ಕರ್ನಾಟಕ

karnataka

ETV Bharat / state

ಸೋಂಕಿತರ ಅಂತ್ಯಸಂಸ್ಕಾರದ ವೇಳೆ ಮಾರ್ಗಸೂಚಿ ಉಲ್ಲಂಘಿಸಿದರೆ ಕಠಿಣ ಕ್ರಮ: ಡಿಸಿಎಂ ಎಚ್ಚರಿಕೆ

ಕೆಲದಿನಗಳ ಹಿಂದೆ ಆ್ಯಂಬುಲೆನ್ಸ್​ಗಳ ಕೊರತೆ, ಬೆಡ್​ಗಳ ಕೊರತೆ ಇದ್ದವು. ಅಂತಹ ಸಮಯದಲ್ಲೇ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಿದ್ದರಿಂದ ಸಮಸ್ಯೆಯಾಯಿತು. ಈಗ ಆ ಸಮಸ್ಯೆಗಳನ್ನು ನಿವಾರಿಸಲಾಗಿದೆ.ಇನ್ನು ಸೋಂಕಿತರ ಅಂತ್ಯಸಂಸ್ಕಾರ ವೇಳೆ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಅಧಿಕಾರಿಗಳು ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಡಿಸಿಎಂ ಅಶ್ವತ್ಥ್​ ನಾರಾಯಣ ಎಚ್ಚರಿಕೆ ರವಾನಿಸಿದ್ದಾರೆ.

By

Published : Jul 1, 2020, 1:51 PM IST

DCM Ashwath Narayan
ಡಿಸಿಎಂ ಅಶ್ವಥ್​ ನಾರಾಯಣ

ಬೆಂಗಳೂರು:ಕೋವಿಡ್ ಸೋಂಕಿತರು ಮೃತಪಟ್ಟರೆ ಅವರ ಅಂತ್ಯಸಂಸ್ಕಾರಕ್ಕೆ ಮಾರ್ಗಸೂಚಿಗಳಿವೆ. ಈ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ್​​ ನಾರಾಯಣ ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಮಸ್ವಾಮಿ ಪಾಳ್ಯದಲ್ಲಿ ನಿಯಮ ಉಲ್ಲಂಘಿಸಿ ಕೋವಿಡ್ ಸೋಂಕಿತನ ಅಂತ್ಯಕ್ರಿಯೆ ಮಾಡಿದ ಆರೋಪ ಕೇಳಿಬಂದಿದೆ. ಇದರ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಡಿಸಿಎಂ ಅಶ್ವತ್ಥ್​​ ನಾರಾಯಣ್​

ಕೊರೊನಾ ಪಾಸಿಟಿವ್ ವರದಿ ಬಂದವರನ್ನು ಆಸ್ಪತ್ರೆಗೆ ದಾಖಲಿಸಲು ವಿಳಂಬವಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕೆಲದಿನಗಳ ಹಿಂದೆ ಆ್ಯಂಬುಲೆನ್ಸ್​ಗಳ ಕೊರತೆ, ಬೆಡ್​ಗಳ ಕೊರತೆ ಇದ್ದವು. ಅಂತಹ ಸಮಯದಲ್ಲೇ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಿದ್ದರಿಂದ ಸಮಸ್ಯೆಯಾಯಿತು. ಈಗ ಆ ಸಮಸ್ಯೆಗಳನ್ನು ನಿವಾರಿಸಿ ಹೆಚ್ಚುವರಿ ಆ್ಯಂಬುಲೆನ್ಸ್ ಮತ್ತು ಬೆಡ್​ಗಳ ವ್ಯವಸ್ಥೆ ಮಾಡಲಾಗಿದೆ. ಈಗ ಅಂತಹ ಸಮಸ್ಯೆ ಮರುಕಳಿಸುವುದಿಲ್ಲ ಎಂದು ಹೇಳಿದರು.

ಕಂದಾಯ ಸಚಿವ ಆರ್​. ಅಶೋಕ್ ಕೂಡ ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದಿರುವ ಸಾಧ್ಯತೆ ಇದ್ದು, ಅವರು ಕ್ವಾರಂಟೈನ್ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎನ್ನುವ ಆರೋಪ ಬಂದಿರುವ ಕುರಿತು ಮಾತನಾಡಿದ ಡಿಸಿಎಂ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಪರೀಕ್ಷೆ ಮಾಡಿಸಿಕೊಳ್ಳಬೇಕಾಗುತ್ತದೆ. ಅವರು ಮೆಡಿಕಲ್ ಸರ್ಟಿಫಿಕೇಟ್ ಪಡೆದಿರುವ ಬಗ್ಗೆ ನನಗೆ ಮಾಹಿತಿ ಇಲ್ಲವೆಂದು ಹಾರಿಕೆಯ ಉತ್ತರ ನೀಡಿದರು.

ನಿನ್ನೆ ಪ್ರಧಾನಿ ಮೋದಿ ಅವರು ಗರೀಬ್ ಕಲ್ಯಾಣ ಯೋಜನೆಯ ವಿಸ್ತರಣೆ ಬಗ್ಗೆ ಘೋಷಿಸಿದ್ದಾರೆ. ಹಸಿವಿನಿಂದ ಜನ ಇರಬಾರದೆಂದು ಈ ಯೋಜನೆಯನ್ನು ನವೆಂಬರ್​ವರೆಗೆ ವಿಸ್ತರಣೆ ಮಾಡಲಾಗಿದೆ. ಒನ್ ನೇಷನ್ ಒನ್ ರೇಷನ್ ರೇಶನ್ ಕಾರ್ಡ್ ಯೋಜನೆ ಬರಲಿದೆ. ಅದರ ಜಾರಿಗೆ ಸಮಯ ಹಿಡಿಯಲಿದೆ. ಅನಾನುಕೂಲತೆ ಆಗದಿರಲೆಂದು ಗರೀಬ್ ಕಲ್ಯಾಣ ಯೋಜನೆ ವಿಸ್ತರಣೆ ಮಾಡಲಾಗಿದೆ. ಈ ಯೋಜನೆಗೆ 90 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಇದಕ್ಕಾಗಿ ರಾಜ್ಯದ ಜನತೆಯ ಪರವಾಗಿ ಪ್ರಧಾನಿ ಅವರಿಗೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಕೊರೊನಾ ವೈರಸ್ ಎದುರಿಸುವ ದೊಡ್ಡ ಸವಾಲು ನಮಗೆ ಎದುರಾಗಿದೆ. ನಮ್ಮ ದೇಶದ ಜನಸಂಖ್ಯೆ ಅಷ್ಟು ದೊಡ್ಡದಿದೆ. ಆದರೂ ನಮ್ಮ ದೇಶದಲ್ಲಿ ವಿಶ್ವದ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಕಡಿಮೆ ಸೋಂಕಿತರು ಇದ್ದಾರೆ. ಉತ್ತಮ ನಾಯಕತ್ವ ಇರುವುದರಿಂದ ದೇಶ ಭರವಸೆಯ ದಿಕ್ಕಿನಲ್ಲಿ ಸಾಗುತ್ತಿದೆ. ಮಾಸ್ಕ್, ಸ್ಯಾನಿಟೈಸರ್, ಚಿಕಿತ್ಸೆ ಎಲ್ಲಾ ಒದಗಿಸಿ ಜನರ ನೆರವಿಗೆ ಸರ್ಕಾರ ಧಾವಿಸಿದೆ. ಕೇಂದ್ರ ಸರ್ಕಾರ ಪರಿಣಾಮಕಾರಿಯಾಗಿ ಎಲ್ಲಾ ರಾಜ್ಯಗಳಿಗೆ ಮಾರ್ಗಸೂಚಿ‌ ಜೊತೆಗೆ ಮಾರ್ಗದರ್ಶನ ಮಾಡಿದೆ. ಇಲ್ಲದಿದ್ದಲ್ಲಿ ಒಂದೊಂದು ರಾಜ್ಯದಲ್ಲಿ ಒಂದೊಂದು ನಿಯಮಾವಳಿ ಬಂದು ಸಮಸ್ಯೆ ಎದುರಾಗುತ್ತಿತ್ತು. ಆದರೆ ಒಂದೇ ಮಾರ್ಗಸೂಚಿ ಪಾಲನೆಯಾಗಿದೆ. ಇನ್ನಷ್ಟು ಮುಂಜಾಗ್ರತಾ ಕ್ರಮ ಅಗತ್ಯವಿದೆ. ಎಲ್ಲರೂ ಸೇರಿ ಕೊರೊನಾ ನಿಯಂತ್ರಣ ಮಾಡಬೇಕು, ಕೇಂದ್ರ, ರಾಜ್ಯ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿವೆ. ಬಹಳಷ್ಟು ಕಾಲ ಕೊರೊನಾ ವೈರಸ್ ನಮ್ಮೊಂದಿಗೆ ಇರಲಿದೆ. ಹಾಗಾಗಿ ಇದರ ನಿರ್ವಹಣೆ ಮುಖ್ಯ. ಹಾಗೆಯೇ ಜನರಿಗೆ ಉತ್ತಮ ವ್ಯವಸ್ಥೆ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಅಶ್ವತ್ಥ್​ ನಾರಾಯಣ ಅಭಯ ನೀಡಿದರು.

ಕೇಂದ್ರ ಸರ್ಕಾರ ಒಂದು ವರ್ಷದಲ್ಲಿ ಸಾಕಷ್ಟು‌ ಸಾಧನೆ ಮಾಡಿದೆ ಅದನ್ನು ವರ್ಚುವಲ್ ರ್ಯಾಲಿ ಮೂಲಕ ಹೇಳುವ ಜೊತೆ, ಸ್ವದೇಶಿ ವಸ್ತು ಬಳಕೆಯ ಸಂಕಲ್ಪ ಮಾಡಿರುವುದು ಒಳ್ಳೆಯ ಬೆಳವಣಿಗೆ. 60 ವರ್ಷದಲ್ಲಿ ಆಗದ ಸಾಧನೆಯನ್ನು ಒಂದು ವರ್ಷದಲ್ಲಿ ಹೇಗೆ ಮಾಡಬಹುದು ಎಂದು ನಮ್ಮ ಕಲ್ಪನೆಗೂ ಇಲ್ಲದ ರೀತಿ ಮಾಡಿ ತೋರಿಸಲಾಗಿದೆ. ಈ ಒಂದು ವರ್ಷ ಭಾರತದಲ್ಲಿ ದೊಡ್ಡ ಇತಿಹಾಸ ದಿಕ್ಸೂಚಿ‌ ಕೊಟ್ಟ ವರ್ಷವಾಗಿದೆ. ಕೊರೊನಾ ಸವಾಲು ನಿರ್ವಹಣೆ ಹೆಮ್ಮೆ ತರುವಂತಿದೆ ಎಂದು ಡಿಸಿಎಂ ಸಮರ್ಥನೆ ನೀಡಿದರು.

ABOUT THE AUTHOR

...view details