ಕರ್ನಾಟಕ

karnataka

ETV Bharat / state

ಯಾವುದೇ ಬಣ ರಾಜಕೀಯವಿಲ್ಲ, ನಾವೆಲ್ಲ ಒಂದೇ ಬಣ: ಸಭೆ ನಡೆಸಿ ಒಗ್ಗಟ್ಟಿನ ಮಂತ್ರ ರವಾನಿಸಿದ ಸಿದ್ದು-ಡಿಕೆಶಿ

ಕಾಂಗ್ರೆಸ್​ನಲ್ಲಿ ಉಂಟಾಗಿದ್ದ ಆಂತರಿಕ ಭಿನ್ನಮತ ಗೊಂದಲ ನಿವಾರಣೆಗೆ ಬೆಂಗಳೂರಿನ ಸದಾಶಿವನಗರದಲ್ಲಿ ಡಿನ್ನರ್​ ಸಭೆ ನಡೆಸಲಾಯಿತು. ಎಲ್ಲರೂ ಭಾಗಿಯಾಗುವ ಮೂಲಕ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.

By

Published : Jul 17, 2021, 1:12 AM IST

dk shivakumar
dk shivakumar

ಬೆಂಗಳೂರು:ಕಾಂಗ್ರೆಸ್​ ಪಕ್ಷದಲ್ಲಿನರಾಜಕೀಯ ವಿದ್ಯಮಾನಗಳ ಮೇಲಿನ‌ ಸಭೆಯ ನೆಪದಲ್ಲಿ ಡಿನ್ನರ್ ಸಭೆ ನಡೆಸುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮಧ್ಯೆ ಯಾವುದೇ ಬಿರುಕು ಇಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಸದಾಶಿವನಗರದ ಡಿ.ಕೆ.ಸುರೇಶ್ ನಿವಾಸದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಆಯೋಜಿಸಿದ್ದ ಸಭೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ. ನಮ್ಮಲ್ಲಿ ಯಾವುದೇ ಬಿರುಕು ಇಲ್ಲ. ನಮ್ಮಲ್ಲಿ ಯಾವುದೇ ಬಣ ರಾಜಕೀಯವಿಲ್ಲ. ನಮ್ಮದು ಒಂದೇ ಬಣ ಎಂಬ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.‌

ಒಗ್ಗಟ್ಟಿನ ಮಂತ್ರ ರವಾನಿಸಿದ ಡಿಕೆಶಿ

ಇತ್ತೀಚೆಗೆ ಸಿಎಂ ಅಭ್ಯರ್ಥಿ ವಿಚಾರವಾಗಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಬಣಗಳ ಮಧ್ಯೆ ಒಡಕು ಉಂಟಾಗಿದೆ ಎಂಬ ಸಂದೇಶ ಪಕ್ಷ ಕಾರ್ಯಕರ್ತರಲ್ಲಿ ಮೂಡಿತ್ತು. ಸಿದ್ದರಾಮಯ್ಯ ನಮ್ಮ ಮುಂದಿನ ಸಿಎಂ ಎಂದು ಹೇಳುವ ಮೂಲಕ ಶಾಸಕ‌ ಜಮೀರ್ ಅಹಮ್ಮದ್ ಕಾಂಗ್ರೆಸ್​ನಲ್ಲೂ ನಾಯಕತ್ವದ ಕಿಚ್ಚು ಹಚ್ಚಿದ್ದರು. ಇದರಿಂದ ಡಿಕೆಶಿ ಬಣ ಅಸಮಾಧಾನಗೊಂಡಿತ್ತು. ಸಿದ್ದರಾಮಯ್ಯ ಹಾಗೂ ಡಿಕೆಶಿ ಬಣಗಳ ಮಧ್ಯೆ ಬಿರುಕು ಉಂಟಾಗಿತ್ತು. ಸಿಎಂ ಸ್ಥಾನದ ಪೈಪೋಟಿ ವಿಚಾರವನ್ನ ಹೈಕಮಾಂಡ್ ಗಂಭೀರವಾಗಿ ತೆಗೆದುಕೊಂಡಿತ್ತು. ಈಗಲೇ ಸಿಎಂ ಅಭ್ಯರ್ಥಿ ಬಗ್ಗೆ ಚರ್ಚೆ ಒಳ್ಳೆಯದಲ್ಲ. ಆ ಬಗ್ಗೆ ಚುನಾವಣೆ ಆದ ಬಳಿಕ ಹೈಕಮಾಂಡ್ ನಿರ್ಧರಿಸುತ್ತದೆ. ಈ ತರಹದ ಹೇಳಿಕೆಗಳಿಂದ ತಪ್ಪು ಸಂದೇಶ ರವಾನೆಯಾಗಲಿದ್ದು, ಪಕ್ಷಕ್ಕೆ ಹಿನ್ನಡೆಯಾಗಲಿದೆ.‌ ಹೀಗಾಗಿ ಇಬ್ಬರೂ ಒಟ್ಟಾಗಿ ಕೆಲಸ ಮಾಡುವಂತೆ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಉಭಯ ನಾಯಕರಿಗೆ ಸೂಚಿಸಿದ್ದರು.

ಇದನ್ನೂ ಓದಿರಿ: ಸಂಸತ್‌ ಅಧಿವೇಶನ: 15 ಮಸೂದೆಗಳಿಗೆ ಅಂಗೀಕಾರ ಪಡೆಯಲು ಕೇಂದ್ರದ ಚಿಂತನೆ

ಅದರ‌ ಫಲವಾಗಿ ಬಿಬಿಎಂಪಿ ಚುನಾವಣೆ ಹಾಗೂ ರಾಜಕೀಯ ವಿದ್ಯಾಮಾನ ಮೇಲಿನ ಚರ್ಚೆ ನೆಪದಲ್ಲಿ ಡಿಕೆಶಿ ಸದಾಶಿವನಗರ ನಿವಾಸದಲ್ಲಿ ಡಿನ್ನರ್ ಸಭೆ ಏರ್ಪಡಿಸಿದರು.‌ ಆ ಸಭೆಗೆ ಪ್ರಮುಖವಾಗಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಆಹ್ವಾನ ನೀಡಿದರು.‌ ಸಭೆಯ ಮೂಲಕ ಸಿದ್ದರಾಮಯ್ಯ-ಡಿಕೆಶಿ ಮಧ್ಯೆ ಯಾವುದೇ ವೈಮನಸ್ಸು ಇಲ್ಲ. ನಾವಿಬ್ಬರೂ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶವನ್ನು ಕಾರ್ಯಕರ್ತರಿಗೆ ರವಾನಿಸಿದಂತಾಗಿದೆ. ಅಲ್ಲಿಗೆ ಇಬ್ಬರ ನಡುವಿನ ಮುಸುಕಿನ ಗುದ್ದಾಟ ಸದ್ಯಕ್ಕೆ ಸುಖಾಂತ್ಯವಾಗಿರುವಂತೆ ಕಂಡು ಬರುತ್ತಿದೆ.

ಸಭೆ ನಡೆಸಿ ಒಗ್ಗಟ್ಟಿನ ಮಂತ್ರ ರವಾನಿಸಿದ ಸಿದ್ದು-ಡಿಕೆಶಿ

ಮುಂದಿನ ವಾರ ಡಿಕೆಶಿ-ಸಿದ್ದರಾಮಯ್ಯ ದೆಹಲಿ ಪ್ರಯಾಣ

ಮುಂದಿನ ವಾರ ಡಿಕೆಶಿ ಮತ್ತು ಸಿದ್ದರಾಮಯ್ಯ ದೆಹಲಿಗೆ ಹೋಗಲಿದ್ದು, ಇದರ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಮಾಹಿತಿ ಹಂಚಿಕೊಂಡರು. ನಮ್ಮಲ್ಲಿ ಯಾವುದೇ ಬಣ ರಾಜಕೀಯವಿಲ್ಲ. ನಾವೆಲ್ಲ ಒಂದೇ ಬಣ‌ ಎಂದು ತಿಳಿಸಿದ್ದಾರೆ. ಡಿನ್ನರ್ ಸಭೆ ಬಳಿಕ ಮಾತನಾಡಿದ ಅವರು, ಬೆಂಗಳೂರು ಕರ್ನಾಟಕ ರಾಜ್ಯದ ಹೃದಯ. ಬೆಂಗಳೂರಿನಲ್ಲಿ ರಾಜ್ಯದ ಮೂಲೆ ಮೂಲೆಯಿಂದ ಬಂದು ವಾಸಿಸುತ್ತಿದ್ದಾರೆ. ರಾಜ್ಯ ಸರ್ಕಾರ ಬೆಂಗಳೂರು ನಿರ್ಲಕ್ಷ್ಯ ಮಾಡ್ತಿದೆ. ಬೆಂಗಳೂರಿಗೆ ಉತ್ತಮ ಆಡಳಿತ ನೀಡಬೇಕಿದೆ. ಬೆಂಗಳೂರು ಕೇಂದ್ರವಾಗಿಟ್ಟುಕೊಂಡು ಚರ್ಚೆ ಮಾಡಲಾಗುತ್ತಿದೆ. ಭ್ರಷ್ಟಾಚಾರ ನಡೆಯುತ್ತಿದೆ. ಬೆಂಗಳೂರು ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಆದ್ಯತೆ ನೀಡಲಾಗುತ್ತದೆ. 28 ಕ್ಷೇತ್ರದಲ್ಲೂ ನಾಯಕರು ಪ್ರವಾಸ ಮಾಡಲಿದ್ದೇವೆ ಎಂದರು.

ಕಾಂಗ್ರೆಸ್ ಪಾರ್ಟಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿದೆ. ಈ ಸರ್ಕಾರದಲ್ಲಿ ನಿರ್ದಿಷ್ಟವಾದ ಕಾರ್ಯಕ್ರಮವಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್​ಗೆ ಬಹಿರಂಗ ಆಹ್ವಾನ ನೀಡುತ್ತೇನೆ. ನಮ್ಮ ಸರ್ಕಾರದ ಅಭಿವೃದ್ಧಿ ಬಗ್ಗೆ ಚರ್ಚೆಗೆ ಸಿದ್ಧ. ನಾನೇ ಚರ್ಚೆಗೆ ಬರುತ್ತೇನೆ. ನಮ್ಮ ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಚರ್ಚೆಗೆ ನಾನು ಸಿದ್ಧ ಎಂದು ಸವಾಲು ಹಾಕಿದರು. ಜಮೀರ್ ಅಹಮದ್ ಕಾರ್ಯಕ್ರಮಕ್ಕೆ ಗೈರು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕೆಲವರು ಬೆಂಗಳೂರಿನಲ್ಲಿ ಇಲ್ಲ. ಬಿ.ಕೆ.ಹರಿಪ್ರಸಾದ್, ಹ್ಯಾರೀಸ್ ಸೇರಿದಂತೆ ಹಲವರು ಹೊರಗಡೆ ಇದ್ದಾರೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.

ಸುಮಾರು ಮೂರು ತಾಸಿಗೂ ಹೆಚ್ಚು ಕಾಲ ಸದಾಶಿವನಗರದಲ್ಲಿನ ಸಂಸದ ಡಿ.ಕೆ.ಸುರೇಶ್ ನಿವಾಸದಲ್ಲಿ ಬೆಂಗಳೂರು ಜನಪ್ರತಿನಿಧಿಗಳ ಸಭೆ ನಡೆಯಿತು. ಮಾಜಿ ಸಿಎಂ ಸಿದ್ದರಾಮಯ್ಯ ಸಭೆಗೆ ಆಗಮಿಸಿದ್ದರು. ಇನ್ನು ಶಾಸಕ ಜಮೀರ್ ಅಹಮ್ಮದ್, ಹ್ಯಾರೀಸ್ ಹೊರತು ಪಡಿಸಿ ಎಲ್ಲಾ ಬೆಂಗಳೂರು ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದರು. ಅಖಂಡ ಶ್ರೀನಿವಾಸ್ ಮೂರ್ತಿ ಹಾಗೂ ಮಾಜಿ ಮೇಯರ್ ಸಂಪತ್ ರಾಜ್ ಕೂಡ ಸಭೆಯಲ್ಲಿ ಭಾಗಿಯಾಗಿದ್ದು, ವಿಶೇಷವಾಗಿತ್ತು. ಡಿ.ಜೆ.ಹಳ್ಳಿ ಗಲಾಟೆ ಬಳಿಕ ಇಬ್ಬರೂ ಮುಖಾಮುಖಿಯಾಗಿರುವುದು ಇದೇ ಮೊದಲಾಗಿದೆ.

ABOUT THE AUTHOR

...view details