ಬೆಂಗಳೂರು:ಸರ್ಕಾರಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂ. ಪಡೆದ ದಂಪತಿ ಕೆಲಸವನ್ನೂ ಕೊಡಿಸದೇ, ಹಣವನ್ನೂ ಮರಳಿಸದೇ ವಂಚಿಸಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಾಗರಬಾವಿ ನಿವಾಸಿ ಪ್ರಮಿಳಾ ನೀಡಿದ ದೂರಿನ ಆಧಾರದ ಮೇರೆಗೆ ಮಂಡ್ಯ ಮೂಲದ ರಾಘವೇಂದ್ರ, ಇವರ ಪತ್ನಿ ಮನು, ಹರೀಶ್ ಮತ್ತು ನವೀನ್ ಎಂಬುವರ ವಿರುದ್ಧ ಚಂದ್ರಾಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
2017ರಲ್ಲಿ ದೂರುದಾರರಾದ ಪ್ರಮೀಳಾ ಚಂದ್ರಾಲೇಔಟ್‌ನಲ್ಲಿ ವಾಸಿಸುತ್ತಿದ್ದರು. ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದ ರಾಘವೇಂದ್ರ ಪತ್ನಿ ಮನು, ಪ್ರಮೀಳಾಗೆ ಪರಿಚಿತರಾಗಿದ್ದರು. 2017ರಲ್ಲಿ ಸರ್ಕಾರದ ನೇರ ನೇಮಕಾತಿ ಹುದ್ದೆಯ ಅಧಿಸೂಚನೆಗೆ ಸಂಬಂಧಿಸಿದ ಗೆಜೆಟ್ ಪತ್ರದ ನಕಲು ಪ್ರತಿಯನ್ನು ಪ್ರಮೀಳಾಗೆ ತೋರಿಸಿದ ಮನು, ನಮ್ಮ ಪತಿ ರಾಘವೇಂದ್ರಗೆ ದೊಡ್ಡ ರಾಜಕಾರಣಿಗಳ ಪರಿಚಯವಿದೆ. ನಿಮ್ಮ ಮಕ್ಕಳಿಗೆ ಸ್ಪೀಕರ್ ಕಡೆಯಿಂದ ಕೆಲಸ ಕೊಡಿಸುತ್ತೇವೆ ಎಂದು ಹೇಳಿ ನಂಬಿಸಿದ್ದರು ಎನ್ನಲಾಗ್ತಿದೆ. ಈಕೆಯ ಮಾತನ್ನು ನಂಬಿದ ಪ್ರಮೀಳಾ ತಮ್ಮ ಮಕ್ಕಳಿಗೆ ಒಳ್ಳೆಯ ಸರ್ಕಾರಿ ಕೆಲಸ ಸಿಗಬಹುದು ಎಂದು ಅವರ ಶೈಕ್ಷಣಿಕ ದಾಖಲಾತಿಯನ್ನು ರಾಘವೇಂದ್ರ ಅವರಿಗೆ ನೀಡಿದ್ದರು. ರಾಘವೇಂದ್ರ ನಕಲು ಅರ್ಜಿ ಭರ್ತಿ ಮಾಡಿಸಿ ಪ್ರಮೀಳಾರಿಂದ 10 ಲಕ್ಷ ರೂ. ಪಡೆದಿದ್ದರು ಎಂಬ ಆರೋಪ ಕೇಳಿಬಂದಿದೆ.