ಬೆಂಗಳೂರು: ನಾಳೆಯಿಂದ ಆರಂಭವಾಗಲಿರುವ ಗಣೇಶ ಉತ್ಸವ ಆಚರಣೆಗೆ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಹೊರಡಿಸಿರುವ ನಿಯಮಗಳನ್ನು ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ವಿರೋಧಿಸಿ ಇಂದು ಬಿಬಿಎಂಪಿ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಿದೆ.
ಸರ್ಕಾರದ ಮಾರ್ಗಸೂಚಿಗೆ ಗಣೇಶ ಉತ್ಸವ ಸಮಿತಿ ವಿರೋಧ ವಿವಿಧ ಸಂಘಟನೆಗಳ ನೂರಾರು ಕಾರ್ಯಕರ್ತರು ಗಣಪತಿ ವಿಗ್ರಹ ತಂದು ಪಾಲಿಕೆ ಆವರಣದಲ್ಲಿ ಪ್ರತಿಭಟಿಸಿದರು. ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್ ತಳ್ಳಿ ಬಿಬಿಎಂಪಿಗೆ ಮುತ್ತಿಗೆ ಹಾಕಲು ಮುಂದಾದರು.
12 ಅಡಿ ಗಣೇಶ ಮೂರ್ತಿಯನ್ನು ಕಚೇರಿ ಆವರಣಕ್ಕೆ ತರಲು ಪೊಲೀಸರು ಅಡ್ಡಿಪಡಿಸಿದರು. ಆದರೂ, ಪ್ರತಿಭಟನಾಕಾರರು-ಪೊಲೀಸರ ಮಧ್ಯೆ ತಳ್ಳಾಟ, ನೂಕಾಟ ನಡೆದು, ಸಂಘಟನೆಗಳು ಗಣೇಶ ವಿಗ್ರಹವನ್ನು ಪಾಲಿಕೆ ಆವರಣಕ್ಕೆ ತರಲು ಯಶಸ್ವಿಯಾದರು. ಮನವಿ ಆಲಿಸಲು ಬಂದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಕಾರಿಗೆ ಸಮಿತಿ ಸದಸ್ಯರು ಮುತ್ತಿಗೆ ಹಾಕಿದ್ರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರಾಜು ಮಾತನಾಡಿ, ಬಿಬಿಎಂಪಿ ಹೊರಡಿಸಿರುವ ಮಾರ್ಗಸೂಚಿಗಳನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಗಣಪತಿಯ ಎತ್ತರ, ವಾರ್ಡ್ಗೆ ಒಂದು ಗಣಪ ಹಾಗೂ ಕೇವಲ ಮೂರು ದಿನಕ್ಕೆ ಸೀಮಿತ ಮಾಡಿ ಗಣೇಶೋತ್ಸವ ಆಚರಣೆ ನಿಯಮವನ್ನು ನಾವ್ಯಾರೂ ಒಪ್ಪಲು ಸಾಧ್ಯವಿಲ್ಲ.
ಗಣೇಶ ವಿಸರ್ಜನೆಗೆ ಬಿಬಿಎಂಪಿ ಎಲ್ಲಾ ಕಡೆ, ಎಲ್ಲಾ ದಿನ ಕಲ್ಯಾಣಿ ವ್ಯವಸ್ಥೆ ಮಾಡಲೇ ಬೇಕು, ಇಲ್ಲವಾದಲ್ಲಿ ಕೆರೆಗೆ ವಿಸರ್ಜಿಸಲಾಗುವುದು ಎಂದರು. ಮನೆಯಲ್ಲಿ ಎರಡು ಅಡಿ ಎತ್ತರದ್ದೇ ಗಣೇಶ ಇಡಬೇಕೆಂದು ಹೇಳಲು ನಿಮಗ್ಯಾವ ಅಧಿಕಾರವಿದೆ, ಈವರೆಗೆ ಇರದ ನಿಯಮಗಳು ಈಗ್ಯಾಕೆ ಎಂದು ಪ್ರಶ್ನಿಸಿದರು. ಗಣಪತಿಯನ್ನು ಲಾಟರಿಗೆ ತಂದಿಟ್ಟಿದ್ದಾರೆ. ಲಾಟರಿಯಲ್ಲಿ ಬಂದ ಸಮಿತಿ ಮಾತ್ರ ಆಚರಣೆ ಮಾಡಬೇಕು ಎಂದಿದ್ದಾರೆ. ಇದ್ಯಾವ ತುಘಲಕ್ ದರ್ಬಾರ್, ಇದೇನು ದೊಂಬರಾಟನಾ ಎಂದು ಅಸಮಾಧಾನ ಹೊರಹಾಕಿದರು. ಹಬ್ಬ ಎಷ್ಟೇ ಸಂಭ್ರಮದಿಂದ, ಎಷ್ಟೇ ದೊಡ್ಡ ಮೂರ್ತಿ ಇಟ್ಟು ಆಚರಣೆ ಮಾಡಿದ್ರೂ, ಅವರಿಗೆ ಸಮಿತಿಯ ಬೆಂಬಲವಿದೆ ಎಂದರು.
ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾತನಾಡಿ, ಕೋವಿಡ್ ಹಿನ್ನೆಲೆ ಸರ್ಕಾರ ತಜ್ಞರೊಂದಿಗೆ ಚರ್ಚಿಸಿ ಈ ನಿಯಮಗಳನ್ನು ಮಾಡಿದೆ. ಬೇರೆ ಯಾವ ಉದ್ದೇಶವೂ ಇಲ್ಲ. ಸಮಿತಿಯ ಬೇರೆ ಬೇರೆ ಮನವಿಗಳನ್ನೂ ಸರ್ಕಾರದ ಜೊತೆ ಚರ್ಚಿಸಲಾಗುವುದು ಎಂದು ಹೇಳಿದರು. ದೇವಸ್ಥಾನ ಹಾಗೂ ಮನೆಯ ಹಬ್ಬದ ಆಚರಣೆಗೆ ಯಾವುದೇ ನಿರ್ಬಂಧಗಳಿಲ್ಲ. ಸಾರ್ವಜನಿಕ ಜಾಗದ ಆಚರಣೆ ಮಾತ್ರ ನಿಯಮ ವಿಧಿಸಲಾಗಿದೆ. ಹೀಗಾಗಿ ಜನರು ಸರ್ಕಾರದ ಆದೇಶಕ್ಕೆ ಮಾನ್ಯತೆ ಕೊಡಬೇಕೆಂದು ಮನವಿ ಮಾಡಿದರು.
ಇದನ್ನೂ ಓದಿ: ಗಣೇಶನ ವಿಗ್ರಹ ಮನೆಗೆ ತಂದ ಶಿಲ್ಪಾಶೆಟ್ಟಿ.. ಗಣಪತಿ ಬಪ್ಪಾ ಮೋರಯಾ ಎಂದು ಜೈಕಾರ ಹಾಕಿದ ನಟಿ
ಸಮಿತಿಯಿಂದ ಪಾಲಿಕೆ ಕಚೇರಿ ಮುಂದೆ ಪ್ರತಿಭಟನೆ ಮುಂದುವರೆದಿದ್ದು, ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗ್ತಿದೆ.