ಬೆಂಗಳೂರು :ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರೀಕರ ನೋಂದಣಿ (ಎನ್ಆರ್ಸಿ) ಕುರಿತು ಬೀದರ್ ಶಾಹೀನ್ ಶಾಲೆಯ ಮಕ್ಕಳು ನಾಟಕ ಪ್ರದರ್ಶನ ಮಾಡಿದ್ದ ಕುರಿತಂತೆ ಶಾಲೆಯ ಆಡಳಿತ ಮಂಡಳಿಯ ನಾಲ್ವರ ವಿರುದ್ಧ ದಾಖಲಿಸಿದ್ದ ದೇಶದ್ರೋಹ ಪ್ರಕರಣವನ್ನು ಹೈಕೋರ್ಟ್ ರದ್ದು ಮಾಡಿದೆ. ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಶಾಹೀನ್ ಶಾಲೆಯ ಮುಖ್ಯಸ್ಥರಾದ ಅಲ್ಲಾವುದ್ದೀನ್, ಅಬ್ದುಲ್ ಖಾಲೀಕ್, ಮೊಹಮ್ಮದ್ ಬಿಲಾಲ್ ಇನಾಂದರ್ ಮತ್ತು ಮೊಹಮ್ಮದ್ ಮೆಹ್ತಾಬ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ್ಗೌಡರ್ ಅವರ ನೇತೃತ್ವದ ಏಕಸದಸ್ಯ ಪೀಠವು ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ. ಆದೇಶದ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ. ಸಾಮಾಜಿಕ ಕಾರ್ಯಕರ್ತ ನೀಲೇಶ್ ರಕ್ಷ್ಯಾಲ್ ಎಂಬವರು ದಾಖಲಿಸಿದ್ದ ದೂರಿನ ಮೇರೆಗೆ ಬೀದರ್ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಶಾಹೀನ್ ಶಾಲೆಯ ಆಡಳಿತ ಮಂಡಳಿಯ ನಾಲ್ವರು ಆರೋಪಿಗಳ ವಿರುದ್ಧ ದೇಶದ್ರೋಹದ ಆರೋಪದ ಅಡಿ ಪ್ರಕರಣ ದಾಖಲಿಸಲಾಗಿತ್ತು.
ಹೈಕೋರ್ಟ್ ಆದೇಶದಲ್ಲೇನಿದೆ:ಪ್ರಧಾನ ಮಂತ್ರಿಯ ವಿರುದ್ಧ ಶಾಹೀನ್ ಬಾಗ್ ಶಾಲೆಯ ಮಕ್ಕಳ ಹೇಳಿಕೆಗಳು ಅವಹೇಳನಾಕಾರಿ ಹಾಗೂ ಬೇಜಾವ್ದಾರಿಯಾಗಿದೆ. ಈ ರೀತಿಯ ಹೇಳಿಕೆಗಳನ್ನು ದೇಶದ್ರೋಹ ಎಂದು ಹೇಳಲಾಗದು. ಸರ್ಕಾರದ ನೀತಿಗಳನ್ನು ರಚನಾತ್ಮಕವಾಗಿ ಟೀಕಿಸುವುದಕ್ಕೆ ಅವಕಾಶವಿದೆ. ಆದರೆ, ನೀತಿ ನಿರ್ಧಾರಗಳನ್ನು ಕೈಗೊಳ್ಳವಂತಹ ಸಾಂವಿಧಾನಿಕ ಹುದ್ದೆಗಳನ್ನು ಅವಮಾನಿಸುವುದಕ್ಕೆ ಅವಕಾಶವಿಲ್ಲ.
ಪ್ರಕರಣದಲ್ಲಿ ಕೇಂದ್ರ ಸರ್ಕಾರ ಜಾರಿ ಮಾಡಿರುವ ವಿವಿಧ ಕಾಯಿದೆಗಳನ್ನು ಟೀಕಿಸಲಾಗಿದೆ. ಈ ಕಾಯಿದೆಗಳು ಜಾರಿಯಾದಲ್ಲಿ ಮುಸ್ಲೀಮರ ದೇಶವನ್ನು ತೊರೆಯಬೇಕಾಗುತ್ತದೆ ಎಂದು ಆರೋಪಿಸಲಾಗಿದೆ. ಆದರೆ, ಇದರಲ್ಲಿ ಹಿಂಸಾಚಾರ ಮತ್ತು ಸಾರ್ವಜನಿಕ ಆಸ್ವಸ್ಥತೆಗೆ ಪ್ರಚೊಧನೆ ನೀಡುವಂತಹ ಅಂಶಗಳಿಲ್ಲ. ಜೊತೆಗೆ, ಈ ನಾಟಕವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ಸಾರ್ವಜನಿಕರನ್ನು ಪ್ರಚೋದನೆ ನೀಡಲಾಗಿದೆ ಎಂಬ ಅಂಶ ಹೇಳಲಾಗುವುದಿಲ್ಲ ಎಂದು ಪೀಠ ತಿಳಿಸಿದೆ.
ಶಾಲಾ ಆಡಳಿತ ಮಂಡಳಿಗೆ ಕಿವಿಮಾತು:ಮಕ್ಕಳಲ್ಲಿ ಶಿಕ್ಷಣ ಸಂಬಂಧಿಸಿದ ಸೃಜನಶೀಲ ವಿಷಯಗಳ ಕುರಿತ ಜ್ಞಾನ ಮತ್ತು ತಂತ್ರಜ್ಞಾನವನ್ನು ವೃದ್ಧಿಸುವಂತಹ ನಾಟಕಗಳ ಪ್ರದರ್ಶನಕ್ಕೆ ಅವಕಾಶ ನೀಡಬೇಕು. ಆದರೆ, ಸರ್ಕಾರವನ್ನು ಟೀಕಿಸುವುದಕ್ಕೆ ಅವಕಾಶ ನೀಡಬಾರದು. ವಿದ್ಯಾರ್ಥಿಯಾಗಿದ್ದಾಗಲೇ ಈ ರೀತಿಯಲ್ಲಿ ಟೀಕೆ ಮಾಡುವುದಕ್ಕೆ ಅವಕಾಶ ನೀಡಿದಲ್ಲಿ ಮಕ್ಕಳ ಮನಸ್ಸು ಕಲ್ಮಶವಾಗಲಿದೆ ಎಂದು ಪೀಠ ಸಲಹೆ ನೀಡಿದೆ.