ಕರ್ನಾಟಕ

karnataka

ETV Bharat / state

ಯಲಹಂಕ ಪುಟ್ಟೇನಹಳ್ಳಿ ಕೆರೆ ಸಂರಕ್ಷಣೆಗೆ ಸಮಿತಿ ಪುನರ್ ರಚಿಸಲು ಹೈಕೋರ್ಟ್ ನಿರ್ದೇಶನ..

ಪಕ್ಷಿ ಸಂರಕ್ಷಣಾ ವಲಯವಾಗಿರುವ ಯಲಹಂಕ ಪುಟ್ಟೇನಹಳ್ಳಿ ಕೆರೆಯನ್ನು ಬಿಬಿಎಂಪಿಗೆ ಹಸ್ತಾಂತರಿಸಿರುವ ಕ್ರಮ ಪ್ರಶ್ನಿಸಿ‌ ಹೈಕೋರ್ಟ್​ಗೆ ತಕರಾರು ಅರ್ಜಿ ಸಲ್ಲಿಸಿರುವ ಸ್ಥಳೀಯರು, ಪಕ್ಷಿ ಸಂರಕ್ಷಿತ ವಲಯವನ್ನು ನಿರ್ವಹಣೆ ಮಾಡುವ ಕೌಶಲ್ಯ ಬಿಬಿಎಂಪಿಗೆ ಇಲ್ಲ. ಈ ಜವಾಬ್ದಾರಿಯನ್ನು ಅರಣ್ಯ ಇಲಾಖೆಯಷ್ಟೇ ನಿರ್ವಹಿಸಲು ಸಾಧ್ಯ..

By

Published : Jul 1, 2020, 10:45 PM IST

Bangalore
ಕೆರೆ ಸಂರಕ್ಷಣೆಗೆ ಸಮಿತಿ ರಚಿಸಲು ಹೈಕೋರ್ಟ್ ನಿರ್ದೇಶನ

ಬೆಂಗಳೂರು :ಯಲಹಂಕದ ಪುಟ್ಟೇನಹಳ್ಳಿ ಕೆರೆ ರಕ್ಷಣೆಗೆ ಮುಂದಿನ ಮೂರು ವಾರಗಳ ಒಳಗೆ ಸಂರಕ್ಷಣಾ ಸಮಿತಿಯನ್ನು ಪುನರ್‌ ರಚಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ವಿವಿಧ ಜಾತಿಯ ಪಕ್ಷಿಗಳ ಸಂರಕ್ಷಣಾ ಪ್ರದೇಶವಾಗಿರುವ ಯಲಹಂಕದ ಪುಟ್ಟೇನಹಳ್ಳಿ ಕೆರೆ ನಿರ್ವಹಣೆಯನ್ನು ಬಿಬಿಎಂಪಿಗೆ ವಹಿಸಿ ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಸ್ಥಳೀಯ ನಿವಾಸಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ ಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 36(ಬಿ) ಪ್ರಕಾರ ಅರಣ್ಯ ಇಲಾಖೆಯ ಇಬ್ಬರು ಅಧಿಕಾರಿಗಳು ಕೆರೆ ಸಂರಕ್ಷಣಾ ಸಮಿತಿಯಲ್ಲಿ ಸದಸ್ಯರಾಗಿರಬೇಕು. ಆದರೆ, ಯಲಹಂಕದ ಪುಟ್ಟೇನಹಳ್ಳಿ ಕೆರೆಯ ಸಂರಕ್ಷಣಾ ಸಮಿತಿಯಲ್ಲಿ ಅರಣ್ಯ ಇಲಾಖೆಯಿಂದ ಒಬ್ಬ‌ ಪ್ರತಿನಿಧಿ ಇದ್ದಾರೆ‌.‌ ರಾಜ್ಯದ ಮುಖ್ಯ ವನ್ಯಜೀವಿ ಪರಿಪಾಲಕರು ಸಮಿತಿಯ‌ ಮುಖ್ಯಸ್ಥರಾಗಿದ್ದುಕೊಂಡು ಅಗತ್ಯ ಸಲಹೆ ನೀಡಬೇಕು. ಆದರೆ, ಸಮಿತಿ ಈವರೆಗೆ ಒಂದೇ ಒಂದು ಸಭೆ ನಡೆಸಿದ್ದು, ಅದಕ್ಕೆ ಮುಖ್ಯಸ್ಥರೇ ಹಾಜರಾಗಿಲ್ಲ ಎಂದು ವಿವರಿಸಿರು.

ಹೇಳಿಕೆ ದಾಖಲಿಸಿಕೊಂಡ ಪೀಠ, ನಿಯಮಾನುಸಾರ ಮುಂದಿನ ಮೂರು ವಾರಗಳಲ್ಲಿ ಸಮಿತಿಯನ್ನು ಪುನರ್ ರಚನೆ ಮಾಡುವಂತೆ ಸರ್ಕಾರಕ್ಕೆ ನಿರ್ದೇಶಿಸಿತು. ಅಲ್ಲದೆ, ಕೆರೆಯನ್ನು ಬಿಬಿಎಂಪಿಗೆ ಹಸ್ತಾಂತರಿಸಿರುವ ನಗರಾಭಿವೃದ್ಧಿ ಇಲಾಖೆ ಆದೇಶಾನುಸಾರ ಪಾಲಿಕೆ ಯಾವುದೇ ಕ್ರಮ ಜರುಗಿಸಬಾರದು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.

ಪ್ರಕರಣದ ಹಿನ್ನೆಲೆ :ಪಕ್ಷಿ ಸಂರಕ್ಷಣಾ ವಲಯವಾಗಿರುವ ಯಲಹಂಕ ಪುಟ್ಟೇನಹಳ್ಳಿ ಕೆರೆಯನ್ನು ಬಿಬಿಎಂಪಿಗೆ ಹಸ್ತಾಂತರಿಸಿರುವ ಕ್ರಮ ಪ್ರಶ್ನಿಸಿ‌ ಹೈಕೋರ್ಟ್​ಗೆ ತಕರಾರು ಅರ್ಜಿ ಸಲ್ಲಿಸಿರುವ ಸ್ಥಳೀಯರು, ಪಕ್ಷಿ ಸಂರಕ್ಷಿತ ವಲಯವನ್ನು ನಿರ್ವಹಣೆ ಮಾಡುವ ಕೌಶಲ್ಯ ಬಿಬಿಎಂಪಿಗೆ ಇಲ್ಲ. ಈ ಜವಾಬ್ದಾರಿಯನ್ನು ಅರಣ್ಯ ಇಲಾಖೆಯಷ್ಟೇ ನಿರ್ವಹಿಸಲು ಸಾಧ್ಯ. ಆದ್ದರಿಂದ ಕೆರೆಯನ್ನು ಬಿಬಿಎಂಪಿಗೆ ಹಸ್ತಾಂತರಿಸಿರುವ ನಗರಾಭಿವೃದ್ಧಿ ಇಲಾಖೆ ಆದೇಶ ಮತ್ತು ಕೆರೆಯ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಪಾಲಿಕೆ ಕರೆದಿರುವ ಟೆಂಡರ್ ಆದೇಶವನ್ನು ರದ್ದುಪಡಿಸಬೇಕು ಎಂದು ಕೋರಿದ್ದಾರೆ.

ಹಾಗೆಯೇ, ಕೆರೆಗೆ ತಾಜ್ಯ ನೀರು ಸೇರದಂತೆ ಕ್ರಮ ಜರುಗಿಸಲು ಬೆಂಗಳೂರು ಜಲಮಂಡಳಿಗೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದ್ದಾರೆ.

ABOUT THE AUTHOR

...view details