ಬೆಂಗಳೂರು: ನಗರದಲ್ಲಿ ಮಂಗಗಳ ಹಾವಳಿ ನಿಯಂತ್ರಿಸಲು ದೆಹಲಿ ಹೈಕೋರ್ಟ್ ಜಾರಿ ಮಾಡಿರುವ ಮಾರ್ಗಸೂಚಿಯಂತೆ ಯೋಜನೆ ರೂಪಿಸಲು ನೀಡಿದ್ದ ಆದೇಶ ಪಾಲನೆ ಮಾಡದ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಬೆಂಗಳೂರು ನಗರದಲ್ಲಿ ಮಂಗಗಳ ಹಾವಳಿ ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಅವುಗಳಿಗೆ ಪುನರ್ವಸತಿ ಕಲ್ಪಿಸುವಂತೆ ಸರ್ಕಾರ ಮತ್ತು ಪಾಲಿಕೆಗೆ ನಿರ್ದೇಶಿಸಬೇಕು ಎಂದು ಕೋರಿ ವಕೀಲ ರಾಧಾನಂದನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮನವಿ ಮಾಡಿ, ನ್ಯಾಯಾಲಯದ ಆದೇಶ ಪಾಲನೆ ಕುರಿತಂತೆ ವಿವರ ಸಲ್ಲಿಸಲು ಕಾಲಾವಕಾಶ ನೀಡುವಂತೆ ಕೋರಿದರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ, ನ್ಯಾಯಾಲಯ ಕಳೆದ ಜೂ.8ರಂದೇ ನಿರ್ದೇಶನ ನೀಡಿದೆ. ಆದೇಶ ನೀಡಿ ಒಂದು ತಿಂಗಳು ಕಳೆದಿದ್ದರೂ ಸರ್ಕಾರ ಮತ್ತು ಪಾಲಿಕೆ ಕನಿಷ್ಠ ಒಂದು ಸಭೆಯನ್ನೂ ನಡೆಸಿಲ್ಲವೆಂದರೆ ಹೇಗೆ? ಎಂದು ಕಟುವಾಗಿ ಪ್ರಶ್ನಿಸಿತು.
ಅಲ್ಲದೆ, ಮಂಗಗಳಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ ಎಂದರೂ ಸರ್ಕಾರ ಗಂಭೀರವಾಗಿ ಏಕೆ ಪರಿಗಣಿಸುತ್ತಿಲ್ಲ. ಇದನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಜು.26ರ ಒಳಗೆ ಸರ್ಕಾರ ಮತ್ತು ಬಿಬಿಎಂಪಿ ಕ್ರಮ ಕೈಗೊಂಡ ಕುರಿತು ವರದಿ ನೀಡಬೇಕು. ಇಲ್ಲದ್ದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅಡಿ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ವಿಚಾರಣೆ ಮುಂದೂಡಿತು.