ಯಲಹಂಕ(ಬೆಂಗಳೂರು ಗ್ರಾಮಾಂತರ): ವಾಣಿಜ್ಯ ಮಳಿಗೆಗಳು ಕನ್ನಡ ನಾಮಫಲಕವನ್ನು ಕಡ್ಡಾಯವಾಗಿ ಹಾಕುವಂತೆ ಒತ್ತಾಯಿಸಿ ಬುಧವಾರ ನಾರಾಯಣ ಗೌಡ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ದೇವನಹಳ್ಳಿ ಸಾದಹಳ್ಳಿ ಗೇಟ್ನಿಂದ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿರುವ ಘಟನಾವಳಿಗಳಿಗೆ ಸಂಬಂಧಿಸಿದಂತೆ ನಾರಾಯಣ ಗೌಡ ಸೇರಿದಂತೆ 6 ಜನರ ವಿರುದ್ಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಪಿಎಸ್‌ಐ ಲಿತೀನ್ ಎಂಬವರು ದೂರಿನನ್ವಯ ನ್ಯಾಷನಲ್ ಹೈವೇ ಅಥಾರಿಟಿ ಆ್ಯಕ್ಟ್, IPC ಸೆಕ್ಷನ್‌ಗಳಾದ 283, 188, 427, 341, 188, 283ರಡಿ ಎಫ್‌ಐಆರ್ ದಾಖಲಾಗಿದೆ. ನಾರಾಯಣ ಗೌಡ A1, ಜಗದೀಶ್ A2, ಸುರೇಶ್ A3 ಬಿ.ಕೆ.ನಾರಾಯಣ ಸ್ವಾಮಿ A4, ಬಿ.ಟಿ.ಅನಿಲ್ ಕುಮಾರ್ A5 ಹಾಗು ಅಂಬರೀಶ್ A6 ಆರೋಪಿಗಳೆಂದು ಗುರುತಿಸಲಾಗಿದೆ.
ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರವೇ ಮುಖಂಡರ ವಿರುದ್ಧ ಬಿಎಂಟಿಸಿ ಬಸ್ ಮೇಲೆ ಕಲ್ಲು ತೂರಾಟ, ಪೊಲೀಸ್ ಕಾನ್ಸ್‌ಟೆಬಲ್ ಮೇಲೆ ಉಗಿದಿರುವುದು, ಹೆದ್ದಾರಿ ತಡೆ ಮತ್ತು ಗಲಾಟೆ ಕುರಿತಂತೆ ಮೂರು ಪ್ರಕರಣಗಳು ದಾಖಲಾಗಿದೆ. ಯಲಹಂಕ ಸಾರ್ವಜನಿಕ ಆಸ್ಪತ್ರೆಯಲ್ಲಿ ನಾರಾಯಣಗೌಡ ಅವರ ಆರೋಗ್ಯ ತಪಾಸಣೆ ನಡೆಸಿ, ಪರಪ್ಪನ ಅಗ್ರಹಾರ ಜೈಲಿಗೆ ಬಸ್ಸಿನಲ್ಲಿ ಕರೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಕ್ರಾಸ್ ಬಳಿ ಬಸ್ ತಡೆದು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.