ಬೆಂಗಳೂರು: ಕೊರೊನಾ ವೈರಸ್ ಉಲ್ಬಣಗೊಂಡಿದ್ದೇ ತಡ ಆರೋಗ್ಯ ಇಲಾಖೆ ಎಲ್ಲ ಸಿಬ್ಬಂದಿ ರಜೆಯನ್ನ ಕಡಿತಗೊಳಿಸಿತ್ತು. ಈ ಹಿನ್ನೆಲೆ ಹಗಲು-ರಾತ್ರಿ ಎನ್ನದೇ ಕೊರೊನಾ ಹರಡುವಿಕೆಯ ವಿರುದ್ಧ ಹೋರಾಡಲು ಆರೋಗ್ಯ ಸಿಬ್ಬಂದಿ ಸಜ್ಜಾಗಿ ತಮ್ಮ ಕೆಲಸ ಮುಂದುವರೆಸಿದ್ದಾರೆ.
ಆದರೆ, ದಿನದಲ್ಲಿ ಸಿಬ್ಬಂದಿಗೆ 8 ಗಂಟೆಗಳ ಸುದೀರ್ಘ ಕೆಲಸದ ಸಮಯ ಜಾರಿ ಮಾಡಲಾಗಿದೆ. ಕೀ ಅವಧಿಯನ್ನು 6 ಗಂಟೆಗೆ ಇಳಿಸಬೇಕು ಎಂದು ಇಲ್ಲಿನ ವಿಕ್ಟೋರಿಯಾ ಆಸ್ಪತ್ರೆಯ ನರ್ಸ್ಗಳು ಮನವಿ ಮಾಡಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯನ್ನು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯಾಗಿ ಪರಿವರ್ತಿಸುವ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಚಿಕಿತ್ಸೆ ನೀಡುವ ಸಿಬ್ಬಂದಿಗೆ ನೀಡಬೇಕಾದ ಸವಲತ್ತುಗಳ ವಿಚಾರದಲ್ಲಿ ಸರ್ಕಾರ ಎಡವಿರುವುದು ಸಿಬ್ಬಂದಿ ಬರೆದ ಪತ್ರದಲ್ಲಿ ಬಹಿರಂಗವಾಗಿದೆ.
ಕೊರೊನಾ ಹಿನ್ನೆಲೆ ಕೆಲಸದ ಅವಧಿ ಕಡಿತಕ್ಕೆ ವಿಕ್ಟೋರಿಯಾ ನರ್ಸ್ಗಳ ಮನವಿ.. 1,700 ಹಾಸಿಗೆಗಳ ಆಸ್ಪತ್ರೆಯನ್ನು ಕೊರೊನಾಗೆ ಮೀಸಲಿಡುವುದಾಗಿ ಹೇಳಲಾಗಿದೆ. ಈಗಾಗಲೇ ಹಲವು ಕೊರೊನಾ ರೋಗಿಗಳನ್ನು ಇಲ್ಲಿಗೆ ದಾಖಲಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬೇರೆ ಚಿಕಿತ್ಸೆ ಪಡೆಯುತ್ತಿದ್ದ ಹಲವು ಒಳರೋಗಿಗಳನ್ನು ಬೇರೆ ಖಾಸಗಿ, ಸರ್ಕಾರಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಕೊರೊನಾ ರೋಗಿಗಳಿಗಾಗಿ ದಿನವಿಡೀ ಕೆಲಸ ಮಾಡುತ್ತಿರುವ ನರ್ಸ್ಗಳ ಸುರಕ್ಷತೆ ಬಗ್ಗೆ ಸರ್ಕಾರ ಗಮನ ಹರಿಸಿಲ್ಲ. ಈ ಸಮಸ್ಯೆಯನ್ನು ಹೇಳಿಕೊಂಡಿರುವ ನರ್ಸ್ಗಳು ಎರಡನೇ ಬ್ಯಾಚ್ ಆಗಿ ನಿಯೋಜಿಸುವ ಸಿಬ್ಬಂದಿಗೆ ಹೆಚ್ಚು ಸವಲತ್ತುಗಳನ್ನು ನೀಡಬೇಕು ಹಾಗೂ ಅವರ ಕೆಲಸದ ಅವಧಿಯನ್ನು ಬದಲಿಸಬೇಕು ಎಂದು ಮನವಿ ಮಾಡಿದ್ದಾರೆ.
ತಮ್ಮ ಸಮಸ್ಯೆಗಳನ್ನು ಟ್ರಾಮಾ ಕೇರ್ ಸೆಂಟರ್‌ನ ವಿಶೇಷ ಅಧಿಕಾರಿಗೆ ಪತ್ರದ ಮೂಲಕ ಬರೆದಿದ್ದಾರೆ. ಕೊರೊನಾ ರೋಗಿಗಳ ಆರೈಕೆ ವೇಳೆ ತಾವು ಎದುರಿಸುತ್ತಿರುವ ಒತ್ತಡ, ಆರೋಗ್ಯ ಸಮಸ್ಯೆಗಳ ಕುರಿತು ಪತ್ರದಲ್ಲಿ ವಿವರಿಸಿದ್ದಾರೆ. ಆರೋಗ್ಯ ಕ್ಷೇತ್ರದ ಬೇರೆ ಸಿಬ್ಬಂದಿಗಿಂತ ನರ್ಸ್ ಗಳು ರೋಗಿಗಳ ಜತೆ ಹೆಚ್ಚು ನಿಟಕ ಸಂಪರ್ಕ ಹೊಂದಿರುತ್ತಾರೆ. ಆಸ್ಪತ್ರೆಗೆ ಪ್ರವೇಶಿಸಿ ಒಮ್ಮೆ ಪಿಪಿಇ ಕಿಟ್ ಧರಿಸಿದ ಬಳಿಕ ಮತ್ತೆ ಬೇರೆ ಯಾವ ಕೆಲಸವನ್ನೂ ಮಾಡಲು ಸಾಧ್ಯವಾಗುವುದಿಲ್ಲ. ಕೆಲಸದ ಒತ್ತಡ ಹೆಚ್ಚಿರುವುದರಿಂದ ಬಿಡುವು ಮಾಡಿಕೊಳ್ಳಲು ಆಗುವುದಿಲ್ಲ. ಹೀಗಾಗಿ ಕೆಲಸದ ಅವಧಿ ಕಡಿತಗೊಳಿಸುವಂತೆ ಮನವಿ ಮಾಡಿದ್ದಾರೆ.