ಕರ್ನಾಟಕ

karnataka

ETV Bharat / state

ಏರ್ಪೋರ್ಟ್​​ನಲ್ಲೇ 54 ಪ್ರಯಾಣಿಕರು ಬಾಕಿ, ವಿಮಾನ ಟೇಕ್‌ ಆಫ್‌: ಏರ್ಲೈನ್ಸ್ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಆಕ್ರೋಶ

ಏರ್ಲೈನ್ಸ್ ಸಿಬ್ಬಂದಿಯ ನಿರ್ಲಕ್ಷ್ಯದಿಂದ 54 ಪ್ರಯಾಣಿಕರನ್ನು ಬಿಟ್ಟು ವಿಮಾನ ಟೇಕ್ ಆಫ್ ಆಗಿದ್ದ ಘಟನೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಪ್ರಯಾಣಿಕರನ್ನು ಬಿಟ್ಟು ಟೇಕ್ ಆಫ್ ಆದ ವಿಮಾನ
ಪ್ರಯಾಣಿಕರನ್ನು ಬಿಟ್ಟು ಟೇಕ್ ಆಫ್ ಆದ ವಿಮಾನ

By

Published : Jan 10, 2023, 8:45 AM IST

Updated : Jan 10, 2023, 8:52 AM IST

ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ಲೈನ್ಸ್ ಸಿಬ್ಬಂದಿಯ ಯಡವಟ್ಟಿನಿಂದ ಪ್ರಯಾಣಿಕರು ಪೇಚಿಗೆ ಸಿಲುಕಿರುವ ಘಟನೆ ಸೋಮವಾರ ನಡೆದಿದೆ. ಸುಮಾರು 54 ಪ್ರಯಾಣಿಕರನ್ನು ಬಿಟ್ಟು ವಿಮಾನ ಟೆಕ್ ಆಫ್‌ ಆಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ. ಏರ್ಲೈನ್ಸ್ ನಿರ್ಲಕ್ಷ್ಯದ ವಿರುದ್ಧ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.

ಪ್ರಯಾಣಿಕರ ಆರೋಪ

ಸೋಮವಾರ ಬೆಳಗ್ಗೆ 6.30ಕ್ಕೆ ಕೆಂಪೇಗೌಡ ಏರ್ಪೋಟ್​​ನಿಂದ ದೆಹಲಿಗೆ G8 116 ವಿಮಾನ ಹೊರಡಬೇಕಿತ್ತು. ಟರ್ಮಿನಲ್​ನಿಂದ ವಿಮಾನದವರೆಗೆ ಮೊದಲನೇ ಟ್ರಿಪ್​​ನಲ್ಲಿ ಬಸ್ ಮೂಲಕ 50 ಜನ ಪ್ರಯಾಣಿಕರು ತೆರಳಿದ್ದರು. ಎರಡನೇ ಟ್ರಿಪ್​​ನಲ್ಲಿ 54 ಪ್ರಯಾಣಿಕರು ತೆರಳಿ ವಿಮಾನ ಏರಬೇಕಿತ್ತು. ಆದ್ರೆ ಎರಡನೇ ಟ್ರಿಪ್ ಬಸ್ ಬರುವ ಮುನ್ನವೇ ವಿಮಾನ ಟೇಕ್ ಆಫ್ ಆಗಿದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ. ಪ್ರಯಾಣಿಕರನ್ನು ಗಮನಿಸದೇ ಏರ್ಲೈನ್ಸ್ ಸಿಬ್ಬಂದಿ ನಿರ್ಲಕ್ಷ್ಯ ಮಾಡಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

5.30ಕ್ಕೆ ಬಸ್ಸಿನಲ್ಲಿ ಕುಳಿತಿದ್ದೆವು. ಆದ್ರೂ ಬಸ್​ ಚಾಲಕ ಸರಿಯಾದ ಸಮಯಕ್ಕೆ ನಮ್ಮನ್ನು ವಿಮಾನಕ್ಕೆ ತಲುಪಿಸಿಲ್ಲ. ಇದರಿಂದ ಏರ್ಪೋರ್ಟ್​ನಲ್ಲೇ ನರಕಯಾತನೆ ಅನುಭವಿಸುವಂತಾಯಿತು. ಇದು ನಿರ್ಲಕ್ಷ್ಯದ ಪರಮಾವಧಿ ಎಂದು ಪ್ರಯಾಣಿಕರೊಬ್ಬರು ಆರೋಪಿಸಿದ್ದಾರೆ. ಏರ್ಲೈನ್ಸ್ ವಿರುದ್ಧ ಏರ್ಪೋಟ್​ನಲ್ಲೇ ಪ್ರಯಾಣಿಕರು‌ ಆಕ್ರೋಶ ಹೊರಹಾಕಿದ್ದಲ್ಲದೇ ಈ ಕುರಿತು ಡಿಜಿಸಿಎ ಮತ್ತು ಪ್ರಧಾನಿ ಕಾರ್ಯಾಲಯ, ವಿಮಾನಯಾನ ಸಂಸ್ಥೆಯ ಸಚಿವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.

ಪ್ರಯಾಣಿಕರ ಆರೋಪ

ಕ್ಷಮೆ ಕೇಳಿದ ಗೋಫಸ್ಟ್ ಸಂಸ್ಥೆ:ಪ್ರಯಾಣಿಕರು ಆಕ್ರೋಶ ಹೊರಹಾಕ್ತಿದ್ದಂತೆ ಟ್ವಿಟರ್​ನಲ್ಲಿ ಗೋಫಸ್ಟ್ ಸಂಸ್ಥ ಕ್ಷಮೆ ಕೇಳಿದೆ. ಪ್ರಯಾಣಿಕರ ಮಾಹಿತಿ ಪಡೆದುಕೊಂಡು ಏರ್ಲೈನ್ಸ್ ಸಂಸ್ಥೆ ಟ್ವೀಟ್ ಮಾಡಿ ಕ್ಷಮೆ ಕೋರಿದೆ. ಶೀಘ್ರ ಪರಿಹಾರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.

ಗೋವಾ-ಮಾಸ್ಕೋ ವಿಮಾನಕ್ಕೆ ಬಂದಿತ್ತು ಬಾಂಬ್ ಬೆದರಿಕೆ:ರಷ್ಯಾದ ಮಾಸ್ಕೋದಿಂದ ಗೋವಾಕ್ಕೆ ಪ್ರಯಾಣಿಸುತ್ತಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ ಸಂದೇಶ ಬಂದ ಹಿನ್ನೆಲೆಯಲ್ಲಿ ವಿಮಾನಗುಜರಾತ್​ನ ಜಾಮ್‌ನಗರ ನಿಲ್ದಾಣದಲ್ಲಿ ಸೋಮವಾರ ರಾತ್ರಿ ತುರ್ತು ಭೂಸ್ಪರ್ಶ ಮಾಡಿದೆ. ತಕ್ಷಣವೇ 224 ಪ್ರಯಾಣಿಕರನ್ನು ಸುರಕ್ಷಿತವಾಗಿ ವಿಮಾನದಿಂದ ಇಳಿಸಿ, ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಬಾಂಬ್ ಸ್ಕ್ವಾಡ್, ಪೊಲೀಸ್ ಅಧಿಕಾರಿಗಳು ವಿಮಾನ ನಿಲ್ದಾಣದತ್ತ ಧಾವಿಸಿ ಪರಿಶೀಲನೆ ನಡೆಸಿದರು. ಬಾಂಬ್ ಬೆದರಿಕೆ ಬಗ್ಗೆ ಗೋವಾ ಎಟಿಸಿಗೆ ಬಾಂಬ್ ಬೆದರಿಕೆ ಮೇಲ್ ಬಂದಿತ್ತು.

Last Updated : Jan 10, 2023, 8:52 AM IST

ABOUT THE AUTHOR

...view details