ಬೆಂಗಳೂರು :ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕ್ಷೇತ್ರ ಆಯ್ಕೆ ವಿಚಾರದಲ್ಲಿ ಒಂದು ಅಂತಿಮ ನಿಲುವಿಗೆ ಬಂದಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ನಡುವೆ 2023ರ ಚುನಾವಣೆ ನನ್ನ ಕಡೆಯ ಚುನಾವಣೆ ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಮತದಾರರನ್ನು ಭಾವನಾತ್ಮಕವಾಗಿ ಸೆಳೆಯುವ ಪ್ರಯತ್ನ ಸಹ ಆಗಿದೆ ಎನ್ನಲಾಗುತ್ತಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ಹಾಗೂ ಬಾಗಲಕೋಟೆ ಜಿಲ್ಲೆಯ ಬಾದಾಮಿ ವಿಧಾನಸಭಾ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸಿದ್ದರು. ತವರು ಜಿಲ್ಲೆಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುಂಟಾಯಿತು. ಬಾದಾಮಿ ಮತದಾರರು ಕೈಹಿಡಿದಿದ್ದರು. ಆದರೆ, ಈ ಸಾರಿ ತಾವು ಕ್ಷೇತ್ರ ಬಿಟ್ಟುಕೊಡುವುದಿಲ್ಲ ಎಂದು ಮಾಜಿ ಸಚಿವ ಬಿ ಬಿ ಚಿಮ್ಮನಕಟ್ಟಿ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದಾರೆ.
ಇತ್ತ, ತುಂಬಾ ಕಡಿಮೆ ಅಂತರದ ಮತಗಳಿಂದ ಕಳೆದ ಸಾರಿ ಗೆದ್ದಿದ್ದ ಸಿದ್ದರಾಮಯ್ಯಗೆ ಕ್ಷೇತ್ರ ಸಹ ದೂರವಾಗಿದೆ. ಈ ಸಾರಿ ಕ್ಷೇತ್ರ ಬದಲಿಸುವ ಚಿಂತನೆ ನಡೆಸಿದ್ದರು. ಸದ್ಯ ತಾವು ಬಾದಾಮಿಯಿಂದಲೇ ಸ್ಪರ್ಧಿಸುವುದಾಗಿ ಹೇಳಿಕೊಂಡರೂ ಸಹ ಇವರ ನಿರೀಕ್ಷೆ ಬೆಂಗಳೂರು ನಗರದ ಚಾಮರಾಜಪೇಟೆ ಇಲ್ಲವೇ ಮೈಸೂರಿನ ತಮ್ಮ ಹಿಂದಿನ ಕ್ಷೇತ್ರವಾದ ಚಾಮುಂಡೇಶ್ವರಿ ಎಂದು ಹೇಳಲಾಗುತ್ತಿದೆ. ಇದಲ್ಲದೆ ತುಮಕೂರು ನಗರ ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಸ್ಪರ್ಧಿಸಲು ಸಿದ್ದರಾಮಯ್ಯಗೆ ಬೇಡಿಕೆಗಳು ಬರುತ್ತಿವೆ. ಆದರೆ, ಸಿದ್ದರಾಮಯ್ಯ ಮನಸ್ಸಿನಲ್ಲಿ ಏನಿದೆ ಹಾಗೂ ಅವರು ಎಲ್ಲಿಂದ ಸ್ಪರ್ಧಿಸಲು ಇಚ್ಚಿಸುತ್ತಿದ್ದಾರೆ ಎಂಬ ಬಗ್ಗೆ ಸ್ಪಷ್ಟನೆ ಇಲ್ಲವಾಗಿದೆ.
ಚಾಮುಂಡೇಶ್ವರಿ ಅಂತಿಮವೇ? :ಸಿದ್ಧರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರವನ್ನು ತಮ್ಮ ಅಂತಿಮ ಆಯ್ಕೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಕಳೆದ ಸಾರಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಲ್ಲಿದ್ದ ಮಾಜಿ ಸಚಿವ ಹೆಚ್.ವಿಶ್ವನಾಥ್ ಹಾಗೂ ಹಾಲಿ ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ವಿರೋಧದ ಜತೆಗೆ ಸ್ಥಳೀಯ ಕಾಂಗ್ರೆಸ್ ನಾಯಕರ ವಿರೋಧ ಮತ್ತು ಜೆಡಿಎಸ್ ನಾಯಕರು ಪ್ರಬಲವಾಗಿ ತಮ್ಮ ಅಭ್ಯರ್ಥಿ ಜಿ ಟಿ ದೇವೇಗೌಡ ಪರ ಕೆಲಸ ಮಾಡಿದ್ದು ಸಿದ್ದರಾಮಯ್ಯಗೆ ದೊಡ್ಡ ಹಿನ್ನಡೆ ಉಂಟು ಮಾಡಿತ್ತು.
ಸ್ಥಳೀಯವಾಗಿ ಜಿ.ಟಿ. ದೇವೇಗೌಡ ನಿರ್ವಹಿಸಿದ ಕಾರ್ಯ ಜನಮೆಚ್ಚುಗೆ ಪಡೆದಿದ್ದು ಸಿದ್ದರಾಮಯ್ಯ ಸೋಲಿಗೆ ಕಾರಣವಾಗಿತ್ತು ಎಂದು ಎನ್ನಲಾಗುತ್ತಿದೆ. ಆದರೆ, ಈ ಸಾರಿ ಅಂತಹ ಪರಿಸ್ಥಿತಿ ಇಲ್ಲ. ಬಿಜೆಪಿ ಸೇರಿ ಸಂಸದರಾಗಿರುವ ಶ್ರೀನಿವಾಸ್ ಪ್ರಸಾದ್ ಹಾಗೂ ವಿಧಾನಪರಿಷತ್ ಸದಸ್ಯರಾಗಿರುವ ಹೆಚ್.ವಿಶ್ವನಾಥ್ ಪಕ್ಷದ ವಿರುದ್ಧವೇ ಮುನಿಸಿಕೊಂಡಿದ್ದಾರೆ. ಇನ್ನೊಂದೆಡೆ ಜಿ.ಟಿ.ದೇವೇಗೌಡ ಸಹ ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿ, ಸಿದ್ದರಾಮಯ್ಯಗೆ ಸಹಕರಿಸುವ ಸಾಧ್ಯತೆ ಇದೆ.