ಬೆಂಗಳೂರು: ಪೊಲೀಸರ ವೇತನ ಪರಿಷ್ಕರಣೆ ಸಂಬಂಧದ ಔರಾದ್ಕರ್ ಸಮಿತಿ ವರದಿ ಜಾರಿಗೆ ನಮ್ಮ ಸರ್ಕಾರ ಮತ್ತು ಸಿಎಂ ಕುಮಾರಸ್ವಾಮಿ ಅವರು ಬದ್ಧರಾಗಿದ್ದೇವೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟಪಡಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಈ ವಿಚಾರವಾಗಿ ಸಿಎಂ ಜತೆ ಚರ್ಚೆ ನಡೆಸಲಾಗಿದೆ. ಪೊಲೀಸ್ ವಾರ್ಷಿಕ ಸಭೆಯಲ್ಲೇ ಸಮಯ ಕೊಟ್ಟರೆ ವರದಿಯನ್ನು ಮಂಡನೆ ಮಾಡುವುದಾಗಿ ಸಿಎಂ ಗೆ ಹೇಳಿದ್ದೇವೆ. ಅವರು ಒಂದು ದಿನ ಸಮಯಾವಕಾಶ ಕೊಡುತ್ತೇನೆ ಎಂದೂ ಭರವಸೆ ನೀಡಿದ್ದಾರೆ ಎಂದು ವಿವರಿಸಿದರು.
ನಾವು ಔರಾದ್ಕರ್ ವರದಿಯನ್ನು ಜಾರಿಗೆ ತರಲು ಬದ್ಧರಾಗಿದ್ದೇವೆ. ನಮ್ಮ ಪೋಲೀಸ್ ಸಿಬ್ಬಂದಿಗಳಿಗೆ ಇತರೆ ಇಲಾಖೆಯ ಸಿಬ್ಬಂದಿಗಿಂತ ಕಡಿಮೆ ವೇತನ ಇದೆ. ಇತರ ಇಲಾಖೆಯ ಸಿಬ್ಬಂದಿಗಳಂತೆ ಪೊಲೀಸ್ ಸಿಬ್ಬಂದಿಗೂ ಸಮನಾಂತರ ವೇತನ ನೀಡುವ ವರದಿ ಇದಾಗಿದೆ. ಈ ಅನ್ಯಾಯ ಸರಿಪಡಿಸುವ ಕೆಲಸ ಮಾಡಲಿದ್ದೇವೆ ಎಂದು ತಿಳಿಸಿದರು.
ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಈ ಸಮಸ್ಯೆ ಪರಿಹರಿಸಲು ಯತ್ನಿಸಲಾಗುವುದು. ಸಿಎಂ ಗಮನಕ್ಕೆ ಮೂರು ನಾಲ್ಕು ಬಾರಿ ಈ ವಿಚಾರವನ್ನು ತಂದಿದ್ದೇವೆ. ಸಿಎಂ ಈ ಬಗ್ಗೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.