ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜ್ಯಾದ್ಯಂತ ಬುಧವಾರ ನಾಮಪತ್ರ ಸಲ್ಲಿಕೆ ಜಾತ್ರೆ ಮುಂದುವರೆದಿತ್ತು. ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ರಾಜ್ಯಾದ್ಯಂತ ಬಹುತೇಕ ಅಭ್ಯರ್ಥಿಗಳು ನಿನ್ನೆಯೇ ನಾಮಪತ್ರ ಸಲ್ಲಿಕೆ ಮಾಡಿದರು. ಉಮೇದುವಾರಿಕೆ ಸಲ್ಲಿಸಿದ ಘಟಾನುಘಟಿಗಳ ವಿವರ ಇಲ್ಲಿದೆ..
ಗುರುವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಇಂದು ಅಮವಾಸ್ಯೆ ಇರುವ ಕಾರಣ ಬಹುತೇಕ ಅಭ್ಯರ್ಥಿಗಳು ನಿನ್ನೆಯೇ ನಾಮಪತ್ರ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಒಟ್ಟು 1,110 ನಾಮಪತ್ರ ಸಲ್ಲಿಕೆ ಮಾಡಲಾಗಿದೆ. ವಿವಿಧ ಪಕ್ಷಗಳ ಘಟಾನುಘಟಿಗಳು ಉಮೇದುವಾರಿಕೆ ಸಲ್ಲಿಕೆ ಮಾಡಿದ್ದಾರೆ. ಶಿಗ್ಗಾವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಬೃಹತ್ ಮೆರವಣಿಗೆ ಮೂಲಕ ತೆರಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ನಟ ಸುದೀಪ್ ಜೊತೆಗೂಡಿ ಮತ್ತೊಮ್ಮೆ ನಾಮಪತ್ರ ಸಲ್ಲಿಕೆ ಮಾಡಿದರು. ಇತ್ತ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ ಬೃಹತ್ ಮೆರವಣಿಗೆ ನಡೆಸಿ ಉಮೇದುವಾರಿಕೆ ಸಲ್ಲಿಸಿದರು. ಶಿಕಾರಿಪುರದಲ್ಲಿ ಬಿ ವೈ ವಿಜಯೇಂದ್ರ ತಮ್ಮ ತಂದೆ ಬಿ ಎಸ್ ಯಡಿಯೂರಪ್ಪ ಜೊತೆಗೂಡಿ ದೊಡ್ಡ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರು.
ಕೊರಟಗೆರೆಯಲ್ಲಿ ಡಾ. ಜಿ ಪರಮೇಶ್ವರ್, ನರಗುಂದದಲ್ಲಿ ಸಚಿವ ಸಿ ಸಿ ಪಾಟೀಲ್, ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಅಖಂಡ ಶ್ರೀನಿವಾಸ್ ಮೂರ್ತಿ ಅವರು ನಾಮಪತ್ರ ಸಲ್ಲಿಕೆ ಮಾಡಿದರು. ಚಾಮರಾಜಪೇಟೆ ಬಿಜೆಪಿ ಅಭ್ಯರ್ಥಿ ಭಾಸ್ಕರ್ ರಾವ್, ಗೋವಿಂದರಾಜು ನಗರ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾ ಕೃಷ್ಣ, ಸಚಿವ ಸುನಿಲ್ ಕುಮಾರ್ ಮೆರವಣಿಗೆ ಮೂಲಕ ತೆರಳಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು.