ಬೆಂಗಳೂರು :ವಾಹನ ಚಾಲನೆ ಮಾಡುವ ವೇಳೆ ಫೋನ್ ಜತೆಗೆ ಬ್ಲ್ಯೂಟೂತ್, ಹೆಡ್ ಫೋನ್ ಬಳಸುವುದು ಕಾನೂನು ಬಾಹಿರವಾಗಿದೆ. ಸಿಕ್ಕಿಬಿದ್ದರೆ ಅಂತಹವರಿಗೆ ಸಂಚಾರ ಪೊಲೀಸರು 1000 ರೂ. ದಂಡ ವಿಧಿಸಲಿದ್ದಾರೆ. ಹೆಡ್ ಫೋನ್ ಅಥವಾ ಇಯರ್ ಫೋನ್ ಧರಿಸಿ ವಾಹನ ಚಾಲನೆ ಮಾಡಿದರೆ ಅಂತಹವರನ್ನು ಸಂಚಾರಿ ನಿಯಮ ಉಲ್ಲಂಘನೆ ಅಡಿ ಸೇರಿಸಿ, ದಂಡ ವಿಧಿಸಿ ರಶೀದಿ ನೀಡಲಾಗುವುದು ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.
ಫೋನ್ ಜೇಬಿನಲ್ಲಿಟ್ಟುಕೊಂಡು ಬ್ಲ್ಯೂಟೂತ್ ಅಥವಾ ಇಯರ್ ಫೋನ್ ಡಿವೈಸ್ ಮೂಲಕ ಮಾತನಾಡುವುದು ಕೂಡ ನಿಯಮ ಉಲ್ಲಂಘನೆಯಾಗಲಿದೆ. ಕಾನೂನಿನ ಪ್ರಕಾರ ವಾಹನಗಳನ್ನು ಚಲಾಯಿಸುವಾಗ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಸಾಧನಗಳನ್ನು ಉಪಯೋಗಿಸುವುದು ಕಾನೂನು ಬಾಹಿರ ಎಂದು ಪರಿಗಣಿಸಲಾಗಿದೆ. ಹೀಗಾಗಿ, ವಾಹನ ಸವಾರರು ಎಚ್ಚೆತ್ತುಕೊಳ್ಳುವುದು ಒಳಿತು ಎಂದು ತಿಳಿಸಿದ್ದಾರೆ.