ಕರ್ನಾಟಕ

karnataka

ಮದ್ಯ ವ್ಯಸನಿಗಳಿಗೆ ಖ್ಯಾತ ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ್ ಸಲಹೆ

ಖ್ಯಾತ ಮನೋವೈದ್ಯ ಡಾ. ಸಿ.ಆರ್‌.ಚಂದ್ರಶೇಖರ್ ಅವರು, ಕೊರೊನಾ ಪೀಡಿತರಂತೆಯೇ ಮದ್ಯ ವ್ಯಸನಿಗಳ ಸಮಸ್ಯೆ ಕೂಡ ಮೆಡಿಕಲ್ ಎಮರ್ಜೆನ್ಸಿ. ಅಗತ್ಯ ಚಿಕಿತ್ಸೆ ನೀಡಿದರೆ ಮಾತ್ರ ಈ ಸಮಸ್ಯೆ ಸರಿಪಡಿಸಲು ಸಾಧ್ಯ ಎಂದಿದ್ದಾರೆ.

By

Published : Apr 6, 2020, 7:54 PM IST

Published : Apr 6, 2020, 7:54 PM IST

Dr. Allen, renowned psychiatrist for alcohol addiction. C.R. Advice by Chandrasekhar
ಮದ್ಯ ವ್ಯಸನಿಗಳಿಗೆ ಖ್ಯಾತ ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ್ ಸಲಹೆ

ಬೆಂಗಳೂರು:ಕೊರೊನಾ ತಡೆಗಟ್ಟುವ ಹಿನ್ನೆಲೆಯಲ್ಲಿ, ಮದ್ಯ ಮಾರಾಟ ನಿಲ್ಲಿಸಿರುವ ಕಾರಣ ಸಾವಿರಾರು ಮದ್ಯ ವ್ಯಸನಿಗಳಲ್ಲಿ ವಿತ್‌ಡ್ರಾವಲ್ ಎಫೆಕ್ಟ್ ಕಾಣಿಸಿಕೊಂಡಿದೆ. ಪರಿಣಾಮ ರಾಜ್ಯದಲ್ಲಿ ಕೊರೊನಾ ವೈರಸ್‌ಗೆ ಸಾವನ್ನಪ್ಪಿದ ಜನರಿಗಿಂತ ಮದ್ಯ ಸಿಗದೆ ಮೃತಪಟ್ಟವರ ಸಂಖ್ಯೆಯೇ ಹೆಚ್ಚಾಗಿದೆ.

ಮದ್ಯ ವ್ಯಸನಿಗಳಿಗೆ ಖ್ಯಾತ ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ್ ಸಲಹೆ

ಪೊಲೀಸ್ ವರದಿಗಳ ಪ್ರಕಾರ ಮದ್ಯ ಸಿಗದೇ ರಾಜ್ಯಾದ್ಯಂತ ಈವರೆಗೆ ಆತ್ಮಹತ್ಯೆಗೆ ಶರಣಾದವರ ಸಂಖ್ಯೆ ಇಪ್ಪತ್ತಕ್ಕೂ ಹೆಚ್ಚಿದೆ. ಈ ಕುರಿತು ಖ್ಯಾತ ಮನೋವೈದ್ಯ ಡಾ. ಸಿ.ಆರ್‌.ಚಂದ್ರಶೇಖರ್ ಅವರನ್ನ ಕೇಳಿದರೆ ಕೊರೊನಾ ಪೀಡಿತರಂತೆಯೇ ಮದ್ಯ ವ್ಯಸನಿಗಳ ಸಮಸ್ಯೆ ಕೂಡ ಮೆಡಿಕಲ್ ಎಮರ್ಜೆನ್ಸಿ. ಅಗತ್ಯ ಚಿಕಿತ್ಸೆ ನೀಡಿದರೆ ಮಾತ್ರ ಈ ಸಮಸ್ಯೆ ಸರಿಪಡಿಸಲು ಸಾಧ್ಯ ಎನ್ನುತ್ತಾರೆ.

ಅವರದೇ ಮಾತುಗಳಲ್ಲಿ ವಿವರಿಸುವುದಾದರೆ, ನಮ್ಮ ರಾಜ್ಯದಲ್ಲಿ ಮದ್ಯ ಸೇವಿಸುವ ಜನರಲ್ಲಿ ಶೇಕಡಾ 20 ರಷ್ಟು ಮಂದಿ ಚಟಕ್ಕೆ ದಾಸರಾಗಿದ್ದಾರೆ. ಇವರಿಗೆ ಏನು ಸಿಗದಿದ್ದರೂ ಪರವಾಗಿಲ್ಲ, ಮದ್ಯ ಸಿಕ್ಕರೆ ಸಾಕು. ಇವರ ಪ್ರಕಾರ ಮದ್ಯ ಸೇವನೆಯಿಂದ ದುಃಖ ಮರೆಯಬಹುದು, ಖುಷಿಪಡಬಹುದು, ನೋವು ಕಮ್ಮಿಯಾಗುತ್ತದೆ, ಹೃದಯಕ್ಕೆ ಒಳ್ಳೆಯದು ಎಂಬೆಲ್ಲ ನಂಬಿಕೆಗಳಿಗೆ. ಇವು ಜನರೇ ಸೃಷ್ಟಿಸಿಕೊಂಡಿರುವ ಮಿಥ್ಯೆ. ಆದರೆ ವಾಸ್ತವವಾಗಿ ಆಲ್ಕೋಹಾಲ್ ಸೇವನೆಯಿಂದ ಯಾವ ಪ್ರಯೋಜನವೂ ಇಲ್ಲ. ಸಾಮಾನ್ಯವಾಗಿ ವ್ಯಸನಿಗಳಿಗೆ ಸಿಗುತ್ತಿದ್ದ ಮದ್ಯ ಏಕಾಏಕಿ ನಿಂತುಹೋದಾಗ ಅವರಲ್ಲಿ ವಿತ್‌ಡ್ರಾವಲ್ ಎಫೆಕ್ಟ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಮದ್ಯ, ಸಿಗರೇಟ್, ತಂಬಾಕು ಅಥವಾ ಯಾವುದೇ ಮಾದರಿಯ ಮಾದಕ ವಸ್ತುಗಳ ಚಟ ಇದ್ದವರು ಸೇವನೆಯನ್ನು ಹಠಾತ್ ನಿಲ್ಲಿಸಿದಾಗ ಅವರಲ್ಲಿ ಕಾಣಿಸಿಕೊಳ್ಳುವ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನೇ ವಿತ್‌ಡ್ರಾವೆಲ್ ಎಫೆಕ್ಟ್ ಎನ್ನುತ್ತಾರೆ.ಇಂತಹ ಸಂದರ್ಭದಲ್ಲಿ ವ್ಯಸನಿಗಳ ಮನಸ್ಸಿನಲ್ಲಿ ಮದ್ಯದ ಕುರಿತು ಅದಮ್ಯ ಬಯಕೆ ಶುರುವಾಗುತ್ತದೆ. ಯಾವಾಗ ಹಾಲ್ಕೋಹಾಲ್ ಬೇಕೇಬೇಕು ಎಂಬ ಮನಸ್ಥಿತಿ ದೃಢವಾಗುತ್ತಾ ಹೋಗುತ್ತದೆಯೋ ಆಗ ದೈಹಿಕ ಮತ್ತು ಮಾನಸಿಕ ಚಡಪಡಿಕೆಗಳು ಮಿತಿ ಮೀರುತ್ತವೆ. ಮೈಕೈನೋವು, ತಲೆ ನೋವು, ಕೈಕಾಲು ನಡುಗುವುದು, ನಿದ್ರೆ ಬರದಿರುವುದು, ಊಟ ಸೇರದಿರುವ ಲಕ್ಷಣಗಳು ಮೇಲ್ನೋಟಕ್ಕೆ ಕಾಣುತ್ತವೆ. ವ್ಯಸನಿಗಳಲ್ಲಿ ಮದ್ಯದ ಮೇಲಿನ ಸೆಳೆತೆ ಯಾವ ಮಟ್ಟಕ್ಕೆ ಬೇಕಾದರೂ ಹೋಗಬಹುದು.

ಮದ್ಯಂಗಡಿಗೆ ಕನ್ನ ಹಾಕುವುದು, ಮದ್ಯ ಹುಡುಕಿಕೊಂಡು ಹತ್ತಿಪ್ಪತ್ತು ಕಿ.ಮೀ ದೂರು ನಡೆದುಹೋಗುವುದು ಸೇರಿದಂತೆ ಯಾವುದೇ ಅಪಾಯಕಾರಿ ಕೆಲಸಕ್ಕೂ ಇವರು ಕೈಹಾಕುತ್ತಾರೆ. ಚಟ ಬಿಡಿಸಲು ಯಾವುದೇ ನಿರ್ದಿಷ್ಟ ಔಷಧ ಇಲ್ಲ. ಆದರೆ ವಿತ್ರಾಡವಲ್ ಎಫೆಕ್ಟ್‌ಗೆ ಟ್ರ್ಯಾಂಕ್ಯುಲೈಜಸ್‌ ನಂತಹ ಸೂಕ್ತ ಚಿಕಿತ್ಸೆ ನೀಡಿದರೆ ಮದ್ಯ ವ್ಯಸನಿಗಳು ಮಾನಸಿಕ, ದೈಹಿಕ ಸಂಕಟ ಅನುಭವಿಸುವುದು ಅಥವಾ ಆತ್ಮಹತ್ಯೆ ಕಡೆಗೆ ಯೋಚಿಸುವುದು ಅಥವಾ ಯತ್ನಿಸುವುದು ತಡೆಯಬಹುದಾಗಿದೆ. ವಿತ್‌ಡ್ರಾವಲ್ ಶಮನಕಾರಿ ಔಷಧಗಳನ್ನು ಅಗತ್ಯ ಪ್ರಮಾಣದಲ್ಲಿ ನೀಡಿದರೆ ಇಂತಹ ಚಡಪಡಿಕೆ ಕಡಿಮೆಯಾಗುತ್ತದೆ.

ಈ ಚಿಕಿತ್ಸೆಯನ್ನು ಯಾವುದೇ ಸಾಮಾನ್ಯ ವೈದ್ಯರ ಬಳಿಯೂ ಪಡೆಯಬಹುದು. ಆರಂಭದಲ್ಲೇ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಿಸಿದರೆ ಯಾವುದೇ ಸಮಸ್ಯೆ ಆಗುವುದಿಲ್ಲ. ವಿತ್‌ಡ್ರಾವಲ್ ಎಫೆಕ್ಟ್‌ ನ ಲಕ್ಷಣಗಳು ಆರಂಭದಲ್ಲಿ ವಿಪರೀತ ಇರುತ್ತವೆ. ಹೀಗಾಗಿಯೇ ಮದ್ಯ ಸಿಗದಿದ್ದಾಗ ಇವರು ಎರಡು ರೀತಿ ವರ್ತಿಸುತ್ತಾರೆ. ಕೆಲವರು ಹೊರಗಿನವರ ಮೇಲೆ ದಾಳಿ ಮಾಡುತ್ತಾರೆ. ಕೆಲವರು ತಮ್ಮ ಮೇಲೆಯೇ ಅಸಹನೆ ಹೆಚ್ಚಿಸಿಕೊಂಡು ಆತ್ಮಹತ್ಯೆ ಹಾದಿ ಹಿಡಿಯುತ್ತಾರೆ. ಆದ್ದರಿಂದ ವ್ಯಸನಿಗಳನ್ನು ಅಪಹಾಸ್ಯ ಮಾಡದೆ ಅನುಕಂಪದಿಂದ ಅವರಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಬೇಕು. ಜತೆಗೊಂದಿಷ್ಟು ಕೌನ್ಸೆಲಿಂಗ್ ಮೂಲಕ ಮಾನಸಿಕವಾಗಿ ಸದೃಢಗೊಳಿಸಬೇಕು.

ಇವರಿಗೆ ಸರಿಯಾದ ಚಿಕಿತ್ಸೆ ನೀಡಿದರೆ ಮೂರು ದಿನಗಳಿಂದ ವಾರದ ಒಳಗೆ ಈ ಸಮಸ್ಯೆಯಿಂದ ಹೊರಬರುತ್ತಾರೆ. ವಿತ್‌ಡ್ರಾವೆಲ್ ಎಫೆಕ್ಟ್‌ನ ಸಮಸ್ಯೆ ಹೆಚ್ಚೆಂದರೆ ಹತ್ತು ದಿನ ಮಾತ್ರ ಇರುತ್ತದೆ. ಹೀಗಾಗಿ ಮದ್ಯ ವ್ಯಸನಿಗಳನ್ನು ಅಪಹಾಸ್ಯ ಮಾಡುವುದರ ಬದಲು, ಚಿಕಿತ್ಸೆ ನೀಡಬೇಕು. ಮದ್ಯಕ್ಕೆ ಅಥವಾ ಬೇರಿನ್ನಾವುದೇ ಮಾದಕ ವಸ್ತುವಿನ ದಾಸ್ಯಕ್ಕೆ ಸಿಲುಕಿರುವ ವ್ಯಕ್ತಿಗಳು ಚಟಮುಕ್ತರಾಗಲು ಇದೊಂದು ಸುವರ್ಣಾವಕಾಶ ಎಂದು ಭಾವಿಸಿ ಅಗತ್ಯ ಚಿಕಿತ್ಸೆ ಪಡೆದುಕೊಂಡರೆ ಎಲ್ಲರಿಗೂ ಒಳ್ಳೆಯದು ಎನ್ನುತ್ತಾರೆ ಡಾ. ಸಿ.ಆರ್. ಚಂದ್ರಶೇಖರ್.

ABOUT THE AUTHOR

...view details