ಬೆಂಗಳೂರು :ಈ ಹಿಂದೆ ನೀವು (ಸಿದ್ದರಾಮಯ್ಯ) ಕಾಂಗ್ರೆಸ್ ಅನ್ನು ಸೀಮೆಎಣ್ಣೆ ಪಾರ್ಟಿ ಅಂದ್ರಿ. ಬಿಜೆಪಿಯನ್ನು ಬೆಂಕಿಪೊಟ್ಟಣ ಪಾರ್ಟಿ ಅಂದ್ರಿ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಏನೆಲ್ಲಾ ಬೈದಿರಿ, ನಂತರ ಯಾರ ಜೊತೆಗೆ ಸೇರಿಕೊಂಡ್ರಿ ಎಂದು ಮಾಜಿ ಸಚಿವ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಅವರು ಸಿದ್ದರಾಮಯ್ಯ ವಿರುದ್ಧ ವಾಕ್ಸಮರ ನಡೆಸಿದರು.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಕೋರ್ ಕಮಿಟಿ ಸಭೆ ನಡೆಯಿತು. ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ್ದು ಯಾರು? ಯಡಿಯೂರಪ್ಪ ಮುಖ್ಯಮಂತ್ರಿ ಆಗಲು ಅವರ ಜೊತೆಗೆ ಸೇರಲಿಲ್ಲವೇ? ಎಂದು ವಾಗ್ಗಾಳಿ ನಡೆಸಿದರು.
1983ರಲ್ಲಿ ನಿಮ್ಮನ್ನು ಗೆಲ್ಲಿಸಿದ ಸಮುದಾಯ ಯಾವುದು? ಗೆಲ್ಲಿಸಿದವರ ಹೆಸರನ್ನೂ ಹೇಳಲಿಲ್ಲ, ನೆನಪು ಸಹ ಮಾಡಿಕೊಳ್ಳಲಿಲ್ಲ. ನೀವು ಯಾರಿಗೂ ಅಗೌರವ ತೋರಿಸಬೇಡಿ. ನೀವು ಸಿಎಂ ಆಗಿದ್ದೀರಿ, ಒಳ್ಳೆಯ ಬಟ್ಟೆ ಹಾಕಿದವರನ್ನು, ಅಧಿಕಾರ ಮಾಡಿದವರನ್ನು ನೀವು ಸಹಿಸುತ್ತೀರಾ? ಸುಮ್ಮನೆ ಮಾತಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಲಸಕ್ಕೆ ಬಾರದವರನ್ನು ಗೆಲ್ಲಿಸಿದ್ರಿ ಅಂತ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಜಿ.ಟಿ.ದೇವೇಗೌಡ, ನಾನು ನಿಮ್ಮನ್ನು ಗೆಲ್ಲಿಸುವುದಕ್ಕೆ ಏನೇನು ಮಾಡಿದೆ. ಉಪಚುನಾವಣೆಯಲ್ಲಿ ಗೆಲ್ಲಿಸುವುದಕ್ಕೆ ಏನೇನು ಮಾಡಿದ್ದೆ ಅಂತ ಗೊತ್ತಿಲ್ವಾ? ನೀವು ಬೇರೆಯವರನ್ನು ಅಧಿಕಾರ ಮಾಡಲು ಬಿಡಲ್ಲ. ಜಿಲ್ಲಾ ಪಂಚಾಯತಿ ಅಧಿಕಾರ 5 ವರ್ಷ ಇದ್ದಿದ್ದು, 20 ತಿಂಗಳು ಇಳಿಸಿದ್ರಿ? ನೀವು ನನಗೆ ಅನ್ಯಾಯ ಮಾಡಿದ್ರಿ, ನಾನು ನಾಯಕನೇ. ಸುಮ್ಮನೆ ಏಕವಚನದಲ್ಲಿ ಮಾತನಾಡಬೇಡಿ. ಅವನು ಜವಾನನೇ ಆಗಿರಲಿ. ಗೌರವ ಕೊಡಬೇಕು ನೀವು. ಸುಮ್ಮನೆ ಆರೋಪ ಮಾಡೋದನ್ನು ನಿಲ್ಲಿಸಿ. ಒಳ್ಳೆಯ ಬಟ್ಟೆ ಹಾಕಿದ್ರೆ, ಓದಿದ್ರೆ ಬ್ರಾಹ್ಮಣರು ಸಹಿಸಲ್ಲ ಅಂತ ನೀವು ಹೇಳಿದ್ರಿ. ನೀವು ಯಾರ ತರಹ ಆಗಿದ್ರಿ ಈಗ, ಅಧಿಕಾರ ಮಾಡುವುದನ್ನು ಸಹಿಸ್ತೀರಾ ನೀವು? ಎಂದು ಸಿದ್ದರಾಮಯ್ಯ ವಿರುದ್ಧ ಕೆಂಡಾಮಂಡಲರಾದರು.
ನಾನು ಯಾರ ಸಹವಾಸದಲ್ಲಿ ಇದ್ದೆ ಅಂತ ಮೊದಲು ತಿಳಿದುಕೊಳ್ಳಿ. ನಾನು ಐದು ಬಾರಿ ಗೆದ್ದಿದ್ದೇನೆ. ರಾಜಶೇಖರ ಮೂರ್ತಿ ವಿರುದ್ಧ ಸೋತೋರು ನೀವು. ನನ್ನ ವಿರುದ್ಧ ಕೂಡ ಸೋತ್ರಿ. 2013 ರಲ್ಲಿ ನನ್ನ ಸೋಲಿಸಲು ಬಂದ್ರಿ. ಸೋಲಿಸಲು ಆಯ್ತಾ? ಇದು ನೀವು ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಮಾಡಿದ ಅವಮಾನ ಎಂದು ಜಿಟಿಡಿ ಗರಂ ಆದರು.