ಬೆಂಗಳೂರು:ಕೋವಿಡ್ ಹೊಡೆತಕ್ಕೆ ಹಲವು ರೀತಿಯ ವ್ಯಾಪಾರ-ವಹಿವಾಟುಗಳು ನಿಂತುಹೋಗಿವೆ. ಅರ್ಥವ್ಯವಸ್ಥೆಯ ಪ್ರತೀ ಕ್ಷೇತ್ರಗಳೂ ನಲುಗಿವೆ. ಬೇಸಿಗೆ ಸಂದರ್ಭದಲ್ಲಿ ಉತ್ತಮ ವ್ಯಾಪಾರ ನಡೆಸುತ್ತಿದ್ದ ಕುಂಬಾರರು, ಮಡಿಕೆ ಮಾರಾಟ ಮಾಡುವವರ ಬದುಕು ಕೂಡ ಅತಂತ್ರಗೊಂಡಿದೆ.
ಪ್ರತಿ ವರ್ಷ ಬೇಸಿಗೆ ಆರಂಭವಾಗುತ್ತಿದ್ದಂತೆ ನಗರದ ಮುಖ್ಯ ರಸ್ತೆಗಳಲ್ಲಿ ಹೆಚ್ಚು ಮಾರಾಟವಾಗುತ್ತಿದ್ದ ಮಡಿಕೆಗಳು ಈ ಬಾರಿಯ ಲಾಕ್‌ಡೌನ್‌ನಿಂದ ಕಳೆಗುಂದಿವೆ. ಮಡಿಕೆಗಳಿಗೆ ಬೇಡಿಕೆ ಇಲ್ಲದೇ ಕುಂಬಾರರು, ಮಾರಾಟಗಾರರು ಸಂಕಷ್ಟದಲ್ಲಿದ್ದಾರೆ.
ವಿಶೇಷವಾಗಿ ಮಡಿಕೆ ತಯಾರಕರು ಹಾಗೂ ಮಾರಾಟಗಾರರು ಬೇಸಿಗೆಯಲ್ಲಿ ಮಣ್ಣಿನ ಮಡಿಕೆಗಳನ್ನು ತಯಾರಿಸಿ ಮಾರಾಟ ಮಾಡಿ ಆದಾಯ ಪಡೆಯುತ್ತಾರೆ. ಆದರೆ, ಕಳೆದೊಂದು ವರ್ಷದಿಂದ ತಯಾರಿಸಿದ ಮಡಿಕೆಗಳನ್ನು ಮನೆಯಲ್ಲಿಯೇ ಇಟ್ಟುಕೊಳ್ಳಬೇಕಾದ ದುಸ್ಥಿತಿ ಬಂದೊದಗಿದೆ. ಪರಿಣಾಮ, ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದಾರೆ. ಕಳೆದ ವರ್ಷವೂ ಕುಂಬಾರರು ಹಾಗು ಮಡಿಕೆ ವ್ಯಾಪಾರಿಗಳು ಈ ಸಂದರ್ಭದಲ್ಲಿ ಭಾರಿ ನಷ್ಟ ಅನುಭವಿಸಿದ್ದರು. ಈ ಬೇಸಿಗೆಯಲ್ಲಾದರೂ ಉತ್ತಮ ಆದಾಯ ಗಳಿಸಬೇಕು ಅಂದುಕೊಂಡವರಿಗೀಗ ಗಾಯದ ಮೇಲೆ ಬರೆ ಎಳೆದ ಪರಿಸ್ಥಿತಿ.
ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸಂಪೂರ್ಣ ಲಾಕ್ ಆಗಿದ್ದು, ಕುಂಬಾರಿಕೆಯನ್ನು ನೆಚ್ಚಿಕೊಂಡು ವ್ಯಾಪಾರದಲ್ಲಿ ನಿರತರಾಗಿರುವ ರಾಜ್ಯದ ಸಾವಿರಾರು ಕುಟುಂಬಗಳು ವ್ಯಾಪಾರವಿಲ್ಲದೆ ತೊಂದರೆಯಲ್ಲಿ ಸಿಲುಕಿವೆ. ಈ ಬಾರಿ ಮಡಿಕೆ ತಯಾರಿಸುವ ಕುಂಬಾರರು, ಮಾರುವ ವ್ಯಾಪಾರಸ್ಥರು ಕೂಡಾ ಕಡಿಮೆಯಾಗಿದ್ದು, ಇವರೆಲ್ಲರೂ ಕೊರೊನಾದಿಂದ ಆರ್ಥಿಕ ತೊಂದರೆಗೆ ಸಿಲುಕಿ, ಜೀವನ ನಿರ್ವಹಣೆಗಾಗಿ ಪರದಾಡುವಂತಾಗಿದೆ.
ಕುಂಬಾರಿಕೆ ವೃತ್ತಿಯನ್ನೇ ನಂಬಿ ಜೀವನ:
ಬೆಂಗಳೂರಿನ ಕೆ.ಆರ್. ಪುರ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶದ ಹೊಸಕೋಟೆಯಲ್ಲಿ 300ಕ್ಕೂ ಹೆಚ್ಚು ಕುಂಬಾರ ಸಮಾಜದ ಮನೆಗಳಲ್ಲಿ 600ಕ್ಕೂ ಹೆಚ್ಚು ಜನರು ವಾಸವಾಗಿದ್ದಾರೆ. ಇದರಲ್ಲಿ 100ಕ್ಕೂ ಹೆಚ್ಚು ಕುಟುಂಬಗಳು ಕುಂಬಾರಿಕೆ ವೃತ್ತಿಯನ್ನೇ ನಂಬಿವೆ. ಕೆಲವರು ಮಡಿಕೆಗಳ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ನಡೆಸಿದರೆ, ಇನ್ನೂ ಕೆಲವರು ಗಣೇಶ ಮೂರ್ತಿಗಳನ್ನು ತಯಾರು ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. ನಗರದ ಪ್ರತಿಷ್ಠಿತ ಮಾರುಕಟ್ಟೆಗಳಲ್ಲಿ ಒಂದಾದ ಕೆ.ಆರ್.ಪುರ ಮಾರುಕಟ್ಟೆ ಸಮೀಪದ ರಾಷ್ಟ್ರೀಯ ಹೆದ್ದಾರಿ ಮದ್ರಾಸ್ ರಸ್ತೆ, ಕುಂಬಾರ ಬೀದಿ, ಹಳೆ ಪೊಲೀಸ್ ಠಾಣೆ ರಸ್ತೆಯ ಬೀದಿಗಳಲ್ಲಿ ಕುಂಬಾರರು ಅಂಗಡಿಗಳನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದ್ರೀಗ ವ್ಯಾಪಾರವೆಲ್ಲವೂ ಸ್ಥಗಿತಗೊಂಡಿದೆ.
ಇವರು ಸಾಲ ಮಾಡಿ ಮಡಿಕೆ, ದೀಪಗಳು, ಪಾಟ್ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಬೇರೆ ಊರುಗಳಿಂದ ಖರೀದಿಸಿ ಸಂಗ್ರಹಿಸಿಟ್ಟುಕೊಂಡಿದ್ದಾರೆ. ಆದರೆ ಗ್ರಾಹಕರಿಲ್ಲದೇ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ಕಾಣುತ್ತಿದೆ. ಕರ್ಫ್ಯೂ, ಲಾಕ್ಡೌನ್ ಹಿನ್ನೆಲೆಯಲ್ಲಿ ನಿಗದಿತ ವೇಳೆಯಲ್ಲಿ ಉತ್ತಮ ವ್ಯಾಪಾರ ನಡೆಯುತ್ತಿಲ್ಲ. ಜತೆಗೆ ಕೋವಿಡ್ ಭೀತಿಯಿಂದ ಬಿಸಿ ನೀರಿನ ಮೊರೆ ಹೋದ ಜನರು ಮಡಿಕೆ ಖರೀದಿಗೆ ಮನಸ್ಸು ಮಾಡುತ್ತಿಲ್ಲ.