ಬೆಂಗಳೂರು:ಡ್ರಗ್ಸ್ ಮಾಫಿಯಾ ವಿಚಾರದಲ್ಲಿ ಪೊಲೀಸರು ಸರ್ಕಾರದ ಕೈಗೊಂಬೆಗಳಾಗಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಈ ಬಗ್ಗೆ ನಾನು ನಾನು ಪೊಲೀಸರ ಬಳಿ ಮಾತನಾಡಿದಾಗ ಕೆಲವರು ಸಿಗ್ತಾನೇ ಇಲ್ಲ ಅಂತಿದ್ದಾರೆ. ಎ1 ಆರೋಪಿಯನ್ನೇ ಬಂಧಿಸಿಲ್ಲ. ಸರ್ಕಾರ ಎಲ್ಲೋ ಪ್ರಭಾವ ಬೀರುತ್ತಿರಬಹುದು. ಪೊಲೀಸರು ಸರ್ಕಾರದ ಕೈಗೊಂಬೆಗಳಾಗಿದ್ದಾರೆ. ಸರ್ಕಾರದ ಅಣತಿಯಂತೆ ನಡೆದುಕೊಳ್ತಿದ್ದಾರೆ. ನಾವಿದ್ದಾಗ ಸಿಐಡಿ, ಸಿಸಿಬಿ, ಎಸಿಬಿ ತನಿಖೆಗೆ ಕೊಡಬೇಡಿ ಅಂತಿದ್ರು. ಸಿಬಿಐಗೆ ಕೊಡಿ ಅಂತ ಹೇಳುತ್ತಿದ್ರು. ಈಗ ಸಿಬಿಐ ಬಗ್ಗೆ ಅವರಿಗೆ ಬಾಯಿಬರ್ತಿಲ್ಲ. ಹೈಕೋರ್ಟ್ ಸಿಟ್ಟಿಂಗ್ ಜಡ್ಜ್ ಮೂಲಕ ತನಿಖೆ ನಡೆಯಬೇಕು. ಇದೇ ನಮ್ಮ ಒತ್ತಾಯ ಎಂದರು.
ವಿಜಯೇಂದ್ರ ಡಿಫ್ಯಾಕ್ಟೋ ಸಿಎಂ:ಯಡಿಯೂರಪ್ಪ ಪುತ್ರ ವಿಜಯೇಂದ್ರ ಡಿಫ್ಯಾಕ್ಟೋ ಚೀಪ್ ಮಿನಿಸ್ಟರ್ ಆಗಿದ್ದಾರೆ ಎಂದು ಇದೇ ವೇಳೆ ಕಿಡಿ ಕಾರಿದರು. ಯಡಿಯೂರಪ್ಪ ಚೀಫ್ ಮಿನಿಸ್ಟರ್. ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸೋಕೆ ವಿಜಯೇಂದ್ರ ಯಾರು? ಆರೋಗ್ಯ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರು ಇಲ್ವೇ? ಇದರ ಬಗ್ಗೆ ಸದನದಲ್ಲಿ ಮಾತನಾಡ್ತೇನೆ. ಸದನದಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ನಾವು ಎಲ್ಲದಕ್ಕೂ ಸಿದ್ಧತೆ ನಡೆಸಿದ್ದೇವೆ. ಮೆಡಿಕಲ್ ಕಿಟ್, ಕಾಯ್ದೆಗಳ ಬಗ್ಗೆ ಪ್ರಸ್ತಾಪ ಮಾಡುತ್ತೇವೆ ಎಂದು ತಿಳಿಸಿದರು.
ಬೆಂಗಳೂರು ಅಭಿವೃದ್ಧಿ ಕಾಣ್ತಾ ಇಲ್ಲ:ಬೆಂಗಳೂರಿನಲ್ಲಿ ಅಭಿವೃದ್ಧಿ ಕೆಲಸ ನಡೆಯುತ್ತಿದ್ಯಾ? ಶಿವಾನಂದ ಸರ್ಕಲ್ ಫ್ಲೈ ಓವರ್ ಇನ್ನೂ ಪೂರ್ಣಗೊಂಡಿಲ್ಲ. ಎರಡು ವರ್ಷದಿಂದ ಹಾಗೇ ಇದೆ. 55 ಸಾವಿರ ಕೋಟಿ ಸಾಲ ಮಾಡ್ತೇವೆ ಅಂತ ಬಜೆಟ್ನಲ್ಲಿ ಹೇಳಿದ್ರು. ಅದರ ಮೇಲೆ ಹೆಚ್ಚು 33 ಸಾವಿರ ಕೋಟಿ ರೂ. ಸಾಲ ಪಡೆಯುತ್ತಿದ್ದಾರೆ. ಇದರ ಭಾರ ಎಲ್ಲರ ಮೇಲೂ ಹಾಕಿ ಹೋಗ್ತಾರೆ ಎಂದರು.