ಬೆಂಗಳೂರು :ಸ್ವಯಂ ಘೋಷಿತ ದೇಶೋದ್ಧಾರಕ ಪಕ್ಷ ಕೇಂದ್ರ ಹಾಗೂ ರಾಜ್ಯ ಬಿಜೆಪಿ ರಾಜಕಾರಣವೇ ಅನುಮಾನಾಸ್ಪದ. ಒಂದೆಡೆ ಉದ್ಧರಿಸುವ ಮಾತು, ಇನ್ನೊಂದೆಡೆ ಕತ್ತರಿಸುವ ಕೆಲಸ. ಮಾತು ಒಂದು, ಕೃತಿ ಇನ್ನೊಂದು!! ಇದು ಬಿಜೆಪಿಯ (ಭರ)ವರಸೆ!! ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಒಂದು ಕಡೆ ಸಫಾರಿ! ಇನ್ನೊಂದು ಕಡೆ ಸುಪಾರಿ!! ಇದು ಬಿಜೆಪಿಯು ಆದಿಯಿಂದ ನಡೆದುಕೊಂಡು ಬಂದ ದಾರಿ. ಕೆಎಂಎಫ್ ಮತ್ತು ನಂದಿನಿ ವಿಷಯದಲ್ಲೂ ಆ ಪಕ್ಷದ್ದು ಅದೇ ವರಸೆ. ಸ್ಲೋಗನ್ ನಲ್ಲಿ ಮಾತ್ರ 'ಬಿಜೆಪಿಯೇ ಭರವಸೆ', ಇದೇ ನೋಡಿ ಅದರ ಅಸಲಿ ವರಸೆ!! ಎಂದು ಕಿಡಿಕಾರಿದ್ದಾರೆ.
ಪ್ರಧಾನಿಗಳಾದ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆ ಹೊತ್ತಿನಲ್ಲಿ ತಮ್ಮೆಲ್ಲ ಅಗಾಧ ಕಾರ್ಯಭಾರ ಬದಿಗಿಟ್ಟು ಸಫಾರಿ ಮಾಡಿಹೋಗಿದ್ದಾರೆ. ಸ್ಥಳಕ್ಕೊಂದು ಪೋಷಾಕು ಧರಿಸುವ ಅವರ ಬಗ್ಗೆ ಮಾತಾಡಿದರೆ, ನನಗೆ ಅವರ ದಿರಿಸಿನ ಬಗ್ಗೆ ಗೊತ್ತೇ ಇಲ್ಲ ಎನ್ನುವುದು ಸಚಿವ ಅಶ್ವತ್ಥನಾರಾಯಣ್ ಅವರ ಕುಹಕದ ಮಾತು. ಇನ್ನೊಬ್ಬರು; ಸಿ.ಟಿ ; ಈ ಮಹಾಶಯರು, ಮೋದಿ ಅವರ ಬಗ್ಗೆ ಟೀಕೆ ಮಾಡಿದರೆ ಅವರ ಎತ್ತರಕ್ಕೆ ಏರಲು ಸಾಧ್ಯವಿಲ್ಲ ಎಂದು ಆಣಿಮುತ್ತು ಉದುರಿಸಿದ್ದಾರೆ. ನಾವು ಅವರ ಮಟ್ಟಕ್ಕೆ ಏರುವುದೂ ಇಲ್ಲ, ಸಿ.ಟಿ. ರವಿ ಅವರ ಮಟ್ಟಕ್ಕೆ ಇಳಿಯುವುದೂ ಇಲ್ಲ.
ಆದರೆ, ಕರ್ನಾಟಕವನ್ನು ಗುಜರಾತಿಗಳಿಗೆ ಒತ್ತೆ ಇಡುವ ಪಾಪದ ಕೆಲಸವನ್ನಂತು ನಾವು ಮಾಡುತ್ತಿಲ್ಲ. ಅಸಲಿ ವಿಷಯ ಅದಲ್ಲ! ಈಗಲ್ಲ, ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗಲೇ ಕೆಎಂಎಫ್ ಅನ್ನು ಮುಗಿಸಲು ಸುಪಾರಿ ಕೊಡಲಾಗಿತ್ತು!! ಅಂದರೆ 2008ರಲ್ಲೇ ಕನ್ನಡಿಗರ ಮೇಲೆ ಅಮುಲ್ ಅನ್ನು ಹೇರಿ, ನಂದಿನಿಯ ಕತ್ತು ಹಿಸುಕುವ ಕರಾಳ ಪ್ರಯತ್ನ ನಡೆದಿತ್ತು. ಆಗ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಅಮುಲ್ ಮಾರಾಟ ಘಟಕ ಸ್ಥಾಪಿಸಲು ಹೊರಟಿತ್ತು ಅಂದಿನ ರಾಜ್ಯ ಬಿಜೆಪಿ ಸರ್ಕಾರ.
ಅಂದರೆ, 15 ವರ್ಷಗಳ ಹಿಂದೆಯೇ ಅಮುಲ್ ಅನ್ನು ಉದ್ಧರಿಸಲು, ನಂದಿನಿಯ ಕತ್ತು ಕತ್ತರಿಸಲು ಬಿಜೆಪಿ ಹೊರಟಿತ್ತು!!. ಅಂದು ಅಮುಲ್ ಘಟಕದ ಬಗ್ಗೆ ಜೆಡಿಎಸ್ ಪಕ್ಷವು ಭಾರೀ ವಿರೋಧ ವ್ಯಕ್ತಪಡಿಸಿತ್ತು, ಕೆಎಂಎಫ್ʼನ ಅಂದಿನ ಅಧ್ಯಕ್ಷರಾಗಿದ್ದ ಹೆಚ್.ಡಿ. ರೇವಣ್ಣ ಅವರು, "ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಅಮುಲ್ ಹಾಲು ಮಾರಾಟಕ್ಕೆ ಅವಕಾಶ ಕೊಡುವುದಿಲ್ಲ" ಎಂದು ಕಡ್ಡಿತುಂಡು ಮಾಡಿದಂತೆ ಹೇಳಿದ್ದರು ಎಂದಿದ್ದಾರೆ ಕುಮಾರಸ್ವಾಮಿ.