ಬೆಂಗಳೂರು : ರಾಜ್ಯ ಬಿಜೆಪಿ ಸರಕಾರ ಘೋಷಣೆ ಮಾಡಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಳ ಆದೇಶ ಜಾರಿ ಮಾಡಿದರೆ ಸಾಮಾನ್ಯ ವರ್ಗದವರ ಕೋಟಾಕ್ಕೆ ಕತ್ತರಿ ಬೀಳುವುದು ಖಚಿತವಾಗಿದೆ. ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಾವ ವರ್ಗದ ಮೀಸಲಾತಿಯನ್ನೂ ಕಡಿತಗೊಳಿಸದೇ ರಾಜ್ಯ ಸರಕಾರವು ಎಸ್ಸಿ - ಎಸ್ಟಿ ಮೀಸಲಾತಿ ಹೆಚ್ಚಳ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಆದರೂ ಜನರಲ್ ಕೆಟಗರಿಯವರ ಕೋಟಾ ಕಡಿತಗೊಳಿಸದೇ ಯಾವ ಮ್ಯಾಜಿಕ್ ನಡೆಸಿದರೂ ಎಸ್ಸಿ ಎಸ್ಟಿಯವರ ಮೀಸಲು ಹೆಚ್ಚಳಗೊಳಿಸುವುದು ಅಂದುಕೊಂಡಷ್ಟು ಸುಲಭವಾಗಲ್ಲ.
ರಾಜ್ಯದಲ್ಲಿ ಪ್ರಸ್ತುತ ಎಸ್ಸಿ ಶೇ.15, ಎಸ್ಟಿಯವರು ಶೇ.3 ರಷ್ಟು, ಓಬಿಸಿ ಶೇ.32 ರಷ್ಟು ಮೀಸಲಾತಿ ಇದೆ. ಎಲ್ಲ ವರ್ಗದವರಿಗೆ ಒಟ್ಟು ಶೇಕಡ 50 ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸಲಾಗಿದೆ. ಉಳಿದ ಶೇ.50 ರಷ್ಟನ್ನು ಜನರಲ್ ಕೆಟಗರಿಯವರಿಗೆ ನಿಗದಿಪಡಿಸಲಾಗಿದೆ. ರಾಜ್ಯ ಸರಕಾರದ ನಿರ್ಧಾರದಂತೆ ಎಸ್ಸಿ ಮೀಸಲು ಈಗಿರುವ ಶೇ.15 ರಿಂದ ಶೇ.17 ಕ್ಕೆ ಮತ್ತು ಎಸ್ಟಿಯವರ ಮೀಸಲು ಶೇ.3 ರಿಂದ ಶೇ.7ಕ್ಕೆ ಹೆಚ್ಚಳವಾದರೆ ಅಂದರೆ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯವರ ಮೀಸಲಾತಿಯನ್ನ ಒಟ್ಟು ಶೇ.6ರಷ್ಟು ಹೆಚ್ಚಿಸಿದರೆ ಜನರಲ್ ಕೆಟಗರಿಯವರ ಪಾಲಿನ ಶೇ.50 ರಷ್ಟು ಕೋಟಾದಲ್ಲಿ ಶೇಕಡ 6 ರಷ್ಟನ್ನು ಕಡಿತಗೊಳಿಸಲೇ ಬೇಕಾಗುತ್ತದೆ.
ರಾಜ್ಯ ಸರಕಾರವಾಗಲಿ ಅಥವಾ ಕೇಂದ್ರಸರಕಾರವಾಗಲಿ ಎಲ್ಲ ವರ್ಗದ ಜಾತಿಗಳ ಮೀಸಲಾತಿ ಪ್ರಮಾಣ ಶೇಕಡ 50 ರಷ್ಟನ್ನು ಮೀರುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದಿರಾ ಸಹಾನಿ ಪ್ರಕರಣದಲ್ಲಿ ಸ್ಪಷ್ಟಪಡಿಸಿ ಐತಿಹಾಸಿಕ ತೀರ್ಪು ನೀಡಿದೆ. ರಾಜ್ಯ ಸರಕಾರವು ಎಸ್ಸಿ-ಎಸ್ಟಿ ಮೀಸಲು ಏರಿಸಿದರೆ ಜನರಲ್ ಕೆಟಗರಿಯವರ ಕೋಟಾ ಶೇಕಡ 50 ರಿಂದ ೪೪ 44 ಕ್ಕೆ ಕುಸಿಯಲಿದೆ.
ಇಷ್ಟೇ ಅಲ್ಲ ಕೇಂದ್ರ ಸರಕಾರವು ಮೇಲ್ವರ್ಗದವರಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ( ಇಡಬ್ಯು ಎಸ್ ) ಬಡವರಿಗೆ ಶೇಕಡ 10 ರಷ್ಟು ಮೀಸಲಾತಿಯನ್ನ ಜಾರಿಗೆ ತಂದಿದೆ. ರಾಜ್ಯದಲ್ಲಿಯೂ ಸಚಿವ ಸಂಪುಟವು ಮೇಲ್ವರ್ಗದ ಬಡವರಿಗೆ ಶೇ.10 ರಷ್ಟು ಮೀಸಲಾತಿ ಅನುಷ್ಟಾನಗೊಳಿಸುವ ತೀರ್ಮಾನ ತಗೆದೊಕೊಂಡಿದೆ. ಆಗ ಜನರಲ್ ಕೆಟಗರಿಯವರ ಪಾಲಿನ ಮೀಸಲಾತಿಯಲ್ಲಿ ಮತ್ತೆ ಶೇ.10 ರಷ್ಟು ಕಡಿತವಾಗುತ್ತದೆ.