ಕರ್ನಾಟಕ

karnataka

ETV Bharat / state

ನಾನು 10 ದಿನ ಮಾತಾಡಬಲ್ಲೆ..ಅಯ್ಯೋ ನಾನು ವರ್ಷವೆಲ್ಲ ಮಾತಾಡ್ತೀನಿ..ಅಸೆಂಬ್ಲಿಯಲ್ಲಿ ಸಿದ್ದು-ಹೆಚ್​ಡಿಕೆ 'ಈಗಲ್​​ಟನ್​​' ಜಟಾಪಟಿ

ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ಬಿಡದಿಯ ಈಗಲ್‌ಟನ್ ರೆಸಾರ್ಟ್‌ ವಿವಾದವನ್ನು ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವೆ ಮಾತಿನ ಚಕಮಕಿ ನಡೆಯಿತು.

By

Published : Mar 10, 2022, 4:26 PM IST

Updated : Mar 10, 2022, 6:10 PM IST

ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವೆ ಮಾತಿನ ಜಟಾಪಟಿ
ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವೆ ಮಾತಿನ ಜಟಾಪಟಿ

ಬೆಂಗಳೂರು: ಬಿಡದಿ ಬಳಿಯ ಈಗಲ್‌ಟನ್ ರೆಸಾರ್ಟ್​ನ ವಿವಾದ, ಜಮೀನು ದರ ನಿಗದಿ ವಿಚಾರ ವಿಧಾನಸಭೆಯಲ್ಲಿ ಇಂದು ಪ್ರತಿಧ್ವನಿಸಿತು. ಈ ವಿಷಯ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಡುವೆ ಜಟಾಪಟಿಗೆ ಕಾರಣವಾಯಿತು.

ಬಜೆಟ್ ಮೇಲಿನ ಚರ್ಚೆ ಮುಂದುವರೆಸಿ ಮಾತನಾಡಿದ ಕುಮಾರಸ್ವಾಮಿ, ಈಗಲ್‌ಟನ್ ರೆಸಾರ್ಟ್ ಒತ್ತುವರಿ ಮಾಡಿಕೊಂಡಿರುವ ಜಮೀನಿಗೆ ನ್ಯಾಯಾಲಯದ ಆದೇಶದಂತೆ ದರ ನಿಗದಿ ಮಾಡುವ ವಿಚಾರದಲ್ಲಿ ಅವ್ಯವಹಾರ ನಡೆದಿದೆ ಎಂದು ಹೇಳಿದರು. ಅಲ್ಲದೇ ಈಗಲ್‌ಟನ್ ರೆಸಾರ್ಟ್‌ನ ಭೂಮಿ ಒತ್ತುವರಿ ವಿಚಾರ, ನ್ಯಾಯಾಲಯದ ಆದೇಶ, ಸರ್ಕಾರದ ತೀರ್ಮಾನ ಎಲ್ಲವನ್ನೂ ಎಳೆಎಳೆಯಾಗಿ ಸದನದಲ್ಲಿ ಬಿಚ್ಚಿಟ್ಟರು. ಈ ವಿಚಾರದಲ್ಲಿ 982 ಕೋಟಿ ರೂ. ಅಕ್ರಮ ನಡೆದಿದೆ. ದಕ್ಷ ಮತ್ತು ಪಾರದರ್ಶಕ ಆಡಳಿತ ನಡೆಸಿದ್ದೇವೆ ಎಂದು ಹೇಳುತ್ತಿರುವವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ವ್ಯಂಗ್ಯವಾಡಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಅಕ್ರಮವಾಗಿದ್ದರೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ. ಯಾರೇ ಪರ್ಸಂಟೇಜ್ ತೆಗೆದುಕೊಂಡಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಮುಖ್ಯಮಂತ್ರಿಯವರಿಗೆ ಒತ್ತಾಯಿಸಿದರು.

ಹೆಚ್​ಡಿಕೆ- ಸಿದ್ದರಾಮಯ್ಯ ನಡುವೆ ಮಾತಿನ ಚಕಮಕಿ

ನೀವು ಕೂಡ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು. ಬಜೆಟ್ ಮೇಲೆ ಚರ್ಚೆ ಮಾಡಬೇಕಾಗಿದ್ದ ಸಂದರ್ಭದಲ್ಲಿ ಅನಗತ್ಯವಾಗಿ ಈ ವಿಷಯ ಪ್ರಸ್ತಾಪಿಸುತ್ತಿರುವ ಉದ್ದೇಶವಾದರೂ ಏನು? ಯಾರೇ ತಪ್ಪಿತಸ್ಥರಿದ್ದರೂ ಕ್ರಮ ಕೈಗೊಳ್ಳಲು ನಾನು ಆಗ್ರಹಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ರಾಜಕೀಯಕ್ಕಾಗಿ ನೀವು ಈ ರೀತಿ ಮಾತನಾಡುತ್ತಿದ್ದೀರಿ. ಈ ಬಗ್ಗೆ ತನಿಖೆಯಾಗಲಿ, ಯಾರು ಕಮಿಷನ್ ಪಡೆದಿದ್ದಾರೆ, ಯಾರು ಯಾರ ಪರವಾಗಿದ್ದಾರೆ ಎಲ್ಲವೂ ಹೊರಬರಲಿ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ದಯಮಾಡಿ ತನಿಖೆಗೆ ಆದೇಶಿಸಿ ಎಂದು ಆಗ್ರಹಿಸಿದರು.

ನಿಮ್ಮದೇ ಕ್ಷೇತ್ರ, ನಿಮ್ಮ ಗಮನಕ್ಕೆ ಬರಲಿಲ್ಲವೆ?. ನೀವು ಮುಖ್ಯಮಂತ್ರಿಯಾಗಿದ್ದಾಗ ಯಾಕೆ ಈ ಸಮಸ್ಯೆ ಇತ್ಯರ್ಥ ಮಾಡಲಿಲ್ಲ. ರಾಜಕೀಯ ಮಾಡುತ್ತಿದ್ದೀರಾ. ನಮಗೂ ಎಲ್ಲ ಗೊತ್ತಿದೆ. ತನಿಖೆ ಮಾಡಿ ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಈ ವೇಳೆ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ನಡುವೆ ಆರೋಪ, ಪ್ರತ್ಯಾರೋಪಗಳು ನಡೆದು, ಸದನದಲ್ಲಿ ಕಾವೇರಿದ ವಾತಾವರಣ ಉಂಟಾಯಿತು. ತನಿಖೆಯಾಗಲಿ ಬಿಡಿ, ತನಿಖೆ ಮಾಡಿಸಿ ಎಂದು ಪದೇ ಪದೇ ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ:ಐದು ರಾಜ್ಯಗಳ ಚುನಾವಣಾ ಫಲಿತಾಂಶ : ರಾಜ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ ಎಂದ ಬಿಜೆಪಿ

ನಮ್ಮ ಸರ್ಕಾರದ ಕಾಲದಲ್ಲೇ ಈಗಲ್‌ಟನ್ ರೆಸಾರ್ಟ್‌ನ ಒತ್ತುವರಿ ಭೂಮಿಗೆ 982 ಕೋಟಿ ರೂ. ನಿಗದಿಯಾಗಿದ್ದು, ಎಲ್ಲವೂ ನ್ಯಾಯಾಲಯದ ಆದೇಶಗಳಂತೆ ನಡೆದಿದೆ. ಒಳಒಪ್ಪಂದದ ರಾಜಕೀಯ ಮಾಡುತ್ತಿದ್ದೀರಿ ಎಂದು ಸಿದ್ದರಾಮಯ್ಯ ನೇರವಾಗಿ ಕುಮಾರಸ್ವಾಮಿ ಮತ್ತು ಆಡಳಿತರೂಢಾ ಬಿಜೆಪಿಯವರನ್ನು ಟೀಕಿಸಿದರು. ಆಗ ಕುಮಾರಸ್ವಾಮಿ ಅವರು ಮಧ್ಯಪ್ರವೇಶಿಸಿ, ದಾಖಲೆ ಇಲ್ಲದೆ ನಾನು ಏನು ಮಾತನಾಡುವುದಿಲ್ಲ. ತನಿಖೆ ಮಾಡಲಿ ಎಂದು ಹೇಳಿದರು.

ಪರಿಶೀಲಿಸಿ ಕ್ರಮ:ಈ ಹಂತದಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಈಗಲ್‍ಟನ್ ರೆಸಾರ್ಟ್‍ನಲ್ಲಿ ಸರ್ಕಾರಿ ಭೂಮಿ ಕಬಳಿಕೆ ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸದ್ಯ ಈ ಪ್ರಕರಣ ಸುಪ್ರೀಂಕೋರ್ಟ್ ವಿಚಾರಣಾ ಹಂತದಲ್ಲಿದ್ದು, ಈ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಬೇಕೆ, ಬೇಡವೆ ಎಂಬ ಬಗ್ಗೆ ಕಾನೂನು ಇಲಾಖೆ ಹಾಗೂ ಅಡ್ವೊಕೇಟ್ ಜನರಲ್ ಅವರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಈ ಬಗ್ಗೆ ನಾನು ಎಲ್ಲವನ್ನೂ ಅಧ್ಯಯನ ಮಾಡಬೇಕಾಗಿದೆ. ನ್ಯಾಯಾಲಯದ ಆದೇಶಗಳೇನು ಎಲ್ಲವನ್ನೂ ನೋಡಬೇಕು. ಹಾಗೆಯೇ ಕಾನೂನನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾನೂನು ತಜ್ಞರ ಜತೆ ಚರ್ಚಿಸಿ ಅಕ್ರಮಗಳು ಏನೇ ಇದ್ದರೂ ನ್ಯಾಯಾಲಯದ ಆದೇಶಗಳಿಗೆ ಧಕ್ಕೆಯಾಗದಂತೆ ಮುಂದಿನ ಕ್ರಮಗಳನ್ನು ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ ಎಂದರು.

ಈಗಲ್ ಟನ್ ರೆಸಾರ್ಟ್ ಅವ್ಯವಹಾರಗಳ ಬಗ್ಗೆ ಕುಮಾರಸ್ವಾಮಿ ಅವರಿಂದಲೂ ಸಂಪೂರ್ಣ ಮಾಹಿತಿ ದಾಖಲೆಗಳನ್ನು ಪಡೆಯುತ್ತೇನೆ. ಸರ್ಕಾರದಲ್ಲಿರುವ ದಾಖಲೆಗಳನ್ನು ಪರಿಶೀಲಿಸುತ್ತೇನೆ. ನ್ಯಾಯಾಲಯದ ಆದೇಶಗಳನ್ನು ನೋಡುತ್ತೇನೆ. ಹಾಗೆಯೇ ಸಚಿವ ಸಂಪುಟದಲ್ಲಿ ಆಗಿರುವ ತೀರ್ಮಾನ ಎಲ್ಲವನ್ನು ನೋಡಿ, ಎಚ್ಚರಿಕೆಯಿಂದ ತೀರ್ಮಾನ ಮಾಡುವುದಾಗಿ ಸಿಎಂ ತಿಳಿಸಿದರು.

ಕುಮಾರಸ್ವಾಮಿ ಅವರು ಸದನದಲ್ಲಿ ಈ ಹಗರಣದ ವಿವರಣೆ ಇಟ್ಟಿದ್ದಾರೆ. ಈ ಬಗ್ಗೆ ಮಾಧ್ಯಮಗಳಲ್ಲೂ ಈ ಹಿಂದೆ ಕೆಲವು ವಿಚಾರಗಳು ಬಂದಿವೆ. ಎಲ್ಲ ಮಾಹಿತಿಗಳನ್ನು ಪಡೆದು ನಂತರ ತೀರ್ಮಾನ ಮಾಡುವುದಾಗಿ ಹೇಳಿ, ತನಿಖೆ ನಡೆಸಬೇಕೆಂಬ ಸಿದ್ದರಾಮಯ್ಯ ರವರ ಬೇಡಿಕೆ ಬಗ್ಗೆ ಸ್ಪಷ್ಟವಾಗಿ ಉತ್ತರ ನೀಡಲಿಲ್ಲ.

ಮುಂದುವರೆದ ಜಟಾಪಟಿ: ಮುಖ್ಯಮಂತ್ರಿಗಳ ಮಾತಿನ ನಂತರವೂ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರ ನಡುವೆ ಮಾತಿನ ಜಟಾಪಟಿ ಮುಂದುವರೆದಿತ್ತು.

ಕೊನೆಗೆ ಸಭಾಧ್ಯಕ್ಷರು ಸಮಯ ಮೀರುತ್ತಿದೆ. ಬೇಗ ಮಾತನ್ನು ಮುಗಿಸಿ ಎಂದು ಹೇಳುವ ಮೂಲಕ ಕಾವೇರಿದ ಚರ್ಚೆಗೆ ತೆರೆ ಎಳೆಯಲು ಮುಂದಾದರು. ಆಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ಬಗ್ಗೆ ಒಂದು ಸಮಗ್ರ ತನಿಖೆ ನಡೆಸಿ ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದಾಗ ಈ ಚರ್ಚೆ ಕೊನೆಗೊಂಡಿತು.

Last Updated : Mar 10, 2022, 6:10 PM IST

ABOUT THE AUTHOR

...view details