ಬೆಂಗಳೂರು: ಯಾವುದೇ ಪಕ್ಷದವರಾಗಲಿ, ಜನರು ಆಯಾ ಕ್ಷೇತ್ರದ ಶಾಸಕರ ಬಳಿ ಹೋಗಿ ತಮಗಾಗಿರುವ ಅನ್ಯಾಯವನ್ನು ಕೇಳುತ್ತಾರೆ. ಮಹಿಳೆಯರು ಸಮಸ್ಯೆ ಹೇಳಿಕೊಳ್ಳಲು ಬಂದಾಗ ಅದನ್ನು ಕೇಳದಿರುವುದು ಸಮಂಜಸವಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿನ ಸದಾಶಿವನಗರದ ನಿವಾಸದಲ್ಲಿ ಮಾತನಾಡಿದ ಅವರು, ಸಚಿವ ಅರವಿಂದ್ ಲಿಂಬಾವಳಿ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದರು. ನಾನು ಕೂಡ ರಾಮನಗರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದಾಗ ಜನರು ಅವರ ಸಮಸ್ಯೆ, ದುಃಖವನ್ನು ಹೇಳಿಕೊಂಡರು. ಜನರ ಕಷ್ಟ ಕೇಳುವ ತಾಳ್ಮೆ ಇಲ್ಲವಾದರೆ ಅವರು ಶಾಸಕರಾಗಿರಲು ಅರ್ಹರಲ್ಲ ಎಂದು ಟೀಕಿಸಿದರು.
ಉದ್ಯೋಗ ಸೃಷ್ಟಿ ಮಾಡುವ ಮೂಲಕ ಸರ್ಕಾರಕ್ಕೆ ನೆರವು ನೀಡುತ್ತಿದ್ದ ಕಂಪನಿಗಳು ಇಂದು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಹೊರವಲಯ ರಿಂಗ್ ರೋಡ್ ಕಂಪನಿಗಳ ಸಂಘದವರು ಸರಕಾರಕ್ಕೆ ಪತ್ರ ಬರೆದು ತಮಗಾದ ತೊಂದರೆ, ನಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ. ಇದೇ ರೀತಿ ರಾಜ್ಯದ ಬಹುತೇಕ ಭಾಗಗಳಲ್ಲಿ ಆಗಿದೆ ಎಂದು ಹೇಳಿದರು.