ಬೆಂಗಳೂರು: ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ 75ನೇ ಅಮೃತ ಮಹೋತ್ಸವದ ಕಾರ್ಯಕ್ರಮದ ಅಂಗವಾಗಿ ಇಂದು ನಗರದಲ್ಲಿ ಪೂರ್ವ ಸಿದ್ಧತಾ ಸಭೆ ನಡೆಯಿತು. ಸಭೆಯಲ್ಲಿ ಸಿದ್ದರಾಮಯ್ಯ, ಕೆ.ಎನ್ ರಾಜಣ್ಣ, ಎಂ.ಬಿ ಪಾಟೀಲ್, ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಕೆ.ಜೆ ಜಾರ್ಜ್, ಈಶ್ವರ ಖಂಡ್ರೆ, ಆರ್.ವಿ ದೇಶಪಾಂಡೆ, ಡಿ.ಕೆ ಸುರೇಶ್, ಯು.ಟಿ ಖಾದರ್ ಸೇರಿದಂತೆ ಬಹುತೇಕ ನಾಯಕರು ಭಾಗಿಯಾಗಿದ್ದರು. ಆದರೆ, ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೈರಾಗಿದ್ದರು.
ಬಿ.ಕೆ ಹರಿಪ್ರಸಾದ್ ನಿನ್ನೆ ದೆಹಲಿಗೆ ತೆರಳಿರುವ ಹಿನ್ನೆಲೆ ಸಭೆಯಲ್ಲಿ ಭಾಗಿಯಾಗಿರಲಿಲ್ಲ. ಆದರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬೆಂಗಳೂರಿನಲ್ಲೇ ಇದ್ದು ಸಭೆಗೆ ಆಗಮಿಸಿಲ್ಲ. ಆಗಸ್ಟ್ 15ರ ಪಾದಯಾತ್ರೆ ಸಂಬಂಧ ಕೆಪಿಸಿಸಿಯಲ್ಲಿ ಸಭೆ ಕರೆದಿದ್ದು, ಅದರಲ್ಲಿ ಭಾಗಿಯಾಗುತ್ತಿದ್ದೇನೆ. ಸಿದ್ದರಾಮಯ್ಯರ ಅಮೃತ ಮಹೋತ್ಸವ ಸಮಾರಂಭದಲ್ಲಿಯೇ ನೇರವಾಗಿ ಪಾಲ್ಗೊಳ್ಳುತ್ತೇನೆ ಎಂದು ಇಂದು ಮಾಧ್ಯಮಗಳಿಗೆ ತಿಳಿಸಿದ್ದರು.
ಮೂಲಗಳ ಪ್ರಕಾರ ಪೂರ್ವ ಸಿದ್ಧತಾ ಸಭೆ ಅವಶ್ಯಕತೆ ಇರಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಉಭಯ ನಾಯಕರು ಸಭೆಗೆ ಗೈರು ಆಗುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಡಿಕೆಶಿ ಸಹ ಇಂದು ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಇಂದು ರಾತ್ರಿ ದೆಹಲಿ ಪ್ರವಾಸ ಮಾಡಲಿರುವ ಡಿಕೆಶಿ ಎಐಸಿಸಿ ಕರೆದಿರುವ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸಿದ್ದರಾಮಯ್ಯ ಅಮೃತ ಮಹೋತ್ಸವವನ್ನು ಪಕ್ಷದ ವತಿಯಿಂದ ನಡೆಸುವುದಾಗಿ ಹೇಳಿದ್ದ ಡಿಕೆಶಿ ಇದೀಗ ಸಭೆಯಿಂದ ದೂರ ಉಳಿದಿರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.
ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಮಾತನಾಡಿ, ನಾವು ಎಂದೂ ಸಹ ಸಿದ್ದರಾಮೋತ್ಸವ ಎಂದು ಹೇಳಿಲ್ಲ. ಮಾಧ್ಯಮದಲ್ಲಿ ಬಂದಿದೆಯೋ ಗೊತ್ತಿಲ್ಲ. ಯಾರು ಏನೇ ಹೇಳಿದರು ಸಿದ್ದರಾಮೋತ್ಸವ ಎಂಬುದನ್ನ ನಾವು ಒಪ್ಪೋದಿಲ್ಲ. ಈ ಬಿಜೆಪಿಯವರು ತೀರಾ ಕೀಳು ಮಟ್ಟದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.