ಕರ್ನಾಟಕ

karnataka

ETV Bharat / state

ಕೋರ್ಟ್ ಆದೇಶ: ಜೈಲುಗಳಲ್ಲಿ ಕೈದಿಗಳ ದಟ್ಟಣೆ ತಗ್ಗಿಸಲು ಕ್ರಮ

ಸುಪ್ರೀಂ ಕೋರ್ಟ್ 2020ರ ಮಾರ್ಚ್ 23ರಂದು ನೀಡಿದ್ದ ನಿರ್ದೇಶನದಂತೆ ಈಗಾಗಲೇ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರ ನೇತೃತ್ವದ ಉನ್ನತಾಧಿಕಾರ ಸಮಿತಿ ರಚಿಸಲಾಗಿದೆ. ಹಾಗೆಯೇ ಮೇ 7ರಂದು ಸಿಜೆಐ ನೇತೃತ್ವದ ಪೀಠ ನೀಡಿರುವ ನಿರ್ದೇಶನದಂತೆ ಈಗಾಗಲೇ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಕಾರ್ಯರಂಭ ಮಾಡಿದೆ.

By

Published : May 14, 2021, 9:24 PM IST

Updated : May 14, 2021, 10:54 PM IST

prisons
ಜೈಲು

ಬೆಂಗಳೂರು : ಕೋವಿಡ್ ಹಿನ್ನೆಲೆ ಜೈಲುಗಳಲ್ಲಿನ ದಟ್ಟಣೆ ಕಡಿಮೆ ಮಾಡಲು ಮೇ 7ರಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಪೀಠ ನೀಡಿದ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರ ಹಾಗೂ ಬಂದೀಖಾನೆ ಇಲಾಖೆ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ.

ರಾಜ್ಯದಲ್ಲಿರುವ ಕಾರಾಗೃಹಗಳು: ಗೃಹ ಇಲಾಖೆ ಮಾಹಿತಿಯಂತೆ ರಾಜ್ಯದಲ್ಲಿ ಒಟ್ಟು 47 ಜೈಲುಗಳಿವೆ. 9 ಕೇಂದ್ರ ಕಾರಾಗೃಹಗಳು, 31 ಜಿಲ್ಲಾ ಕಾರಾಗೃಹಗಳು, 16 ತಾಲೂಕು ಉಪ ಕಾರಾಗೃಹಗಳು ಹಾಗೂ 1 ಬಯಲು ಕಾರಾಗೃಹವಿದ್ದು, ಈ ಎಲ್ಲ ಜೈಲುಗಳಲ್ಲಿ ಒಟ್ಟು 14,315 ಕೈದಿಗಳನ್ನಿರಿಸುವ ಸಾಮರ್ಥ್ಯ ಹೊಂದಿವೆ. ಆದರೆ, ಈ ಜೈಲುಗಳಲ್ಲಿ ಪ್ರಸ್ತುತ 14,736 ಕೈದಿಗಳಿದ್ದು, ಇವರಲ್ಲಿ 14,117 ಪುರುಷ ಕೈದಿಗಳು ಹಾಗೂ 619 ಮಹಿಳೆಯರಿದ್ದಾರೆ. ಹಲವು ಜೈಲುಗಳಲ್ಲಿ ಅವುಗಳ ಸಾಮರ್ಥ್ಯಕ್ಕಿಂತಲೂ ಹೆಚ್ಚು ಕೈದಿಗಳನ್ನು ಇರಿಸಲಾಗಿದೆ.

ಹಿರಿಯ ನ್ಯಾಯವಾದಿ ಹೆಚ್.ಎಸ್ ಚಂದ್ರಮೌಳಿ

ಸಾಮರ್ಥ್ಯಕ್ಕಿಂತ ಹೆಚ್ಚು ಕೈದಿಗಳಿರುವ ಕಾರಾಗೃಹಗಳು

ಕಾರಾಗೃಹ ಸಾಮರ್ಥ್ಯ ಬಂಧಿಗಳ ಸಂಖ್ಯೆ
ಕೇಂದ್ರ ಕಾರಾಗೃಹ ಬೆಂಗಳೂರು 4526 5237
ಕೇಂದ್ರ ಕಾರಾಗೃಹ ಕೋಲಾರ 87 128
ಜಿಲ್ಲಾ ಕಾರಾಗೃಹ ಚಿಕ್ಕಬಳ್ಳಾಪುರ 192 237
ಕೇಂದ್ರ ಕಾರಾಗೃಹ ಮೈಸೂರು 652 728
ಜಿಲ್ಲಾ ಕಾರಾಗೃಹ ಚಾಮರಾಜನಗರ 105 139
ಜಿಲ್ಲಾ ಕಾರಾಗೃಹ ಹಾಸನ 219 229
ಲ್ಲಾ ಕಾರಾಗೃಹ ಮಂಗಳೂರು 225 238
ಜಿಲ್ಲಾ ಕಾರಾಗೃಹ ಹಾವೇರಿ 170 194
ಕೇಂದ್ರ ಕಾರಾಗೃಹ ವಿಜಯಪುರ 125 135
ಕೇಂದ್ರ ಕಾರಾಗೃಹ ಕಲಬುರಗಿ 380 520
ಜಿಲ್ಲಾ ಕಾರಾಗೃಹ ಯಾದಗಿರಿ 705 931
ಜಿಲ್ಲಾ ಕಾರಾಗೃಹ ಬೀದರ್ 80 90
ಕೇಂದ್ರ ಕಾರಾಗೃಹ ಬಳ್ಳಾರಿ 217 230
ಜಿಲ್ಲಾ ಕಾರಾಗೃಹ ದಾವಣಗೆರೆ 170 194
ಜಿಲ್ಲಾ ಕಾರಾಗೃಹ ಕೊಪ್ಪಳ 130 151

ಎನ್​ಸಿಆರ್​ಬಿ ವರದಿ : ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಮಾಹಿತಿಯಂತೆ ರಾಜ್ಯದ ಬಂಧೀಖಾನೆಗಳಲ್ಲಿ ಕೈದಿಗಳ ದಟ್ಟಣೆ ಶೇ 102.94ರಷ್ಟಿದೆ. ದೆಹಲಿ(174.9) ಉತ್ತರ ಪ್ರದೇಶ (167.9) ಮಧ್ಯಪ್ರದೇಶ (155.3) ಮಹಾರಾಷ್ಟ್ರ(152.7) ಛತ್ತೀಗಡ(150.1) ಹೋಲಿಸಿದರೆ ರಾಜ್ಯದ ಬಂಧೀಖಾನೆಗಳ ಸ್ಥಿತಿ ಉತ್ತಮವಾಗಿದೆ. ಆದರೆ ರಾಜ್ಯದ ಸೆಂಟ್ರಲ್ ಜೈಲುಗಳಲ್ಲಿ ಕೈದಿಗಳ ದಟ್ಟಣೆ ಶೇ 119.48 ರಷ್ಟಿದೆ. ರಾಜ್ಯದ ಕಾರಾಗೃಹಗಳಲ್ಲಿ 4236 (ಶೇ 28) ಶಿಕ್ಷಾಧೀನ ಕೈದಿಗಳಿದ್ದು ರಷ್ಟಿದ್ದರೆ, ವಿಚಾರಣಾಧೀನ ಕೈದಿಗಳ ಸಂಖ್ಯೆ 10500 (ಶೇ 72)ರಷ್ಟಿದೆ.

ಉನ್ನತಾಧಿಕಾರ ಸಮಿತಿ: ಸುಪ್ರೀಂ ಕೋರ್ಟ್ 2020ರ ಮಾರ್ಚ್ 23ರಂದು ನೀಡಿದ್ದ ನಿರ್ದೇಶನದಂತೆ ಈಗಾಗಲೇ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರ ನೇತೃತ್ವದ ಉನ್ನತಾಧಿಕಾರ ಸಮಿತಿ ರಚಿಸಲಾಗಿದೆ. ಹಾಗೆಯೇ ಮೇ 7ರಂದು ಸಿಜೆಐ ನೇತೃತ್ವದ ಪೀಠ ನೀಡಿರುವ ನಿರ್ದೇಶನದಂತೆ ಈಗಾಗಲೇ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಕಾರ್ಯರಂಭ ಮಾಡಿದೆ. ಪೆರೋಲ್ ಮೇಲೆ ಬಿಡುಗಡೆ ಮಾಡಬಹುದಾದ ಶಿಕ್ಷಾಧೀನ ಕೈದಿಗಳು ಹಾಗೂ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದಾದ ವಿಚಾರಣಾಧೀನ ಕೈದಿಗಳನ್ನು ಗುರುತಿಸುವಂತೆ ಪರಿಶೀಲನಾ ಸಮಿತಿಗೆ ಸೂಚಿಸಿದೆ. ಅದರಂತೆ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿರುವ 140 ಮಂದಿಯನ್ನು ತಾತ್ಕಾಲಿಕವಾಗಿ ಬಿಡುಗಡೆಗೊಳಿಸಲು ಸಿದ್ದತೆ ಮಾಡಲಾಗುತ್ತಿದೆ.

ಹೈಕೋರ್ಟ್ ನಿರ್ದೇಶನಗಳು: ಕೋವಿಡ್ ಹಿನ್ನೆಲೆ ಜೈಲುಗಳಲ್ಲಿರುವ ಕೈದಿಗಳ ದಟ್ಟಣೆ ತಗ್ಗಿಸಲು ಸುಪ್ರೀಂ ಕೋರ್ಟ್ 2020ರ ಮಾರ್ಚ್ 16ರಂದು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿತ್ತು. ಆ ಬಳಿಕ ಮಧ್ಯಂತರ ಜಾಮೀನಿನ ಮೇಲೆ ಹಾಗೂ ಪೆರೋಲ್ ಮೇಲೆ ಕೈದಿಗಳನ್ನು ಬಿಡುಗಡೆ ಮಾಡುವಂತೆ ಕ್ರಮ ಕೈಗೊಳ್ಳಲು ಹೈಕೋರ್ಟ್ ಗಳಿಗೆ ಹಾಗೂ ಕಾನೂನು ಸೇವಾ ಪ್ರಾಧಿಕಾರಗಳಿಗೆ ನಿರ್ದೇಶಿಸಿತ್ತು. ಅದರಂತೆ ಹೈಕೋರ್ಟ್ ಕೈದಿಗಳ ದಟ್ಟಣೆ ತಗ್ಗಿಸಲು ಹಲವು ನಿರ್ದೇಶನಗಳನ್ನು ನೀಡಿತ್ತು.

ಇದೇ ವೇಳೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಅಮೋಲ್ ಕಾಳೆ ಜೈಲುಗಳು ಸುರಕ್ಷಿತವಾಗಿಲ್ಲ ಎಂದು ಆರೋಪಿಸಿ ಸಲ್ಲಿಸಿದ್ದ ಪಿಐಎಲ್​ನ್ನೇ ಹೈಕೋರ್ಟ್ ಸ್ವಯಂಪ್ರೇರಿತ ಪಿಐಎಲ್ ಆಗಿ ಪರಿವರ್ತಿಸಿಕೊಂಡಿದೆ. ಜೈಲುಗಳಲ್ಲಿ ಕೈದಿಗಳ ದಟ್ಟಣೆ ಕಡಿಮೆ ಮಾಡಲು, ಆರೋಗ್ಯ, ಸುರಕ್ಷತೆ, ಆಹಾರ ಪೂರೈಕೆ, ಸ್ವಚ್ಛತೆಗೆ ಸಂಬಂಧಿಸಿದಂತೆ ಹಲವು ನಿರ್ದೇಶನಗಳನ್ನು ಸರ್ಕಾರಕ್ಕೆ ನೀಡಿದೆ. ಕೈದಿಗಳ ಆರೋಗ್ಯ ಸುರಕ್ಷತೆ ಹಿನ್ನೆಲೆಯಲ್ಲಿ ಜೈಲುಗಳಲ್ಲಿ ಖಾಲಿ ಇರುವ 88 ವೈದ್ಯಕೀಯ ಅಧಿಕಾರಿಗಳನ್ನು ತುರ್ತಾಗಿ ನೇಮಿಸಿಕೊಳ್ಳುವಂತೆ ನಿರ್ದೇಶಿಸಿದೆ.

ಜೈಲುಗಳ ಸ್ಥಿತಿ: ರಾಜ್ಯ ಸರ್ಕಾರ ಜೈಲುಗಳ ಸುಧಾರಣೆಗೆ ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಆದರೆ, ಜಾರಿಯಲ್ಲಿ ಬಹುತೇಕ ವಿಫಲವಾಗಿವೆ. ಹೀಗಾಗಿಯೇ ಸರ್ಕಾರ ನೀಡುವ ಅಂಕಿ ಅಂಶಗಳಿಗೂ, ವಾಸ್ತವಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಮಾದರಿ ಜೈಲು ಮಾನದಂಡಗಳ ಪ್ರಕಾರ ಪ್ರತಿ 6 ಕೈದಿಗಳಿಗೆ ಒಂದು ಶೌಚಾಲಯ ಹಾಗೂ 10 ಕೈದಿಗಳಿಗೆ ಒಂದು ಸ್ನಾನಗೃಹ ಇರಬೇಕಿದೆ. ಆದರೆ, ರಾಜ್ಯದ ಜೈಲುಗಳಲ್ಲಿ ತಲಾ 10 ಮಂದಿಗೆ ಒಂದು ಶೌಚಗೃಹ ಹಾಗೂ 15 ಮಂದಿಗೆ ಒಂದು ಸ್ನಾನಗೃಹವಿದೆ ಎಂದು ಹೈಕೋರ್ಟ್ ಗೆ ಸರ್ಕಾರವೇ ಇತ್ತೀಚೆಗೆ ನೀಡಿದ ವರದಿಯಲ್ಲಿ ಉಲ್ಲೇಖಿಸಿದೆ. ಇನ್ನು ಜೈಲುಗಳಲ್ಲಿನ ಕೈದಿಗಳ ಅಂಕಿ ಅಂಶಗಳನ್ನು ವೆಬ್ ಸೈಟ್ ಮೂಲಕ ಪ್ರಕಟಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ್ದರೂ ಅದು ಈವರೆಗೆ ಪಾಲನೆಯಾಗಿಲ್ಲ.

ಜೈಲುಗಳಲ್ಲಿ ಕೋವಿಡ್ ನಿರ್ವಹಣೆ :ಪೊಲೀಸರ ಮಾಹಿತಿಯಂತೆ ಜೈಲುಗಳಲ್ಲಿ ಕೋವಿಡ್ ಸೋಂಕು ಹರಡದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಸ್ವಚ್ಛತೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದ್ದು, ನಿಯಮಿತವಾಗಿ ಸ್ಯಾನಿಟೈಸ್ ಮಾಡಲಾಗುತ್ತಿದೆ. ಕೈದಿಗಳಿಗೆ ನಿಗದಿತವಾಗಿ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ. ಇನ್ನು ಹೊರಗಿನಿಂದ ಹೊಸದಾಗಿ ಬರುವ ಕೈದಿಗಳನ್ನು ನಾಲ್ಕು ಹಂತಗಳಲ್ಲಿ ಪ್ರತ್ಯೇಕವಾಗಿ ಕ್ವಾರಂಟೈನ್ ಮಾಡಿ ನಂತರ ಇತರೆ ಕೈದಿಗಳ ಜೊತೆ ಉಳಿಯಲು ಅವಕಾಶ ನೀಡಲಾಗುತ್ತಿದೆ. ಸೋಂಕಿನ ಯಾವುದೇ ಲಕ್ಷಣ ಕಂಡುಬಂದರೂ ತಕ್ಷಣವೇ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇಲ್ಲಿನ ಕೈದಿಗಳಲ್ಲಿ 73 ಮಂದಿಗೆ ಕೋವಿಡ್ ಸೋಂಕು ತಗುಲಿದ್ದು 61 ಮಂದಿ ಗುಣಮುಖರಾಗಿದ್ದಾರೆ. ಉಳಿದ 12 ಮಂದಿಗೆ ಜೈಲಿನ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಮುಂದುವರೆಸಲಾಗಿದೆ. ಹಾಗೆಯೇ ಕೋವಿಡ್ ಸೋಂಕಿತರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಕೋವಿಡ್ ಬಂದಾಗಿನಿಂದ ವೀಕ್ಷಕರಿಗೆ ಭೇಟಿ ನಿಷೇಧ ಹೇರಿದ್ದು, ಆನ್​ಲೈನ್​ ಮೂಲಕವೇ ಸುಮಾರು 30 ನಿಮಿಷಗಳ ಕಾಲ ಭೇಟಿಗೆ ಅವಕಾಶ ಕೊಡಲಾಗುತ್ತಿದೆ.

ಆರೋಗ್ಯದ ಹಕ್ಕು ಕೈದಿಗಳಿಗೂ ಇದೆ: ಆರೋಗ್ಯದ ಹಕ್ಕು ಪ್ರತಿ ನಾಗರಿಕನಿಗೂ ಇದ್ದು, ಅದನ್ನು ಕೈದಿಗಳಿಗೂ ಕಡ್ಡಾಯವಾಗಿ ನೀಡಬೇಕು ಎನ್ನುತ್ತಾರೆ ಕಾನೂನು ತಜ್ಞರು. ಮಾಜಿ ರಾಜ್ಯ ಸರ್ಕಾರಿ ಅಭಿಯೋಜಕರಾದ ಹೆಚ್.ಎಸ್ ಚಂದ್ರಮೌಳಿ ಅವರು ಸಂವಿಧಾನ ನೀಡಿರುವ ಆರೋಗ್ಯದ ಹಕ್ಕನ್ನು ಕೈದಿಗಳಿಗೆ ನಿರಾಕರಿಸುವಂತಿಲ್ಲ. ಅದರಂತೆ ಕೈದಿಗಳ ಸುರಕ್ಷತೆಗೆ ಎಲ್ಲ ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು ಎನ್ನುತ್ತಾರೆ.

ಓದಿ:‘ಪಾಪದ ಹಣದಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿಲ್ಲ’: ಬಿಜೆಪಿ

Last Updated : May 14, 2021, 10:54 PM IST

ABOUT THE AUTHOR

...view details