ಬೆಂಗಳೂರು: ಶಾಲಾ ಶಿಕ್ಷಕರನ್ನ ಮತಗಟ್ಟೆ ಮಟ್ಟದ ಅಧಿಕಾರಿ, ಬಿಎಲ್ಒದಂತಹ ಕರ್ತವ್ಯಗಳಿಂದ ವಿಮುಕ್ತಿಗೊಳಿಸಿ ಎಂದು ಪ್ರಾಥಮಿಕ ಮತ್ತು ಪ್ರೌಢ
ಶಿಕ್ಷಣ ಸಚಿವ ಸುರೇಶ್ ಕುಮಾರ್ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ ಮೊದಲಿನಿಂದಲೂ ಶಿಕ್ಷಕರನ್ನು ಮತಗಟ್ಟೆ ಮಟ್ಟದ ಅಧಿಕಾರಿಗಳು, ಚುನಾವಣೆ ಕರ್ತವ್ಯ, ಮತದಾರ ಚೀಟಿಗೆ ಹೆಸರು ನೊಂದಾಯಿಸುವುದು ಸೇರಿದಂತೆ ಹಲವಾರು ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಆದರೆ ಇತ್ತೀಚೆಗೆ ಶಿಕ್ಷಕರಿಗೆ ಬೋಧಕೇತರವಾದ ಇಂತಹ ಹಲವಾರು ಕರ್ತವ್ಯಗಳು ಹೆಚ್ಚಾಗುತ್ತಿರುವುದರಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ. ಇದರಿಂದ ವಿದ್ಯಾರ್ಥಿ ಸಮೂಹಕ್ಕೆ ಪರೋಕ್ಷವಾಗಿ ಹೊಡೆತ ಬೀಳುವಂತಾಗಿದೆ. ಹಾಗೆಯೇ ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ನಿಗಾವಹಿಸಲು ಹಾಗೂ ಶಾಲಾ ಚುಟುವಟಿಕೆಗಳ ಮೇಲೆ ಪೂರ್ಣ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಇದು ಶಿಕ್ಷಣದ ಗುಣಮಟ್ಟ ಕುಸಿಯಲು ಕಾರಣವಾಗುತ್ತಿದೆ. ಯಾವುದೇ ಸಮಾಜ ಹಾಗೂ ರಾಷ್ಟ್ರದ ಅಭಿವೃದ್ಧಿಯಲ್ಲಿ ಗುಣಮಟ್ಟದ ಶಿಕ್ಷಣದ ಪಾತ್ರ ಪ್ರಮುಖವಾಗಿರುತ್ತದೆ.