ಬೆಂಗಳೂರು/ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯ ಅವರನ್ನು ಒಂದು ವಿಚಾರಕ್ಕೆ ಮೆಚ್ಚಬೇಕು. ತಮ್ಮ ಸಂಪುಟದಲ್ಲಿ ಸಾಮಾಜಿಕ ನ್ಯಾಯದ ಮೇಲೆ ಅವಕಾಶ ಕೊಟ್ಟಿದ್ದಾರೆ. ಜೊತೆಗೆ ಒಬಿಸಿ ಬಿಲ್ ತಂದಿರುವುದು ಸ್ವಾಗತಾರ್ಹ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ.
ನವದೆಹಲಿಯ ತಮ್ಮ ಕಚೇರಿಯಲ್ಲಿ ಇಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಬಾರಿಗೆ 12 ಮಹಿಳೆಯರಿಗೆ, 8 ಎಸ್ಸಿ, 12 ಎಸ್ಟಿ ಸಮುದಾಯದ ನಾಯಕರಿಗೆ ಮಂತ್ರಿ ಸ್ಥಾನ ನೀಡಿದ್ದಾರೆ. ಇದು ಸಾಮಾಜಿಕ ನ್ಯಾಯವೋ, ಚುನಾವಣೆ ತಂತ್ರವೋ ಗೊತ್ತಿಲ್ಲ. ಅದು ಏನೇ ಇರಲಿ, ಮೋದಿಯವರ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ನಾನು ಪ್ರಧಾನಿಯಾಗಿದ್ದಾಗಲು ಇಂತಹದ್ದೇ ಅವಕಾಶ ಸೃಷ್ಟಿಸಿದ್ದೆ ಎಂದು ಹೇಳಿದರು.
ಈ ಬಾರಿ ಅಧಿವೇಶದಲ್ಲಿ ನಾನು ಒಂದು ದಿನವೂ ಗೈರು ಆಗಿಲ್ಲ. ಎಲ್ಲ ದಿನದ ಕಲಾಪಗಳಲ್ಲಿ ಭಾಗಿಯಾಗಿದ್ದೇನೆ. ಶನಿವಾರ ರಜೆ ದಿನದಲ್ಲಿ ನಾನು ವಾರಾಣಸಿಗೆ ಹೋಗಿ ಬಂದೆ. ನಾನು ಮೊದಲ ಬಾರಿಗೆ ಇಡೀ ಅಧಿವೇಶನದಲ್ಲಿ ಕೂತಿದ್ದೆ ಎಂದರು.
60-65 ವರ್ಷಗಳ ಅವಧಿಯಲ್ಲಿ ಈ ರೀತಿ ಸಂಸತ್ ಸದನ ನಡೆದಿದ್ದು ನೋಡಿಲ್ಲ:
ಕಳೆದ 60-65 ವರ್ಷಗಳ ಅವಧಿಯಲ್ಲಿ ಈ ರೀತಿ ಸಂಸತ್ ಸದನ ನಡೆದಿದ್ದು ನೋಡಿಲ್ಲ. ಕಲಾಪದಲ್ಲಿ ಯಾವುದೇ ವಿಷಯಗಳು ಚರ್ಚೆಯಾಗಿಲ್ಲ. ಚರ್ಚೆ ಮಾಡಲು ನಮ್ಮ ವಿರೋಧ ಪಕ್ಷಗಳು ಹಾಗು ಆಡಳಿತ ಪಕ್ಷಗಳು ಅವಕಾಶ ಮಾಡಿಕೊಟ್ಟಿಲ್ಲ ಎಂದರು.
ಆಡಳಿತ, ವಿಪಕ್ಷಗಳು ಒಂದು ನಿಲುವಿಗೆ ಬಂದು ಸದನ ನಡೆಯುವಂತೆ ನೋಡಿಕೊಳ್ಳಬೇಕು. ನಾನು ಯಾರ ಮೇಲೂ ತಪ್ಪು ಹೊರಿಸಲು ಹೋಗಲ್ಲ ಎಂದರು. ರಾಜ್ಯಸಭೆಯಲ್ಲಿ ಮಾತನಾಡುವ ಅವಕಾಶ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ರೈತರ ಸಮಸ್ಯೆಗಳ ಬಗ್ಗೆ ಮಾತನಾಡುತ್ತೇನೆ ಎಂದರು.