ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಗೋಮಾತೆಯ ಮೇಲಿನ ಪ್ರೀತಿ ಕೇವಲ ಕಾನೂನು ಜಾರಿಗೆ ಸೀಮಿತವಾಗಿದೆ ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ಆರೋಪಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಅಧಿವೇಶನದಲ್ಲಿ ಅತ್ಯಂತ ಉತ್ಸಾಹದಿಂದ ಗೋಹತ್ಯೆ ನಿಷೇಧ ಕಾಯ್ದೆಯನ್ನು ಸರ್ಕಾರ ಜಾರಿಗೆ ತಂದಿದೆ. ಇದರಿಂದಾಗಿ ರೈತರಿಗೆ, ಜನರಿಗೆ, ಕಾರ್ಮಿಕರಿಗೆ ಹಾಗೂ ಚರ್ಮ ಉದ್ಯಮಕ್ಕೆ ಎಷ್ಟು ಅನುಕೂಲವಾಗಿತ್ತು ಎಂಬುದನ್ನು ಅಧ್ಯಯನ ಮಾಡಿದ್ದಾರಾ?. ಇದೊಂದು ಕ್ರಾಂತಿಕಾರಿ ಬಿಲ್ ಎಂದು ಸಿಎಂ ಹಾಗೂ ಪಶುಸಂಗೋಪನಾ ಸಚಿವರು ಹೇಳಿಕೊಂಡಿದ್ದರು.
ವಿಧೇಯಕ ಕೇವಲ ಘೋಷಣೆಗೆ ಸೀಮಿತ:ಗೋವುಗಳನ್ನು ತಂದು ಪೂಜಿಸಿ ವಿಧೇಯಕಕ್ಕೆ ಚಾಲನೆ ನೀಡಿದ್ದರು. ಆದರೆ ಈ ವಿಧೇಯಕ ಕೇವಲ ಘೋಷಣೆಗೆ ಸೀಮಿತವಾಗಿದೆ. ಬಿಜೆಪಿ ಅವರಿಗೆ ರಾಜ್ಯದ ಆರ್ಥಿಕ ಸ್ಥಿತಿ, ಕಾರ್ಮಿಕರು, ರೈತರು ಹಾಗೂ ಕೈಗಾರಿಕೆ ಬಗ್ಗೆ ಅಷ್ಟು ಕಾಳಜಿ ಇಲ್ಲ. ಇದನ್ನು ಜಾರಿಗೆ ತಂದು ಕೇಶವ ಕೃಪಾದವರಿಂದ ಬೆನ್ನು ತಟ್ಟಿಸಿಕೊಳ್ಳುವುದು ಇವರ ಆಶಯವಾಗಿದೆ. ವಿಶ್ವದ ಒಟ್ಟು ಚರ್ಮಧ್ಯಮಕ್ಕೆ ಶೇ.13 ರಷ್ಟು ಭಾರತದಲ್ಲಿ ರಫ್ತಾಗುತ್ತದೆ. 5.5 ಬಿಲಿಯನ್ ಡಾಲರ್ ಆದಾಯ ಬರುತ್ತದೆ.
ಮುಚ್ಚುವ ಸ್ಥಿತಿಗೆ ಕೈಗಾರಿಕೆಗಳು:ಚರ್ಮದ ಪಾದರಕ್ಷೆ ಹಾಗೂ ಬ್ಯಾಗ್ ಉತ್ಪಾದನೆಯಲ್ಲಿ ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಧರ್ಮದ ರಫ್ತು ದೊಡ್ಡ ಪ್ರಮಾಣದಲ್ಲಿ ಆಗುತ್ತಿದೆ. ಏಕೆ ಕೈಗಾರಿಕೆಯಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಅಲ್ಪಸಂಖ್ಯಾತ ಸಮುದಾಯದವರು.
ಬಹುತೇಕ ಕೈಗಾರಿಕೆ ಮುಚ್ಚುವ ಸ್ಥಿತಿ ತಲುಪಿದೆ. 521 ಕೋಟಿ ರೂಪಾಯಿವರೆಗಿನ ಆದಾಯ 160 ಕೋಟಿ ರೂ.ಗೆ ಇಳಿದಿದೆ. 3.5 ಲಕ್ಷ ಮಂದಿ ನೋಂದಾಯಿತ ಸದಸ್ಯರಿದ್ದಾರೆ. ಇವರೆಲ್ಲ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ವಿವರಿಸಿದರು.
ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ರಾಜ್ಯ ಸಮೀಕ್ಷವಾಗಿದೆ ಎಂದು ಇನ್ವೆಸ್ಟ್ ಕರ್ನಾಟಕ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಆದರೆ, ಆ ಪರಿಸ್ಥಿತಿ ರಾಜ್ಯದಲ್ಲಿ ಇಲ್ಲ. ಪಶು ಸಂಗೋಪನಾ ಕ್ಷೇತ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ.
ರಾಜ್ಯದಲ್ಲಿ ಗೋ ಸಂರಕ್ಷಣೆ, ಗೋಶಾಲೆ ನಿರ್ಮಾಣ, ಮೇವುಗಳ ಪೂರೈಕೆ ಸೇರಿದಂತೆ ವಿವಿಧ ಕಾರ್ಯಗಳಿಗೆ ಕೋಟ್ಯಂತರ ರೂಪಾಯಿ ವೆಚ್ಚ ಆಗುತ್ತದೆ. ಆದರೆ, ರಾಜ್ಯ ಸರ್ಕಾರ ಅಗತ್ಯ ಮೊತ್ತದ ಅನುದಾನ ಪೂರೈಸುತ್ತಿಲ್ಲ. 5,280 ಕೋಟಿ ರೂ. ಆರ್ಥಿಕ ಕೊರತೆ ಎದುರಾಗುತ್ತಿದೆ.
ಪಶು ವೈದ್ಯರ ನೇಮಕ ಇಲ್ಲ: ಪಶು ಸಂಗೋಪನ ಇಲಾಖೆ ಬದುಕಿದೆಯೋ ಸತ್ತಿದೆಯೋ ಗೊತ್ತಿಲ್ಲ. ಮಾಹಿತಿ ಕೇಳಿದವರಿಗೆ ಸುಳ್ಳು ಅಂಕಿ - ಅಂಶ ನೀಡಲಾಗುತ್ತದೆ. ಪಶು ವೈದ್ಯರ ನೇಮಕ ಸಹ ಆಗುತ್ತಿಲ್ಲ. ಖಾಲಿ ಇರುವ ವೈದ್ಯರ ಹುದ್ದೆಯನ್ನು ಸರ್ಕಾರ ಭರ್ತಿ ಮಾಡುತ್ತಿಲ್ಲ. 275 ಪಶು ಸಂಜೀವಿನಿ ಆಂಬ್ಯುಲೆನ್ಸ್ ಅನ್ನು ಸರ್ಕಾರ ಖರೀದಿಸಿದೆ. ಆದರೆ, ಇದನ್ನ ಓಡಿಸುವ ಚಾಲಕರು ಇಲ್ಲ. ಯಾವ ಕಾರಣಕ್ಕೆ ಆಂಬ್ಯುಲೆನ್ಸ್ಗಳನ್ನು ಖರೀದಿಸಲಾಯಿತು.