ಕರ್ನಾಟಕ

karnataka

ETV Bharat / state

ನಿಮ್ಮಂತ ಅರ್ಥ ಸಚಿವರು ನಮ್ಮ ದೇಶದ ದೌರ್ಭಾಗ್ಯವಲ್ಲದೆ‌ ಮತ್ತೇನು?: ದಿನೇಶ್ ಗುಂಡೂರಾವ್​​ ಕಿಡಿ

ರಾಜ್ಯಕ್ಕೆ ಜಿಎಸ್​​​​ಟಿ ಪಾಲು ನೀಡದ ಕೇಂದ್ರ ಸರ್ಕಾರದ ನೀತಿಯ ವಿರುದ್ಧ ಕಾಂಗ್ರೆಸ್​ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದೆ. ಈ ವೇಳೆ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್​ ಸರಣಿ ಟ್ವೀಟ್ ಮಾಡಿ, ಸಚಿವೆ ನಿರ್ಮಲಾ ಸೀತಾರಾಮನ್​​ ವಿರುದ್ಧ ಕಿಡಿಕಾರಿದ್ದಾರೆ.

By

Published : Aug 29, 2020, 11:52 AM IST

dinesh-gundurao-on-minister-nirmala-sitharaman
ನಿಮ್ಮಂತ ಅರ್ಥ ಸಚಿವರು ನಮ್ಮ ದೇಶದ ದೌರ್ಭಾಗ್ಯವಲ್ಲದೆ‌ ಮತ್ತೇನು?: ದಿನೇಶ್ ಗುಂಡೂರಾವ್ ಕಿಡಿ

ಬೆಂಗಳೂರು:ಸಾಲ ಮಾಡಿ ಎಂದು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡುವ ಮೂಲಕ ಕೇಂದ್ರ ವಿತ್ತ ಸಚಿವೆ ವಿರುದ್ಧ ಅಸಮಾಧಾನ ಹೊರ ಹಾಕಿರುವ ದಿನೇಶ್ ಗುಂಡೂರಾವ್, ಇದ್ಯಾವ ಸೀಮೆಯ ಆರ್ಥಿಕ ನೀತಿ ಎಂದು ಪ್ರಶ್ನಿಸಿದ್ದಾರೆ.

ನಿರ್ಮಲಾ ಸೀತಾರಾಮನ್ ಅವರೇ ನಿಮ್ಮ ಸರ್ಕಾರ ರಾಜ್ಯಕ್ಕೆ ಬರಬೇಕಾಗಿದ್ದ 13,700 ಕೋಟಿ ಬಾಕಿಯನ್ನು ಇನ್ನೂ ಕೊಟ್ಟಿಲ್ಲ. ಬಾಕಿ ಹಣ ಪಾವತಿಸದೆ, ನ್ಯಾಯಯುತವಾಗಿ ಸಿಗಬೇಕಾದ ಪಾಲು ಕೊಡದೆ, ಸಾಲ ಮಾಡಿ ಎನ್ನುವ ನಿಮ್ಮಂತ ಅರ್ಥ ಸಚಿವರು ನಮ್ಮ ದೇಶದ ದೌರ್ಭಾಗ್ಯವಲ್ಲದೆ‌ ಮತ್ತೇನು? ಎಂದು ಕಿಡಿಕಾರಿದ್ದಾರೆ.

ನಿರ್ಮಲಾ ಸೀತಾರಾಮನ್ ‌ಅವರೇ ಇದ್ಯಾವ ಸೀಮೆಯ ಆರ್ಥಿಕ ನೀತಿ. ಜಿಎಸ್​​​​ಟಿ ಮೂಲಕ ಸಂಗ್ರಹವಾದ ದುಡ್ಡಿನಲ್ಲಿ ಆಯಾ ರಾಜ್ಯಗಳಿಗೆ ಪಾಲು ಕೊಡಬೇಕೆಂದು ಜಿಎಸ್​​ಟಿ ಕಾಯ್ದೆಯಲ್ಲೇ ಇಲ್ಲವೆ? ನಮಗೆ ಬರಬೇಕಾದ ಪಾಲು ಬಿಟ್ಟು ನಾವು ಸಾಲಕ್ಕಾಗಿ ಆರ್​​​​ಬಿಐ ಕೈ ಕಾಲು ಹಿಡಿಯಬೇಕೆ? ಎಂದು ಪ್ರಶ್ನೆ ಮಾಡಿ ಅಸಮಾಧಾನ ಹೊರ ಹಾಕಿದ್ದಾರೆ.

ರಾಜ್ಯದ ಪಾಲಿನ ಜಿಎಸ್​​ಟಿ ಮೊತ್ತ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ತೀವ್ರ ಅಸಮಾಧಾನ ಹೊರ ಹಾಕುತ್ತಿದ್ದು, ನಿನ್ನೆ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸುದೀರ್ಘ ಮಾಧ್ಯಮ ಪ್ರಕಟಣೆ ಹೊರಡಿಸುವ ಜೊತೆಗೆ ಕೇಂದ್ರದ ನಿಲುವನ್ನು ಖಂಡಿಸಿದ್ದರು. ಇದೀಗ ದಿನೇಶ್ ಗುಂಡೂರಾವ್ ಕೂಡ ಕೇಂದ್ರದ ವಿರುದ್ಧ ಗುಡುಗಿದ್ದಾರೆ.

ABOUT THE AUTHOR

...view details