ಬೆಂಗಳೂರು :ಕೆಲ ದಿನಗಳಿಂದ ರಾಜ್ಯಾದ್ಯಂತ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಡೆಂಘೀ ಹಾಗೂ ಚಿಕೂನ್ ಗುನ್ಯಾ ಜ್ವರ ಪ್ರಕರಣ ಹೆಚ್ಚಾಗುತ್ತಿವೆ. ಕಳೆದ 15 ದಿನಗಳಲ್ಲಿ ಸುಮಾರು 776 ಮಂದಿಯಲ್ಲಿ ಜ್ವರ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಡೆಂಘೀ ಪ್ರಕರಣ ವರದಿಯಾಗಿವೆ. 16 ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ 100ರ ಗಡಿ ದಾಟಿದೆ. ಈ ವರ್ಷ ಮೊದಲ ಆರು ತಿಂಗಳ ಅವಧಿಯಲ್ಲಿ ಡೆಂಘೀ ನಿಯಂತ್ರಣದಲ್ಲಿತ್ತು. ಮಳೆ ಹೆಚ್ಚಳವಾದ ಬಳಿಕ ಪ್ರಕರಣಗಳು ಏರಿಕೆ ಪಡೆದಿವೆ. ಈ ವರ್ಷ ರಾಜಧಾನಿಯಲ್ಲಿ ಅತೀ ಹೆಚ್ಚಿನ ಪ್ರಕರಣ ದೃಢಪಟ್ಟಿದ್ದು, 756 ಮಂದಿ ಜ್ವರಕ್ಕೆ ತುತ್ತಾಗಿದ್ದಾರೆ.
ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಈ ವರ್ಷ ರಾಜ್ಯದಲ್ಲಿ ಯಾರೂ ಕೂಡ ಡೆಂಘೀಯಿಂದಾಗಿ ಮರಣ ಹೊಂದಿರುವ ವರದಿಯಾಗಿಲ್ಲ. ಆದರೆ, ಜ್ವರ ಕಾಣಿಸಿಕೊಂಡ ಪ್ರಕರಣಗಳ ಸಂಖ್ಯೆ 4,287ಕ್ಕೆ ಏರಿಕೆಯಾಗಿದೆ. ಕಳೆದ ವರ್ಷ 3,823 ಮಂದಿಯಲ್ಲಿ ಜ್ವರ ಕಾಣಿಸಿತ್ತು. ಅವರಲ್ಲಿ 5 ಮಂದಿ ಮೃತಪಟ್ಟಿದ್ದರು.
ಜಿಲ್ಲಾವಾರು ಡೆಂಘೀ ಪ್ರಕರಣಗಳ ಮಾಹಿತಿ :
- ಕಲಬುರಗಿ- 338
- ಉಡುಪಿ- 312
- ಶಿವಮೊಗ್ಗ- 305
- ಕೊಪ್ಪಳ- 220
- ದಕ್ಷಿಣ ಕನ್ನಡ- 206
- ದಾವಣಗೆರೆ- 209
- ಬಳ್ಳಾರಿ- 200
- ವಿಜಯಪುರ- 190
- ಹಾವೇರಿ- 169
- ಮಂಡ್ಯ- 161
- ಗದಗ- 127
- ಯಾದಗಿರಿ- 122
- ಬೀದರ್- 120
- ತುಮಕೂರು- 117
- ಚಿತ್ರದುರ್ಗ- 113
ಮೇಲಿನ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 100ರ ಗಡಿಯೊಳಗೆ ಇವೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ
ಚಿಕೂನ್ ಗುನ್ಯಾ ಪ್ರಕರಣಗಳ ಮಾಹಿತಿ :ರಾಜ್ಯದ 27 ಜಿಲ್ಲೆಗಳಲ್ಲಿ ಚಿಕೂನ್ ಗುನ್ಯಾ ಪ್ರಕರಣ ಕೂಡ ವರದಿಯಾಗಿವೆ. ಈವರೆಗೆ ಈ ಮಾದರಿಯ ಜ್ವರಕ್ಕೆ ಒಳಗಾದವರ ಸಂಖ್ಯೆ 1,415ಕ್ಕೆ ಏರಿಕೆಯಾಗಿದೆ. ಉತ್ತರ ಕನ್ನಡ, ರಾಯಚೂರು ಹಾಗೂ ದಕ್ಷಿಣ ಕನ್ನಡ ಬಿಟ್ಟು ಉಳಿದ ಎಲ್ಲಾ ಜಿಲ್ಲೆಗಳಲ್ಲಿಯೂ ಪ್ರಕರಣಗಳು ದೃಢಪಟ್ಟಿವೆ.
- ಕಲಬುರಗಿ- 185
- ಶಿವಮೊಗ್ಗ- 169
- ಕೋಲಾರ- 108
- ತುಮಕೂರು- 104
- ಯಾದಗಿರಿ- 103
- ಬೆಂಗಳೂರು ನಗರ 100
ಈ ಮೇಲಿನ ಜಿಲ್ಲೆಗಳಲ್ಲಿ ಅಧಿಕ ಪ್ರಕರಣ ವರದಿಯಾಗಿವೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 100ರ ಗಡಿಯೊಳಗಡೆ ಇವೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.