ಬೆಂಗಳೂರು : ಬೆಂಗಳೂರಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ನಾನಾ ಕಸರತ್ತು ನಡೆಸುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮತದಾರರನ್ನು ಮತಗಟ್ಟೆಗಳತ್ತ ಆಕರ್ಷಿಸಲು ಚುನಾವಣಾ ಆಯೋಗ ತಂತ್ರಜ್ಞಾನದ ಮೊರೆ ಹೋಗಿದೆ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಆ್ಯಪ್ ನ್ನು ಅಭಿವೃದ್ಧಿ ಪಡಿಸಿದೆ.
ಕರ್ನಾಟಕ ವಿಧಾನಸಭೆ 2023 ಚುನಾವಣೆ ನಾಳೆ ನಡೆಯಲಿದೆ. ನಾಳೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಇತ್ತ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವ ನಿಟ್ಟಿನಲ್ಲಿ ಚುನಾವಣಾ ಆಯೋಗ ನಾನಾ ಕಸರತ್ತು ನಡೆಸುತ್ತಿದೆ. ಅದರಲ್ಲೂ ಬೆಂಗಳೂರಲ್ಲಿ ಪ್ರತಿ ಬಾರಿಯೂ ಮತದಾರರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಕಳೆದ ಬಾರಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಕೇವಲ 55% ಆಗಿತ್ತು. ಪ್ರತಿ ಬಾರಿಯೂ ಬೆಂಗಳೂರು ಮತದಾನದ ಪ್ರಮಾಣ 55-57% ಆಸುಪಾಸಿನಲ್ಲೇ ಇರುತ್ತದೆ.
ಈ ಬಾರಿ ಬೆಂಗಳೂರು ವ್ಯಾಪ್ತಿಯಲ್ಲಿ 75% ಮತದಾನ ಆಗುವ ಗುರಿಯನ್ನು ಚುನಾವಣಾ ಆಯೋಗ ಹೊಂದಿದೆ. ಈ ನಿಟ್ಟಿನಲ್ಲಿ ಬಿಬಿಎಂಪಿ, ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ನಾನಾ ಕಸರತ್ತು ನಡೆಸುತ್ತಿದ್ದಾರೆ. ಜನಜಾಗೃತಿ ಜೊತೆಗೆ ಹಲವು ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅಷ್ಟೇ ಅಲ್ಲ, ಈ ಬಾರಿ ಒಂದು ಹೆಜ್ಜೆ ಮುಂದಿಟ್ಟ ಚುನಾವಣಾ ಆಯೋಗ ಬೆಂಗಳೂರಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ತಂತ್ರಜ್ಞಾನದ ಮೊರೆ ಹೋಗಿದೆ.
ಆ್ಯಪ್ ಮೂಲಕ ಮತದಾನ ಹೆಚ್ಚಳಕ್ಕೆ ತಂತ್ರ : ಬೆಂಗಳೂರಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ತಂತ್ರಜ್ಞಾನದ ಮೊರೆ ಹೋಗಿದೆ. ಬಿಬಿಎಂಪಿ ಹಾಗೂ ಜಿಲ್ಲಾ ಚುನಾವಣಾ ಕಚೇರಿ ಜಂಟಿಯಾಗಿ ಮತಗಟ್ಟೆಯಲ್ಲಿನ ಸರತಿಸಾಲಿನ ಬಗ್ಗೆ ನೈಜ ಸಮಯವನ್ನು ತಿಳಿಯಲು ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿಪಡಿಸಿದೆ. 'ಚುನಾವಣಾ' ಆ್ಯಪ್ ಅಪ್ಲಿಕೇಷನ್ ಮೂಲಕ ಮತಗಟ್ಟೆಯಲ್ಲಿನ ಸರತಿ ಸಾಲಿನ ಬಗ್ಗೆ ನೈಜ ಸಮಯವನ್ನು ತಿಳಿಯುವ ವ್ಯವಸ್ಥೆಯನ್ನು ಮಾಡಿದೆ.
ಈ ಆ್ಯಪ್ ಮತಗಟ್ಟೆಗಳ ಲೊಕೇಷನ್, ಮತಗಟ್ಟೆಗಳತ್ತ ನೇವಿಗೇಷನ್, ಅಭ್ಯರ್ಥಿಗಳ ಮಾಹಿತಿ, ಮತಗಟ್ಟೆ ಅಧಿಕಾರಿಗಳ ಮಾಹಿತಿ, ಮತಗಟ್ಟೆಯಲ್ಲಿನ ಸರತಿ ಸಾಲಿನ ಮಾಹಿತಿಯನ್ನು ವಾಸ್ತವ ಸಮಯದ ಆಧಾರದಲ್ಲಿ ನೀಡುತ್ತದೆ. ಅದರ ಜೊತೆಗೆ ಮತಗಟ್ಟೆಯಲ್ಲಿನ ಪಾರ್ಕಿಂಗ್ ಜಾಗಗಳ ಬಗ್ಗೆಯೂ ಮಾಹಿತಿ ನೀಡಲಿದೆ ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.