ಬೆಂಗಳೂರು :ಸೋಮವಾರದಿಂದ ವಿಧಾನಮಂಡಲ ಕಲಾಪ ಆರಂಭವಾಗಲಿರುವ ಹಿನ್ನೆಲೆ ಬೆಂಗಳೂರಿನಲ್ಲಿ ಇಂದು ವಿಧಾನ ಪರಿಷತ್ ಪದವೀಧರ ಮತ್ತು ಶಿಕ್ಷಕ ಕ್ಷೇತ್ರದ ಎಲ್ಲ ಪಕ್ಷಗಳ ಸದಸ್ಯರ ಜತೆ ಮಹತ್ವದ ಮಾತುಕತೆ ನಡೆಸಿದ ಉನ್ನತ ಶಿಕ್ಷಣ ಸಚಿವರೂ ಆದ ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ, ಉನ್ನತ ಶಿಕ್ಷಣ ಇಲಾಖೆಯಲ್ಲಿ ಕಳೆದ ಒಂದು ವರ್ಷದಿಂದ ಜಾರಿಗೆ ತಂದಿರುವ ವಿವಿಧ ಸುಧಾರಣೆಗಳ ಬಗ್ಗೆ ಮಾಹಿತಿ ನೀಡಿದರು.
ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ಬರುವ ಮುನ್ನ ಹಾಗೂ ಕೋವಿಡ್ ನಂತರ ಇಲಾಖೆಯಲ್ಲಿ ಅನುಷ್ಠಾನಗೊಂಡಿರುವ ಆನ್ಲೈನ್ ಅಫಿಲಿಯೇಷನ್, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಕ್ರಮ ಸೇರಿ ಎಲ್ಲ ಕಾರ್ಯಕ್ರಮಗಳ ಬಗ್ಗೆ ಪರಿಷತ್ ಸದಸ್ಯರಿಗೆ ವಿವರ ನೀಡಿದ ಡಿಸಿಎಂ, ಕೋವಿಡ್ ಹಿನ್ನೆಲೆಯಲ್ಲಿ ಡಿಜಿಟಲ್ ಲರ್ನಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ಅದು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ ಎಂದರು. ಈ ಬಗ್ಗೆ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ಸದಸ್ಯರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದರು.
ವರ್ಗಾವಣೆ ನೀತಿ ಬದಲು :
ರಾಜ್ಯದಲ್ಲಿ ಈಗಾಗಲೇ ಜಾರಿಯಲ್ಲಿರುವ ಉಪನ್ಯಾಸಕರ ವರ್ಗಾವಣೆಯ ನಿಯಮಗಳನ್ನು ಬದಲಿಸಲಾಗುವುದು. ಈಗಿರುವ 2016ರ ವರ್ಗಾವಣೆ ಕಾಯ್ದೆಯನ್ನು ವಾಪಸ್ ಪಡೆದು ಸೂಕ್ತವಾದ ತಿದ್ದುಪಡಿಗಳೊಂದಿಗೆ ಹೊಸ ನಿಯಮಗಳನ್ನು ತರಲಾಗುವುದು.
ಕಳೆದ ಅಧಿವೇಶನದಲ್ಲಿಯೇ ಇದರಲ್ಲಿ ಕೆಲ ತಿದ್ದುಪಡಿಗಳನ್ನು ಮಾಡುವ ಉದ್ದೇಶವಿತ್ತು. ಆದರೆ, ಆ ಕಾಯ್ದೆಯಲ್ಲಿ ಹಲವಾರು ದೋಷಗಳಿದ್ದ ಕಾರಣ ಇಡೀ ಕಾಯ್ದೆಯನ್ನೇ ವಾಪಸ್ ಪಡೆದು ಹೊಸ ನಿಯಮ ರೂಪಿಸಲು ನಿರ್ಧರಿಸಲಾಗಿದೆ. ಹೀಗೆ ಮಾಡುವುದರಿಂದ ವರ್ಗಾವಣೆ ನಿಯಮಗಳು ಸರಳವಾಗಿರುತ್ತವೆ, ಗೊಂದಲಗಳು ಇರುವುದಿಲ್ಲ ಎಂದು ಉಪಮುಖ್ಯಮಂತ್ರಿ ಹೇಳಿದರು.
ಈಗಾಗಲೇ ಈ ಕಾಯ್ದೆಯ ಬಗ್ಗೆ ನಿಮ್ಮಿಂದಲೂ ಸಲಹೆ ಪಡೆಯಲಾಗಿದೆ. ಅದೇ ರೀತಿ ಶಿಕ್ಷಕರ ಸಂಘದ ಪದಾಧಿಕಾರಿಗಳಿಂದಲೂ ಸಲಹೆಗಳನ್ನು ಪಡೆಯಲಾಗಿದೆ. ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿಯೇ ಮಂಡಿಸಲಾಗುವುದು. ಬಳಿಕ ಅದಕ್ಕೆ ಬರುವ ಆಕ್ಷೇಪ ಮತ್ತಿತರೆ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಾಯ್ದೆಯಾಗಿ ಜಾರಿಗೆ ತರಲಾಗುವುದು ಎಂದ ಡಿಸಿಎಂ, ಕಾಯ್ದೆಯು ಅತ್ಯಂತ ಪರಿಣಾಮಕಾರಿ ಹಾಗೂ ಪರಿಪೂರ್ಣವಾಗಿರುತ್ತದೆ ಎಂಬ ನಂಬಿಕೆ ನನ್ನದು ಎಂದರು. ಈ ಕಾಯ್ದೆ ಬಗ್ಗೆಯೂ ಕೂಡ ಪರಿಷತ್ ಸದಸ್ಯರೆಲ್ಲರೂ ಸಹಮತ ವ್ಯಕ್ತಪಡಿಸಿದರು.