ್ರ್ಯಾಂಚ್​ಗಳು, 1500 ಕೋಟಿ ಸಾಲ ನೀಡಿರುವ ಬ್ಯಾಂಕ್​ವನ್ನು ದೊಡ್ಡ ಬ್ಯಾಂಕ್​ಗಳ ಜೊತೆ ವಿಲೀನಗೊಳಿಸಲು ಆರ್​ಬಿಐ ನಿರ್ದೇಶಿಸಬೇಕು ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆರ್​ಬಿಐ ಪರ ವಕೀಲರು, ಆಡಿಟ್ ಪೂರ್ಣಗೊಳ್ಳದೆ ಇಂತಹ ವಿಷಯಗಳಲ್ಲಿ ಯಾವುದೇ ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಬ್ಯಾಂಕ್ ವಿಲೀನಗೊಳಿಸಲು ಕೋರಿ ಮಧ್ಯಂತರ ಮನವಿ ಮಾಡಿರುವ ಅರ್ಜಿದಾರರ ಕೋರಿಕೆಗಳನ್ನು ಪರಿಗಣಿಸಿ ನಿರ್ಧಾರ ಕೈಗೊಳ್ಳುವಂತೆ ಆರ್​ಬಿಐಗೆ ಸೂಚಿಸಿತು.

ಇಡಿ ಪರ ವಕೀಲರು ವಿವರಿಸಿ, ಕಳೆದ ಫೆಬ್ರವರಿ 28ರಂದೇ ಇಸಿಆರ್ ದಾಖಲಿಸಲಾಗಿದೆ. ಕಾನೂನು ರೀತಿ ಕ್ರಮ ಜರುಗಿಸಲಾಗುತ್ತಿದೆ ಎಂದರು. ಮಧ್ಯಪ್ರವೇಶಿಸಿದ ಪೀಠ, ಪಿಎಮ್ಎಲ್ಎ ಕಾಯ್ದೆ ಅಡಿ ಕ್ರಮ ಜರುಗಿಸಿ ಬ್ಯಾಂಕ್​ನ ಆರೋಪಿತ ನಿರ್ದೇಶಕರ ಆಸ್ತಿ, ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ನಿರ್ದೇಶಿಸಿತು. ಅಲ್ಲದೇ ಇಡಿ ಅಧಿಕಾರಿಗಳೊಂದಿಗೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಆರೋಪಿತ ನಿರ್ದೇಶಕರ ಆಸ್ತಿ ವಿವರಗಳನ್ನು ಹಂಚಿಕೊಳ್ಳಬೇಕು ಎಂದು ಸೂಚಿಸಿತು.

ಇನ್ನು ಪ್ರಕರಣವನ್ನು ಸಿಐಡಿ ಅರ್ಥಿಕ ಅಪರಾಧ ವಿಭಾಗಕ್ಕೆ ವರ್ಗಾಯಿಸಿದ್ದರೂ ತನಿಖೆ ನಡೆಸಲು ಕಾನೂನಾತ್ಮಕ ಅವಕಾಶ ಮಾಡಿಕೊಟ್ಟಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಪೀಠ, ಸರ್ಕಾರ ಶೀಘ್ರವಾಗಿ ನೋಟಿಫಿಕೇಷನ್ ಹೊರಡಿಸಿ ಎಸ್ಪಿ ಹಂತದ ಅಧಿಕಾರಿಯನ್ನು ತನಿಖಾಧಿಕಾರಿಯಾಗಿ ನೇಮಿಸಿ, ಪಿಸಿ ಆ್ಯಕ್ಟ್ ಅಡಿಯಲ್ಲಿ ಕಾರ್ಯ ನಿರ್ವಹಿಸಲು ಅಧಿಕಾರ ನೀಡಬೇಕು. ಇಡಿ ಮತ್ತು ಸಿಐಡಿ ಅಧಿಕಾರಿಗಳು ಪ್ರಕರಣ ಸಂಬಂಧ ಕೈಗೊಂಡ ಕ್ರಮಗಳ ಕುರಿತು ಮುಂದಿನ ವಿಚಾರಣೆ ವೇಳೆ ಮುಚ್ಚಿದ ಲಕೋಟೆಯಲ್ಲಿ ಕೋರ್ಟ್ ಗೆ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಆಗಸ್ಟ್ 13 ಕ್ಕೆ ಮುಂದೂಡಿತು.

ABOUT THE AUTHOR

...view details