ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕ್ರೈಂ ರೇಟ್ ಜೊತೆಗೆ ಸೈಬರ್ ಅಪರಾಧ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿದ್ದು, ಖದೀಮರ ಹೆಡೆಮುರಿ ಕಟ್ಟಲು ಮಾತ್ರ ಪೊಲೀಸರು ಹರಸಹಾಸ ಪಡುವಂತಾಗಿದೆ.
ನಗರದಲ್ಲಿ ಅತಿ ಹೆಚ್ಚು ಕಂಡುಬರುತ್ತಿರುವ ಸೈಬರ್ ಅಪರಾಧಗಳು ಇಂತಿವೆ :
ಕೆಲಸ ಕೊಡಿಸುವುದಾಗಿ ದೋಖಾ : ವರ್ಷ ವರ್ಷಕ್ಕೂ ಜಾಬ್ ಫ್ರಾಡ್ಗಳು ಹೆಚ್ಚಾದರೂ, ನಂಬಿ ಮೋಸ ಹೋಗುವ ಜನರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸದ್ಯ ಕೊರೊನಾ ಹಿನ್ನೆಲೆ ಬಹುತೇಕರು ಕೆಲಸ ಕಳೆದುಕೊಂಡಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರ ಗ್ಯಾಂಗ್ ನಿರುದ್ಯೋಗಿಗಳನ್ನ ಟಾರ್ಗೆಟ್ ಮಾಡಿ ಹಣ ಲಪಾಟಯಿಸುತ್ತಿದೆ.
ಆನ್ಲೈನ್ನಲ್ಲಿ 100 ಕ್ಕೂ ಹೆಚ್ಚು ಜಾಬ್ ವೆಬ್ಸೈಟ್ಗಳಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ತೆಗೆದುಕೊಂಡು ಮೋಸ ಮಾಡುತ್ತಾರೆ. ಮೊದಲು ಕಂಪನಿ ಕನ್ಸಲ್ಟೆನ್ಸಿ ಎಂದು ಹೇಳಿ ನಿಮಗೆ ಮಲ್ಟಿನ್ಯಾಷನಲ್ ಕಂಪನಿಯಿಂದ ಕೆಲಸ ಕೊಡಿಸುತ್ತೇವೆ ಎಂದು ನಂಬಿಸಿ ಟ್ರೈನಿಂಗ್ ಚಾರ್ಜಸ್ ಸೇರಿದಂತೆ ಬೇರೆ ಬೇರೆ ಕಾರಣಗಳಿಗೆ ಹಣ ತೆಗೆದುಕೊಂಡು ಮೋಸ ಮಾಡುತ್ತಾರೆ. ಈ ಮೂಲಕ ನೀವು ಕೊಟ್ಟ ಹಣಕ್ಕೆ ಕೆಲಸವೂ ಇರಲ್ಲ ಇತ್ತ ಹಣವೂ ಬರಲ್ಲ. ಇನ್ನೂ 2018 ರಲ್ಲಿ 382 ಪ್ರಕರಣಗಳು ದಾಖಲಾದರೆ, 2019 ರಲ್ಲಿ 498 ಪ್ರಕರಣ, ಈ ವರ್ಷ 200 ಪ್ರಕರಣಗಳು ದಾಖಲಾಗಿವೆ.
ಎಟಿಎಂ ಕಾರ್ಡ್ ಫ್ರಾಡ್: ಬ್ಯಾಂಕ್ ಸಿಬ್ಬಂದಿ ಎಂದು ಹೇಳಿಕೊಂಡು ಸಾರ್ವಜನಿಕರಿಗೆ ವಂಚಿಸುತ್ತಾರೆ. ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅಪ್ಡೇಟ್ ಮಾಡಿಲ್ಲ ಅಂದರೆ ನಿಮ್ಮ ಕಾರ್ಡ್ ಡೀ ಆ್ಯಕ್ಟಿವೇಟ್ ಆಗುತ್ತೆ ಅಂತ ಸುಳ್ಳು ಹೇಳುತ್ತಾರೆ. ಹಾಗೆಯೇ ನಿಮ್ಮ ಕಾರ್ಡ್ ಡಿಟೇಲ್ಸ್ ಕೊಟ್ಟರೆ ನಾವು ಅದನ್ನ ಅಪ್ಡೇಟ್ ಮಾಡುತ್ತೇವೆ ಎಂದು ಹೇಳಿ, ಕಾರ್ಡ್ ನಂಬರ್, ಸಿವಿವಿ ನಂಬರ್ ಸೇರಿದಂತೆ ಎಲ್ಲ ಮಾಹಿತಿ ಪಡೆದು, ಮೊಬೈಲ್ ನಂಬರ್ ಗೆ ಓಟಿಪಿ ಬಂದಿದೆ ಅದನ್ನ ಹೇಳಿ ಎಂದು ತಿಳಿಸಿ ಸುಲಭವಾಗಿ ವಂಚಿಸುತ್ತಾರೆ.
ಹೀಗೆ ಮೋಸ ಹೋದವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಿದ್ದು 2018 ರಲ್ಲಿ 2,446 ಪ್ರಕರಣಗಳು, 2019 ರಲ್ಲಿ 3,782, 2020 ರಲ್ಲಿ 8 ಪ್ರಕರಣಗಳು ದಾಖಲಾಗಿವೆ.
ಓಎಲ್ಎಕ್ಸ್ ಅಥವಾ ಕ್ವಿಕರ್ ಸ್ಕ್ಯಾಮ್: ಆನ್ಲೈನ್ ಗ್ರಾಹಕರನ್ನ ಟಾರ್ಗೆಟ್ ಮಾಡೋದಷ್ಟೇ ಅಲ್ಲದೆ ಮಾರಾಟಗಾರರಿಗೂ ವಂಚನೆ ಮಾಡುತ್ತಾರೆ. ಓಲ್ಎಕ್ಸ್ನಲ್ಲಿ ಸೆಕೆಂಡ್ ಹ್ಯಾಂಡ್ ವಾಹನದ ಆ್ಯಡ್ ಗಳನ್ನ ಹಾಕಿ ಸುಲಭವಾಗಿ ವಂಚನೆ ಮಾಡುತ್ತಾರೆ. ಅಲ್ಲದೆ, ವೆಹಿಕಲ್ ಟೆಸ್ಟ್ ಮಾಡಬೇಕು ಎಂದಾಗ ನೀವು ಮುಂಚಿತವಾಗಿ ಪೇ ಮಾಡಿ ಒಂದಷ್ಟು ಪ್ರೊಸಿಜರ್ಸ್ ಗಳಿವೆ ಎಂದು ನಂಬಿಸಿ ಅಕೌಂಟ್ ಗೆ ಹಣ ಹಾಕಿಸಿಕೊಂಡು ವೆಹಿಕಲ್ ಕೊಡದೇ ಎಸ್ಕೇಪ್ ಆಗುತ್ತಾರೆ.
2018 ರಲ್ಲಿ 945 ಪ್ರಕರಣಗಳು, 2019 ರಲ್ಲಿ 2099, 2020 ರಲ್ಲಿ 405 ಪ್ರಕರಣ ದಾಖಲಾಗಿವೆ.
ಕ್ಯೂ-ಆರ್ ಕೋಡ್ ಸ್ಕ್ಯಾಮ್:ಆನ್ಲೈನ್ನಲ್ಲಿ ಯಾವುದೇ ಪ್ರಾಡಕ್ಟ್ ತೆಗೆದುಕೊಳ್ಳಲು ಮುಂದಾದಗ ಇದನ್ನೇ ಎನ್ಕ್ಯಾಶ್ ಮಾಡಿಕೊಂಡು. ಸುಲಭವಾಗಿ ಹಣ ಕಳುಹಿಸಬಹುದು. ಮೊಬೈಲ್ ಗೆ ಒಂದು ಕ್ಯೂಆರ್ ಕೋಡ್ ಬಂದಿದೆ ಅದರ ಮೂಲಕ ಬಿಲ್ ಪೇ ಮಾಡಬಹುದು ಎನ್ನುತ್ತಾರೆ. ಅದನ್ನ ನಂಬಿ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ, ಕಂಪ್ಲೀಟ್ ಅಕೌಂಟ್ ಡಿಟೇಲ್ಸ್ ಸೈಬರ್ ವಂಚಕರ ಕೈ ಪಾಲಾಗುತ್ತೆ. ಈ ಮೂಲಕ ಅಷ್ಟೂ ಹಣವನ್ನ ಕ್ಷಣಾರ್ಧದಲ್ಲಿ ಮಂಗಮಾಯ ಮಾಡುತ್ತಾರೆ.
2018 ರಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ 45 ಪ್ರಕರಣ, 2019 ರಲ್ಲಿ 80 ಪ್ರಕರಣ, 2020 ರಲ್ಲಿ 18 ಪ್ರಕರಣಗಳು ದಾಖಲಾಗಿವೆ.
ಮ್ಯಾಟ್ರಿಮೋನಿಯಲ್ ಅಥವಾ ವಿದೇಶಿ ಗಿಫ್ಟ್ ಸ್ಕ್ಯಾಮ್ :ಈ ಸ್ಕ್ಯಾಮ್ ಗೆ ಹೆಚ್ಚು ಟಾರ್ಗೆಟ್ ಆಗುತ್ತಿರುವವರು ಯುವತಿಯರು. ತಮ್ಮ ಸಂಗಾತಿಯನ್ನು ಹುಡುಕ ಬಯಸುವ ಯುವತಿಯರು ಮ್ಯಾಟ್ರಿಮೋನಿ ವೆಬ್ಸೈಟ್ಸ್ ಮೊರೆಹೋಗ್ತಾಗುತ್ತಾರೆ. ಅಲ್ಲಿ ವಂಚಕರು ಫೇಕ್ ಪ್ರೊಫೈಲ್ ಕ್ರಿಯೇಟ್ ಮಾಡಿ ಯುವತಿಯರನ್ನ ನಂಬಿಸಿ ಒಂದಷ್ಟು ಸಲುಗೆ ಬೆಳೆಸಿಕೊಂಡು, ಅವರ ಬಗ್ಗೆ ತಿಳಿದುಕೊಳ್ಳುತ್ತಾರೆ. ಬಳಿಕ ನಿನಗೆ ಗಿಫ್ಟ್ ಕಳುಹಿಸಬೇಕು ವಿದೇಶದಲ್ಲಿ ಚೆನ್ನಾಗಿರುವ ಗಿಫ್ಟ್ ಸಿಗುತ್ತೆ ಎಂದು ಹೇಳಿ ಯುವತಿಯರನ್ನ ತಮ್ಮತ್ತ ಸೆಳೆದುಕೊಂಡು ಗಿಫ್ಟ್ ಫೋಟೋವನ್ನೂ ಕಳಿಸಿ ಅಲ್ಲಿಗೆ ತಲುಪಿಸಬೇಕಾದರೆ ವಿದೇಶದ ಕೆಲವು ನಿಯಮಗಳಿವೆ. ಗಿಫ್ಟ್ ತೆಗೆದುಕೊಳ್ಳಬೇಕಾದರೆ ಇಂತಿಷ್ಟು ಹಣ ಕಟ್ಟಬೇಕು ಎಂದು ನಂಬಿಸಿ ಯುವತಿಯಿಂದ ಹಣ ಪಡೆದು ಮೊಬೈಲ್ ಸ್ವಿಚ್ಆಫ್ ಮಾಡುತ್ತಾರೆ.
ಅಟೆನ್ಶನ್ ಡೈವರ್ಷನ್ ಸ್ಕ್ಯಾಮ್: ಮಾರ್ಕೆಟ್, ಬ್ಯಾಂಕ್, ಹೀಗೆ ಜನನಿಬಿಡ ಪ್ರದೇಶದಲ್ಲಿ ಈ ರೀತಿಯ ಸ್ಕ್ಯಾಮ್ ಸರ್ವೇಸಾಮಾನ್ಯವಾಗಿ. ನಗರದ ಉಪ್ಪಾರಪೇಟೆ, ಅವೆನ್ಯೂ ರೋಡ್, ಕಾಟನ್ ಪೇಟೆ, ಮಾರ್ಕೆಟ್ ಸ್ಥಳಗಳಲ್ಲಿ ಅತಿ ಹೆಚ್ಚು ಅಟೆನ್ಶನ್ ಡೈವರ್ಷನ್ ಸ್ಕ್ಯಾಮ್ ನಡೆಯುತ್ತೆ.
ಜನನಿಬಿಡ ಪ್ರದೇಶದಲ್ಲಿ ಖದೀಮರು ಪಕ್ಕದಲ್ಲಿ ಹಣ ಬೀಳಿಸಿಕೊಂಡಿದ್ದೀರಾ ಎಂದು ಹೇಳಿ ಗಮನವನ್ನು ಬೇರೆಡೆ ಸೆಳೆಯುತ್ತಾರೆ. ಬಳಿಕ ಗೊತ್ತಲ್ಲದ ಹಾಗೆ ಪರ್ಸ್ ಹಾಗೂ ಕಾರಿನಲ್ಲಿರುವ ವಸ್ತು ದೋಚಿ ಪರಾರಿಯಾಗ್ತಾರೆ. ಅಲ್ಲದೆ ಬ್ಯಾಂಕ್ ಬಳಿ ಕಾಯುತ್ತಾ ಕುಳಿತುಕೊಳ್ಳುವ ವಂಚಕರು ಗಾಡಿ ಪಂಚರ್ ಆಗಿದೆ ಎಂದು ತಿಳಿಸಿ ಹಣ ಎಗರಿಸುತ್ತಾರೆ.
ಸೆಕ್ಸ್ ಸ್ಕ್ಯಾಮ್ :ಅಪರಿಚಿತ ವ್ಯಕ್ತಿಯಿಂದ ಮೊಬೈಲ್ ಗೆ ಮೆಸೆಜ್ ಅಥವಾ ಕಾಲ್ ಬಂದ್ರೆ ಅದನ್ನ ಆದಷ್ಟು ಅವಾಯ್ಡ್ ಮಾಡಿದ್ದಲ್ಲಿ ಈ ರೀತಿಯಾದ ಸ್ಕ್ಯಾಮ್ ತಡೆಗಟ್ಟಬಹುದು. ಮೊದಲಿಗೆ ನಿಮ್ಮ ಮೊಬೈಲ್ ಗೆ ಕೆಲ ಮಹಿಳೆಯರು ಮೆಸೇಜ್ ಮಾಡಿ ನೀವೇನಾದರು ಬ್ಯೂಟಿಫುಲ್ ಯುವತಿಯರ ಜೊತೆ ಡೇಟಿಂಗ್ ಮಾಡಲು ಇಚ್ಛಿಸಿದರೆ ಈ ನಂಬರ್ ಗೆ ಕರೆ ಮಾಡಿ ಅಂತ ಹೇಳುತ್ತಾರೆ. ಇದಾದ ಬಳಿಕ ಯಾಮಾರಿ ಕರೆ ಮಾಡಿದರೆ ಒಂದಷ್ಟು ಯುವತಿಯರ ಫೋಟೋ ಕಳುಹಿಸುತ್ತಾರೆ. ಡೇಟಿಂಗ್ ಗೆ ಒಪ್ಪಿಕೊಂಡರೆ ಮೋಸ ಮಾಡಿ ಹಣ ತೆಗೆದುಕೊಂಡು ಪರಾರಿಯಾಗುತ್ತಾರೆ.
ಕರೋಡ್ ಪತಿ ಸ್ಕ್ಯಾಮ್: ಮೊಬೈಲ್ ಗೆ ನಾವು ಇಂತಿಂತ ಟಿವಿ ಶೋ ನಿಂದ ಕರೆ ಮಾಡುತ್ತಿದ್ದೇವೆ. ನೀವು ಲಕ್ಕಿ ಡ್ರಾ ನಲ್ಲಿ ಹಣ ಗೆದ್ದಿದ್ದೀರಾ. ಎಂದು ನಂಬಿಸಿ ಸರ್ಕಾರಕ್ಕೆ ಇಂತಿಷ್ಟು ಟ್ಯಾಕ್ಸ್ ಪೇ ಮಾಡಬೇಕು ಎಂದು ಹೇಳಿ ಹಣ ಪೀಕುತ್ತಾರೆ.
ಕ್ಯಾಶ್ ಬ್ಯಾಕ್ ಸ್ಕ್ಯಾಮ್:ಇತ್ತೀಚೆಗೆ ಸೈಬರ್ ಕ್ರೈಂ ನಲ್ಲಿ ಅತಿಹೆಚ್ಚು ಕೇಳಿಬರುತ್ತಿರುವ ಸ್ಕ್ಯಾಮ್. ಲಕ್ಷ ಲಕ್ಷ ಟ್ರಾನ್ಸ್ಯಾಕ್ಷನ್ ಆಗುವ ಅಕೌಂಟ್ ಗುರುತಿಸಿ, ವು ಇಂತಿಷ್ಟು ರಿಚಾರ್ಜ್ ಮಾಡಿಸಿದರೆ ನಿಮಗೆ ಕ್ಯಾಶ್ ಬ್ಯಾಕ್ ಬರುತ್ತೆ ಎಂದು ತಿಳಿಸುತ್ತಾರೆ. ಕ್ಯಾಶ್ ಬ್ಯಾಕ್ ಬೇಕಾದಲ್ಲಿ ಅಕೌಂಟ್ ಡಿಟೇಲ್ಸ್ ಹಾಗೂ ಓಟಿಪಿ ಶೇರ್ ಮಾಡಿ ಎಂದು ತಿಳಿಸುತ್ತಾರೆ. ಬಳಿಕ ಹಣ ಎಗರಿಸುತ್ತಾರೆ.
ಸ್ಕಿಮ್ಮಿಂಗ್ ಹಾಗೂ ಕ್ಲೋನಿಂಗ್ ಸ್ಕ್ಯಾಮ್ : ನಗರದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿರುವ ಅತಿ ದೊಡ್ಡ ಸ್ಕ್ಯಾಮ್. ಎಟಿಎಂ ನಲ್ಲಿ ಹಣ ಡ್ರಾ ಮಾಡುವಾಗ ಎಲ್ಲಾ ಕಡೆಯೂ ಎಚ್ಚರದಿದಂದರಬೇಕು. ಗೊತ್ತಿಲ್ಲದಂತೆ ಫ್ರಾಡ್ಗಳು ಎಟಿಎಂ ಮಷಿನ್ ಕೆಳಗೆ ಪಿನ್ ನೋಟ್ ಮಾಡುವ ಪುಟ್ಟ ಮಷಿನ್ ಇಟ್ಟಿರುತ್ತಾರೆ. ಡ್ರಾ ಮಾಡಿಕೊಂಡು ಕ್ಯಾನ್ಸಲ್ ಕೊಡದೇ ಇದ್ದಲ್ಲಿ ಸುಲಭವಾಗಿ ಪಿನ್ ತಿಳಿದುಕೊಂಡು ಅಕೌಂಟ್ ನಲ್ಲಿರುವ ಹಣ ತೆಗೆದುಕೊಳ್ಳುತ್ತಾರೆ.