ಬೆಂಗಳೂರು:2020-21ನೇ ಸಾಲಿನ ಪಠ್ಯ ಪುಸ್ತಕಗಳು ರೆಡಿಯಾಗಿದ್ದು, ಕೂಡಲೇ ಸಂಪೂರ್ಣ ಹಣವನ್ನು ಪಾವತಿಸಿ ಪಠ್ಯ ಪುಸ್ತಕಗಳನ್ನು ಪಡೆಯುವಂತೆ ಶಿಕ್ಷಣ ಇಲಾಖೆ ಖಾಸಗಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಿಗೆ ಒತ್ತಡ ಹಾಕುತ್ತಿದೆ ಎಂದು ಖಾಸಗಿ ಅನುದಾನರಹಿತ ಶಾಲೆಗಳ ರಾಜ್ಯ ಸಂಘಟನೆ ಕಾರ್ಯದರ್ಶಿ ಶಶಿಕುಮಾರ್, ಶಿಕ್ಷಣ ಇಲಾಖೆಯ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ ಇಲಾಖೆಯಿಂದ ಖಾಸಗಿ, ಅನುದಾನ ರಹಿತ ಶಾಲೆಗಳ ಮೇಲೆ ದೌರ್ಜನ್ಯ; ಆರೋಪ
ಮುಂಬರುವ ಶೈಕ್ಷಣಿಕ ವರ್ಷದ ಪುಸ್ತಕಗಳನ್ನು ಕೊಳ್ಳುವಂತೆ ಶಿಕ್ಷಣ ಇಲಾಖೆ ಒತ್ತಡ ಹಾಕುತ್ತಿದೆ ಎಂದು ಖಾಸಗಿ ಅನುದಾನರಹಿತ ಶಾಲೆಗಳ ರಾಜ್ಯ ಸಂಘಟನೆ ಕಾರ್ಯದರ್ಶಿ ಆರೋಪಿಸಿದ್ದು, ಇಲಾಖೆಯ ನಡೆಗೆ ಅಸಮಾಧಾನ ಹೊರಹಾಕಿದ್ದಾರೆ.
100 ಪರ್ಸೆಂಟ್ ಹಣ ನೀಡಿ ಪುಸ್ತಕ ತೆಗೆದುಕೊಂಡು ಹೋಗಿ. ಈಗ ತೆಗೆದುಕೊಂಡು ಹೋಗಿಲ್ಲ ಅಂದರೆ ಮುಂದೆ ಅದಕ್ಕೆ ನೀವೇ ಜವಾಬ್ದಾರಿ ಎನ್ನುತ್ತಿದ್ದಾರೆ. ಕೊರೊನಾ ಸಂಕಷ್ಟದಲ್ಲಿ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಶಿಕ್ಷಣ ಇಲಾಖೆಯ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಇವತ್ತಿನ ಪರಿಸ್ಥಿತಿಯಲ್ಲಿ ಎಷ್ಟು ಮಕ್ಕಳು ಉಳಿಯುತ್ತಾರೆ. ಎಷ್ಟು ಮಕ್ಕಳು ಯಾವ ಶಾಲೆಗೆ ಹೋಗುತ್ತಾರೆ ಎಂಬುದೇ ಗೊತ್ತಿಲ್ಲ. ಅಡ್ಮಿಶನ್ಗಳು ಸಹ ಆಗುತ್ತಿಲ್ಲ. ಇದಲ್ಲದೆ ಪೋಷಕರಿಗೆ ಒತ್ತಡ ಹಾಕಬೇಡಿ ಎಂದು ಶಿಕ್ಷಣ ಇಲಾಖೆಯೇ ಹೇಳುತ್ತಿದೆ. ಇನ್ನೊಂದೆಡೆ ಪುಸ್ತಕ ತೆಗೆದುಕೊಳ್ಳಿ ಅಂತಲೂ ಹೇಳುತ್ತಿದೆ. ಈಗ ಪುಸ್ತಕ ಕೊಳ್ಳಲು ಒಂದೊಂದು ಶಾಲೆ 5-6 ಲಕ್ಷ ರೂ. ಹಣ ಕಟ್ಟಬೇಕಿದೆ. ಇದಲ್ಲದೆ ಆರ್ಟಿಇ ಹಣ ಕೂಡ ಮರುಪಾವತಿ ಆಗಿಲ್ಲ ಎಂದಿದ್ದಾರೆ.