ಬೆಂಗಳೂರು :ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಮೊದಲು ಪೊಲೀಸ್ ಇಲಾಖೆಯ ಸಂಖ್ಯಾಬಲ ಹೆಚ್ಚಿಸಲು ಹಸಿರು ನಿಶಾನೆ ತೋರಿದೆ. ಬೆಂಗಳೂರಿನ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು, ಸಂಚಾರ ಸುವ್ಯವಸ್ಥೆ ನಿರ್ವಹಿಸಲು ಮೆಗಾ ಪ್ಲ್ಯಾನ್ ಹಾಕಿದೆ. ಸದ್ಯ ಅಗತ್ಯವಿರುವ ಒಟ್ಟು 2,454 ಹುದ್ದೆಗಳಿಗೆ ಎರಡು ಹಂತಗಳಲ್ಲಿ ಸಿಬ್ಬಂದಿ ನೇಮಕಗೊಳಿಸುವ ಮೂಲಕ ಪೊಲೀಸ್ ಇಲಾಖೆಯ ಸಂಖ್ಯಾಬಲ ಹೆಚ್ಚಿಸಲು ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯ ಅನುಮತಿ ದೊರೆತಿದೆ. ಪ್ರಮುಖವಾಗಿ ಸಿಸಿಬಿ ಹೆಚ್ಚು ಸಿಬ್ಬಂದಿ ಬಲವನ್ನ ಹೊಂದಲಿದೆ.
ಸಿಸಿಬಿಯ ಸಂಖ್ಯಾಬಲ ದ್ವಿಗುಣ : ಮಾದಕ ದಂಧೆಕೋರರು, ಸಂಘಟಿತ ಅಪರಾಧ, ಮಹಿಳಾ ಮತ್ತು ಮಕ್ಕಳ ರಕ್ಷಣೆ, ವಿಶೇಷ ವಿಚಾರಣೆ ಸೇರಿದಂತೆ ಪ್ರಮುಖ ಪಾತ್ರ ಹೊಂದಿರುವ ಸಿಸಿಬಿಗೆ ನೂತನವಾಗಿ ಓರ್ವ ಎಸಿಪಿ, 10 ಇನ್ಸ್ಪೆಕ್ಟರ್, 6 ಸಬ್ ಇನ್ಸ್ಪೆಕ್ಟರ್, 26 ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್, 46 ಹೆಡ್ ಕಾನ್ಸ್ಟೇಬಲ್, 142 ಕಾನ್ಸ್ಟೇಬಲ್ ಸಹಿತ 231 ಸಿಬ್ಬಂದಿಗಳನ್ನ ಹೊಂದುವ ಮೂಲಕ ಸಿಸಿಬಿಯ ಸಂಖ್ಯಾಬಲ ದ್ವಿಗುಣಗೊಳ್ಳಲಿದೆ. 2023-24ನೇ ಆರ್ಥಿಕ ವರ್ಷದ ಯೋಜನೆಗಳು ಈ ಕೆಳಗಿನಂತಿವೆ.
ಎರಡು ನೂತನ ಸಂಚಾರ ಠಾಣೆಗಳು:ಇಬ್ಬರು ಇನ್ಸ್ಪೆಕ್ಟರ್, 12 ಸಬ್ ಇನ್ಸ್ಪೆಕ್ಟರ್, 24 ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್, 44 ಹೆಡ್ ಕಾನ್ಸ್ಟೇಬಲ್, 88 ಕಾನ್ಸ್ಟೇಬಲ್ ಸಹಿತ 170 ಸಿಬ್ಬಂದಿಗಳನ್ನೊಳಗೊಂಡ ಎರಡು ನೂತನ ಸಂಚಾರ ಪೊಲೀಸ್ ಠಾಣೆಗಳು ನಿರ್ಮಾಣವಾಗಲಿವೆ.
ಆರು ಮಹಿಳಾ ಪೊಲೀಸ್ ಠಾಣೆಗಳು: ಆರು ಇನ್ಸ್ಪೆಕ್ಟರ್, 24 ಸಬ್ ಇನ್ಸ್ಪೆಕ್ಟರ್, 24 ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್, 48 ಹೆಡ್ ಕಾನ್ಸ್ಟೇಬಲ್, 144 ಕಾನ್ಸ್ಟೇಬಲ್ ಸಹಿತ ಒಟ್ಟು 246 ಸಿಬ್ಬಂದಿಗಳ ಸಂಖ್ಯಾ ಬಲದೊಂದಿಗೆ ಆರು ಮಹಿಳಾ ಪೊಲೀಸ್ ಠಾಣೆಗಳು ಕಾರ್ಯಾರಂಭಿಸಲಿವೆ.
ಸಿಇಎನ್ ಠಾಣೆಗಳಿಗೆ ಹೆಚ್ಚುವರಿ ಸಿಬ್ಬಂದಿ:ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಇಎನ್ ಠಾಣೆಗಳಿಗೆ 16 ಸಬ್ ಇನ್ಸ್ಪೆಕ್ಟರ್, 24 ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್, 48 ಹೆಡ್ ಕಾನ್ಸ್ಟೇಬಲ್, 116 ಕಾನ್ಸ್ಟೇಬಲ್ ಸಹಿತ ಒಟ್ಟು 204 ಜನ ನೂತನ ಸಿಬ್ಬಂದಿ ಸೇರ್ಪಡೆಗೊಳ್ಳಲಿದ್ದಾರೆ. ಜೊತೆಗೆ ಸೈಬರ್ ಕ್ರೈಂ ಠಾಣೆಗಳಿಗೆ ಓರ್ವ ಎಸಿಪಿ, ಇಬ್ಬರು ಇನ್ಸ್ಪೆಕ್ಟರ್, 4 ಸಬ್ ಇನ್ಸ್ಪೆಕ್ಟರ್, 4 ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್, 8 ಹೆಡ್ ಕಾನ್ಸ್ಟೇಬಲ್, 16 ಕಾನ್ಸ್ಟೇಬಲ್ ಸಹಿತ ಒಟ್ಟು 35 ಜನ ಸಿಬ್ಬಂದಿ ಸೇರ್ಪಡೆಯಾಗಲಿದ್ದಾರೆ.