ಬೆಂಗಳೂರು: ಕೋವಿಡ್ ಸೋಂಕಿತರು ಹಾಗೂ ಸಂಪರ್ಕಿತರ ಪತ್ತೆಗಾಗಿ ವಿವಿಧ ಇಲಾಖೆಗಳ ಸಿಬ್ಬಂದಿಯನ್ನು ನಿಯೋಜಿಸುವಂತೆ ಸರ್ಕಾರ ಆದೇಶಿಸಿತ್ತು. ಆದರೆ ಇದೀಗ ನಿಯೋಜನೆಗಾಗಿ ಸಿದ್ಧಪಡಿಸಿದ ಸಿಬ್ಬಂದಿ ಪಟ್ಟಿಯಲ್ಲಿ 50 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು ಇರುವುದು ಸರ್ಕಾರಿ ನೌಕರರನ್ನು ಕಂಗೆಡಿಸಿದೆ.
ಕೊರೊನಾ ಸೋಂಕಿತರು ಹಾಗೂ ಸಂಪರ್ಕಿತರ ಪತ್ತೆಗಾಗಿ ವಿವಿಧ ಇಲಾಖೆಗಳ 1,013 ಸಿಬ್ಬಂದಿ ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಬೆಂಗಳೂರು ಸೇರಿ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಬಹುತೇಕ ಪ್ರಕರಣಗಳಿಗೆ ಸಂಪರ್ಕ ಪತ್ತೆಯೇ ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಸಂಪರ್ಕಿತರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಎ, ಬಿ, ಸಿ ವೃಂದದ ನೌಕರರನ್ನು ನಿಯೋಜಿಸಲು ನಿರ್ಧರಿಸಿತ್ತು. ಅದಕ್ಕಾಗಿ ವಿವಿಧ ಇಲಾಖೆಯ ಸುಮಾರು 1,013 ನೌಕರರನ್ನು ಆ ಕಾರ್ಯಕ್ಕಾಗಿ ನಿಯೋಜಿಸುವಂತೆ ಸುತ್ತೋಲೆ ಹೊರಡಿಸಿತ್ತು. ಈ ಕಾರ್ಯಕ್ಕೆ 50 ವರ್ಷಗಿಂತ ಕಡಿಮೆ ವಯಸ್ಸಿನ ಎ, ಬಿ ಮತ್ತು ಸಿ ವೃಂದದ ನೌಕರರನ್ನು ನಿಯೋಜಿಸಬೇಕು. ಜೊತೆಗೆ ಗರ್ಬಿಣಿಯರು, ಇತರ ಖಾಯಿಲೆ ಇರುವವರನ್ನು ನಿಯೋಜಿಸದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ನಿರ್ದೇಶನ ನೀಡಿದ್ದರು.
ಆದರೆ ಇದೀಗ ಬಿಬಿಎಂಪಿ ಸಿದ್ಧಪಡಿಸಿರುವ ನಿಯೋಜನೆಗೊಳ್ಳಬೇಕಾದ ಸಿಬ್ಬಂದಿ ಪಟ್ಟಿಯಲ್ಲೇ ಲೋಪದೋಷ ಕಂಡುಬಂದಿದೆ. ಫ್ರಂಟ್ ಲೈನ್ ವಾರಿಯರ್ಸ್ ಆಗಿ ಕೆಲಸ ಮಾಡುವುದಕ್ಕಾಗಿ ಬಿಬಿಎಂಪಿ ಸಿದ್ಧಪಡಿಸಿರುವ ಸಿಬ್ಬಂದಿಗಳ ಪಟ್ಟಿ ಚುನಾವಣಾ ಕಾರ್ಯಕ್ಕೆ ಈ ಹಿಂದೆ ಸಿದ್ಧಪಡಿಸಿದ್ದ ಪಟ್ಟಿಯನ್ನಾಧರಿಸಿ ಬಿಡುಗಡೆ ಮಾಡಿದೆ ಎಂದು ಸಚಿವಾಲಯದ ಸರ್ಕಾರಿ ನೌಕರರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ.
ಸರ್ಕಾರದ ಸುತ್ತೋಲೆಗಳನ್ನು ಗಾಳಿಗೆ ತೂರಿ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. 50 ವರ್ಷ ಮೀರಿದ ಹಾಗೂ ದೀರ್ಘಕಾಲೀನ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ನೌಕರರು, ಗರ್ಭಿಣಿ, ಬಾಣಂತಿಯರಿಗೆ ವಿನಾಯಿತಿ ನೀಡುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದ್ದರೂ, ಅದನ್ನು ಕಡೆಗಣಿಸಿ ಎಲ್ಲರನ್ನೊಳಗೊಂಡ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ನೌಕರರ ಸಂಘದ ಅಧ್ಯಕ್ಷ ಪಿ. ಗುರುಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.