ಬೆಂಗಳೂರು:ಒಂದೆಡೆ ಜನರಿಗೆ ಹೊಸ ವರ್ಷದ ಖುಷಿಯಾದ್ರೆ, ಇನ್ನೊಂದೆಡೆ ಹೊಸ ಬಗೆಯ ರೂಪಾಂತರಿ ಕೊರೊನಾ ವೈರಸ್‌ನ ಚಿಂತೆ. ಹಿಂದೆಲ್ಲಾ ಹೊಸ ವರ್ಷದ ಸಂಭ್ರಮಕ್ಕೆ ಎಲ್ಲಿ ಪಾರ್ಟಿ ಮಾಡಬೇಕು, ಯಾವ ರೆಸ್ಟೊರೆಂಟ್‌ಗೆ ಹೋಗಬೇಕು, ಯಾವ ಪಬ್‌ಗೆ ಎಂಟ್ರಿ ಕೊಡಬೇಕು ಅಂತೆಲ್ಲಾ ಜನರು ತಯಾರಿ ಮಾಡುತ್ತಿದ್ದರು. ಆದ್ರೆ ಈ ಬಾರಿ ಈ ಎಲ್ಲಾ ಸಂಭ್ರಮಾಚರಣೆ ಮೇಲೂ ಕೊರೊನಾ ಕಾರ್ಮೋಡ ಆವರಿಸಿದೆ.
ಸಾಮಾನ್ಯವಾಗಿ ಯಾವುದೇ ಹಬ್ಬಗಳು, ದೊಡ್ಡ ಮಟ್ಟದ ಮದುವೆ ಸಮಾರಂಭ, ಹುಟ್ಟುಹಬ್ಬದ ಆಚರಣೆಗಳಿದ್ದರೆ ಸೌಂಡ್ ಸಿಸ್ಟಮ್ ಹಾಕಿ, ಡಿಜೆ ಕರೆಸಿ ಮೋಜು ಮಸ್ತಿ ಮಾಡಲಾಗುತ್ತಿತ್ತು. ಆದ್ರೆ ಲಾಕ್‌ಡೌನ್ ಕಾರಣದಿಂದಾಗಿ ಈ ಎಲ್ಲ ಸಂಭ್ರಮಾಚರಣೆಗೆ ಬ್ರೇಕ್ ಬಿದ್ದಿತ್ತು.
ಗುಂಪು ಸೇರದೇ ಯಾವುದೇ ಸರಳವಾಗಿ ಹಬ್ಬಾಚರಣೆ ನಡೆಸಬೇಕೆಂದು ಸರ್ಕಾರ ಆದೇಶ ನೀಡಿದೆ. ಹೀಗಾಗಿ ಲಾಕ್‌ಡೌನ್‌ನಲ್ಲಿ ನಡೆದ ಕಾರ್ಯಕ್ರಮಗಳಿಗೆ ಡಿಜೆ ಕರೆಸುವುದು ಅಥವ ಸೌಂಡ್ ಸಿಸ್ಟಮ್ ಮತ್ತು ಪಾರ್ಟಿಗಳನ್ನು ಆಯೋಜಿಸಲಾಗಿರಲಿಲ್ಲ. ಹೀಗಾಗಿ ಕಳೆದ ಹಲವು ತಿಂಗಳಿಂದ ಕಾರ್ಯಕ್ರಮ ಅಯೋಜಕರು ಮತ್ತು ಡಿಜೆಗಳು ಸಂಪಾದನೇ ಇಲ್ಲದೆ ಜೀವನ ಸಾಗಿಸಿದ್ದಾರೆ.
ಇನ್ನೇನು ಹೊಸ ವರ್ಷ ಬಂತು 2021ಕ್ಕೆ ಆದ್ರೂ ಜೀವನಾಧಾರಕ್ಕೆ ಸ್ವಲ್ಪ ದುಡಿಮೆ ಮಾಡಿಕೊಳ್ಳುವ ಆಸೆಗೆ ಹೊಸ ಬಗೆಯ ವೈರಸ್ ತಣ್ಣೀರೆರಚಿದೆ.
ಈಗಾಗಲೇ ರೂಪಾಂತರ ವೈರಾಣು ಭಾರತಕ್ಕೆ ಕಾಲಿಟ್ಟಿದ್ದು ಇದನ್ನು ನಿಯಂತ್ರಿಸಲು ಸರ್ಕಾರ ಹೊಸ ಗೈಡ್‌ಲೈನ್ಸ್ ಹೊರಡಿಸಿದೆ. ಈ ಗೈಡ್‌ಲೈನ್ಸ್ ಪ್ರಕಾರ ಯಾವುದೇ ರೆಸ್ಟೋರೆಂಟ್, ರೆಸಾರ್ಟ್ ಹಾಗು ಹೊಟೆಲ್‌ಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮಾಡುವಂತಿಲ್ಲ. ಹೀಗಾಗಿ ಇವೆಂಟ್ ಆಯೋಜಕರು ಮತ್ತು ಡಿಜೆಗಳಿಗೆ ಸಂಪಾದನೆಯೇ ಇಲ್ಲದಂತಾಗಿ ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದಾರೆ.