ಕರ್ನಾಟಕ

karnataka

ETV Bharat / state

HC Mahadevappa: ರಾಜ್ಯದಲ್ಲಿ ಉದ್ಯೋಗಾವಕಾಶ ಮತ್ತು ಆದಾಯ ಹೆಚ್ಚಿಸಲು ಸಹಕಾರ ಕೃಷಿ ಪದ್ಧತಿ ಅಳವಡಿಸಲು ನಿರ್ಧಾರ: ಸಚಿವ ಹೆಚ್​ ಸಿ ಮಹದೇವಪ್ಪ

ಗ್ರಾಮೀಣ ಭಾಗದಲ್ಲಿ ಉದ್ಯೋಗಾವಕಾಶ ಮತ್ತು ಆದಾಯ ಹೆಚ್ಚಿಸಲು ಸಹಕಾರ ಕೃಷಿ ಪದ್ಧತಿ ಅಳವಡಿಸಲು ಸರ್ಕಾರ ನಿರ್ಧಾರ ಮಾಡಿದೆ.

By

Published : Aug 9, 2023, 5:44 PM IST

ಸಚಿವ ಹೆಚ್.ಸಿ ಮಹದೇವಪ್ಪ
ಸಚಿವ ಹೆಚ್.ಸಿ ಮಹದೇವಪ್ಪ

ಬೆಂಗಳೂರು : ನಗರ ಪ್ರದೇಶಗಳಿಗೆ ಜನರ ವಲಸೆಯನ್ನು ತಡೆಗಟ್ಟಲು ಮತ್ತು ಹಳ್ಳಿಗಾಡಿನ ಜನರ ಆದಾಯವನ್ನು ಹೆಚ್ಚಿಸಲು ರಾಜ್ಯದಲ್ಲಿ ಸಹಕಾರ ಕೃಷಿ ಪದ್ಧತಿ ಅಳವಡಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಹೆಚ್ ಸಿ ಮಹದೇವಪ್ಪ ಈ ಬಗ್ಗೆ ತಿಳಿಸಿದರು.

ಸ್ತ್ರೀಶಕ್ತಿ ಸಂಘಗಳ ಮಾದರಿಯಲ್ಲಿ ಕೃಷಿ ಗುಂಪುಗಳು ರಚನೆಯಾಗಲಿವೆ. ಹಲವರು ಒಗ್ಗೂಡಿ ಸಹಕಾರ ಪದ್ಧತಿಯಡಿ ಕೃಷಿ ಮಾಡಿದರೆ ಆಹಾರ ಉತ್ಪಾದನೆಯ ಪ್ರಮಾಣ ಮಾತ್ರವಲ್ಲದೆ, ಅವರ ಆದಾಯವೂ ಹೆಚ್ಚುತ್ತದೆ. ಆ ಮೂಲಕ ಗ್ರಾಮೀಣ ಪ್ರದೇಶಗಳ ಆರ್ಥಿಕ ಶಕ್ತಿ ಹೆಚ್ಚುತ್ತದೆ ಎಂದು ಹೇಳಿದರು.

ಸಹಕಾರ ಕೃಷಿ ಗುಂಪುಗಳನ್ನು ಯಾರು ಬೇಕಾದರೂ ರಚಿಸಿಕೊಳ್ಳಬಹುದು. ಪ್ರತಿ ಹಳ್ಳಿಯಲ್ಲಿ ನಿರ್ದಿಷ್ಟ ಪ್ರಮಾಣದ ಜನ ಒಗ್ಗೂಡಿ ಇಂತಹ ಗುಂಪುಗಳನ್ನು ರಚಿಸಿಕೊಂಡರೆ ಲಭ್ಯವಾಗುವ ಭೂಮಿಯ ಪ್ರಮಾಣವೂ ಹೆಚ್ಚಿರುತ್ತದೆ. ಕೃಷಿ ಕೆಲಸವೂ ಸುಲಭವಾಗುತ್ತದೆ. ರಾಜ್ಯದಲ್ಲಿ ಸಣ್ಣ ಹಿಡುವಳಿದಾರರ ಪ್ರಮಾಣ ಹೆಚ್ಚಿದ್ದು, ಲಭ್ಯವಿರುವ ಭೂಮಿಯಲ್ಲಿ ನಿರೀಕ್ಷಿತ ಮಟ್ಟದ ಕೃಷಿ ಮಾಡಲು ಜನರಿಗೆ ಸಾಧ್ಯವಾಗುತ್ತಿಲ್ಲ.

ಹೀಗಾಗಿ ಹಲವರು ಒಗ್ಗೂಡಿ ಕೃಷಿ ಸಹಕಾರ ಗುಂಪುಗಳನ್ನು ರಚಿಸಿಕೊಂಡರೆ ಕೃಷಿಗೆ ಬಲ ಬರುತ್ತದೆ. ಆ ಮೂಲಕ ಅವರ ಆರ್ಥಿಕ ಶಕ್ತಿಯೂ ಹೆಚ್ಚುತ್ತದೆ. ಹಲವರು ಒಗ್ಗೂಡಿ ಕೃಷಿ ಕೆಲಸಕ್ಕೆ ತೊಡಗುವುದರಿಂದ ಗ್ರಾಮೀಣ ಭಾಗದಲ್ಲಿ ಉದ್ಯೋಗಾವಕಾಶಗಳೂ ಹೆಚ್ಚುತ್ತವೆ. ಸಹಕಾರ ಪದ್ಧತಿಯಡಿ ಕೃಷಿ ಮಾಡಲು ಇಂತಹ ಗುಂಪುಗಳನ್ನು ರಚಿಸಿಕೊಳ್ಳುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಎಸ್​ಸಿಎಸ್​ಟಿ-ಟಿಎಸ್​ಪಿ ಅಡಿ ಮೀಸಲಾಗಿಟ್ಟಿರುವ ಹಣದಿಂದ ನೆರವು ನೀಡಲಾಗುವುದು. ಉಳಿದವರಿಗೆ ಸರ್ಕಾರದ ವಿವಿಧ ಇಲಾಖೆಗಳ ಮೂಲಕ ನೆರವು ನೀಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಸಚಿವರು ವಿವರಿಸಿದರು.

ರಾಜ್ಯಾದ್ಯಂತ ಸಹಕಾರ ಪದ್ಧತಿಯಡಿ ಕೃಷಿ ಮಾಡಲು ಲಭ್ಯವಾಗಬಹುದಾದ ಭೂಮಿ ಮತ್ತು ಗುಂಪುಗಳನ್ನು ಅಂದಾಜಿಸಲು ಮತ್ತು ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸುವ ಬಗ್ಗೆ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮೈಸೂರು ಜಿಲ್ಲಾಧಿಕಾರಿಗಳಿಗೆ ಮತ್ತು ಇಲಾಖೆಯ ಉನ್ನತಾಧಿಕಾರಿಗಳಿಗೆ ಈ ಕುರಿತು ನಿರ್ದೇಶನ ನೀಡಿದ್ದು ಸಹಕಾರಿ ಪದ್ಧತಿಯಡಿ ಕೃಷಿ ಮಾಡುವ ಯೋಜನೆಯನ್ನು ಜಾರಿಗೊಳಿಸುವ ಸಾಧ್ಯತೆಗಳ ಕುರಿತು ವರದಿ ನೀಡಲಿದ್ದಾರೆ ಎಂದು ಹೆಚ್ ಸಿ ಮಹದೇವಪ್ಪ ತಿಳಿಸಿದರು.

ಸರ್ಕಾರವೇ ಭೂಮಿ ನೀಡುತ್ತದೆ : ಕೇಂದ್ರ ಸರ್ಕಾರದ ಮಾರ್ಗಸೂಚಿಯ ಪ್ರಕಾರ 1.67 ಎಕರೆಯಷ್ಟು ಭೂಮಿ ಇದ್ದರೆ 5 ಮಂದಿಯ ಕುಟುಂಬ ಜೀವನ ನಿರ್ವಹಣೆ ಮಾಡಬಹುದು. ಸ್ವಂತ ಭೂಮಿ ಇರುವವರು ಒಗ್ಗೂಡಿ ಗುಂಪುಗಳನ್ನು ರಚಿಸುವುದು ಒಂದು ಭಾಗವಾದರೆ, ಸ್ವಂತ ಭೂಮಿ ಇಲ್ಲದವರಿಗೆ ಸರ್ಕಾರವೇ ಭೂಮಿ ಒದಗಿಸಿ ಸಹಕಾರಿ ಪದ್ಧತಿಯಡಿ ಕೃಷಿ ಮಾಡಲು ಅನುಕೂಲ ಮಾಡಿಕೊಡಲಿದೆ ಎಂದು ನುಡಿದರು.

ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ಬಲ : ಇದೇ ರೀತಿ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯವನ್ನು ಬಲಪಡಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಸಚಿವರು, ನಕಲಿ ಜಾತಿ ಪ್ರಮಾಣಪತ್ರ ಸೇರಿದಂತೆ ಹಲವು ವಿಷಯಗಳ ಕುರಿತು ದೂರುಗಳನ್ನು ಸ್ವೀಕರಿಸಿ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ ಕ್ರಮ ಕೈಗೊಳ್ಳುತ್ತದೆ. ದೂರುಗಳ ಆಧಾರದ ಮೇಲೆ ಕರ್ನಾಟಕದಲ್ಲಿ ಶೇಕಡಾ ಎರಡರಷ್ಟು ಮಂದಿಗೆ ಮಾತ್ರ ಶಿಕ್ಷೆಯಾಗುತ್ತಿದೆ. ಆದರೆ ಉತ್ತರ ಪ್ರದೇಶ, ಬಿಹಾರದಂತಹ ರಾಜ್ಯಗಳಲ್ಲಿ ಶಿಕ್ಷೆಯ ಪ್ರಮಾಣ ಶೇಕಡಾ 60ರಷ್ಟಿದೆ. ಕರ್ನಾಟಕದಲ್ಲಿ ಇದು ಸಾಧ್ಯವಾಗದಿರುವುದಕ್ಕೆ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ ಬಲಗುಂದಿರುವುದೇ ಕಾರಣ. ಹೀಗಾಗಿ ಸದರಿ ನಿರ್ದೇಶನಾಲಯಕ್ಕೆ ಅಗತ್ಯದ ಸಿಬ್ಬಂದಿಗಳು ಸೇರಿದಂತೆ ಹಲವು ಅನುಕೂಲಗಳನ್ನು ಒದಗಿಸಿ ಬಲಿಷ್ಠಗೊಳಿಸುವುದು ಸರ್ಕಾರದ ಯೋಚನೆ ಎಂದು ಹೇಳಿದರು.

ಇದನ್ನೂ ಓದಿ :Wild Elephants: ಕರ್ನಾಟಕದಲ್ಲಿ ಆನೆಗಳ ಸಂಖ್ಯೆ 350ರಷ್ಟು ಹೆಚ್ಚಳ- ಸಚಿವ ಈಶ್ವರ ಖಂಡ್ರೆ ಮಾಹಿತಿ

ABOUT THE AUTHOR

...view details