ಕೆಆರ್ಪುರ: ಕೊರೊನಾ ಮಹಾಮಾರಿ ಹಲವರ ಜೀವನವನ್ನು ಬೀದಿಗೆ ತಂದು ನಿಲ್ಲಿಸಿದ್ದು, ಅದರಲ್ಲು ಕ್ಯಾಬ್ ಚಾಲಕರು, ಮಾಲೀಕರ ಬದುಕು ಅತಂತ್ರ ಸ್ಥಿತಿಯಲ್ಲಿದೆ.
ಮಹಾಮಾರಿ ಕೊರೊನಾ ಜನರ ಆರೋಗ್ಯದ ಮೇಲಷ್ಟೇ ಅಲ್ಲದೆ ಜನಸಾಮಾನ್ಯರ ಬದುಕಿನ ಮೇಲು ದೊಡ್ಡ ಬರೆ ಎಳೆದಿದೆ. ಪ್ರಮುಖವಾಗಿ ಬಡವರು ಮತ್ತು ಮಧ್ಯಮ ವರ್ಗದ ಜನರ ಆದಾಯದ ಮೂಲಕ್ಕೆ ಒಡೆತ ಬಿದ್ದಿದೆ. ಲಾಕ್ಡೌನ್ ಸಡಿಲಿಕೆ ಆದರೂ ಕೊರೊನಾ ಜೊತೆಗೆ ಜೀವನ ನಡೆಸಲು ಮುಂದಾಗಿರುವ ಮಧ್ಯಮ ವರ್ಗದ ಜನರು ದಿನಕ್ಕೆ ಐನೂರು, ಸಾವಿರ ದುಡಿಯುತ್ತಿದ್ದವರಿಗೆ ಈಗ ಜೀವನ ನಿರ್ವಹಣೆಯೇ ಹೊರೆ ಎನ್ನುವಂತೆ ಮಾಡಿದೆ. ಅದರಲ್ಲೂ ಕ್ಯಾಬ್ ಚಾಲಕರ ಕಷ್ಟ ದೇವರಿಗೆ ಪ್ರೀತಿ ಎನ್ನುವಂತಾಗಿದೆ.
ಕೊರೊನಾ ತಂದ ಸಂಕಷ್ಟ: ರಸ್ತೆ ಬದಿ ಹಣ್ಣು-ತರಕಾರಿ ಮಾರಲು ಮುಂದಾದ ಕ್ಯಾಬ್ ಚಾಲಕರು ಐಟಿ/ಬಿಟಿ ಕ್ಷೇತ್ರವಾದ ಮಹದೇವಪುರ ಸುತ್ತ ಸಾವಿರಾರು ಕಂಪನಿಗಳಿದ್ದು, ಕಂಪನಿಗಳನ್ನೇ ನಂಬಿಕೊಂಡು ಕ್ಯಾಬ್ ಓಡಿಸಿಕೊಂಡು ಜೀವನ ನಡೆಸುತ್ತಿದ್ದ ಚಾಲಕರು ಈಗ ವೃತ್ತಿಯನ್ನೇ ಬಿಡುವ ಸ್ಥಿತಿಗೆ ತಲುಪಿದ್ದಾರೆ. ಇನ್ನೂ ಕೆಲವು ಕ್ಯಾಬ್ ಮಾಲೀಕರು ವಾಹನಗಳನ್ನು ಮಾರಾಟ ಮಾಡುತ್ತಿದ್ದಾರೆ. ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಲವು ಕಂಪನಿಗಳು ಬಾಗಿಲು ಹಾಕಿವೆ. ಹಲವು ಕಂಪನಿಗಳು ವರ್ಕ್ ಫ್ರಂ ಹೋಮ್ ನಲ್ಲಿ ಕೆಲಸ ಮಾಡುತಿದ್ದು, ಇನ್ನೂ ಕೆಲವು ಕಂಪನಿಗಳ ಕಚೇರಿಯಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ ಕೆಲಸ ಮಾಡುತ್ತಿದ್ದಾರೆ.
ಅದರಿಂದ ಒಂದು ಕಂಪನಿಗೆ ಮೂರು ನಾಲ್ಕು ಕ್ಯಾಬ್ಗಳು ಮಾತ್ರ ಕಾರ್ಯನಿರ್ವಹಿಸುತ್ತವೆ. ಇದರಿಂದ ಎಷ್ಟೋ ಮಂದಿ ಕೆಲಸವಿಲ್ಲದೆ ಬೆಂಗಳೂರು ತೊರೆದು ತಮ್ಮ ಊರುಗಳಿಗೆ ಹೊರಟು ಹೋಗಿದ್ದಾರೆ. ಬೆಂಗಳೂರನ್ನೇ ನಂಬಿಕೊಂಡು ಸಾಲ ಮಾಡಿ ಕ್ಯಾಬ್ ಖರೀದಿಸಿದ್ದ ಚಾಲಕರು ಈಗ ಕಾರು ಓಡಿಸಲಾಗದೆ ಇರುವ ಕಾರಿನಲ್ಲೇ ಹೊಸ ವ್ಯಾಪಾರದತ್ತ ಮುಖ ಮಾಡಿದ್ದಾರೆ.
ಕೆಆರ್ ಪುರ ಮತ್ತು ಮಹದೇವಪುರದಲ್ಲಿ ರೆಹಮಾನ್ ಮತ್ತು ಪರಮೇಶ್ ಈ ಇಬ್ಬರು ಚಾಲಕರು ತಮಗೆ ಜೀವನದ ಆಧಾರವಾದ ಕಾರಿನಲ್ಲಿ ಕೆಆರ್ ಪುರ ರಸ್ತೆ ಬದಿಯಲ್ಲಿ ಹಣ್ಣು, ತರಕಾರಿ, ಮಸ್ರೂಮ್, ಜೋಳ, ಮಾಸ್ಕ್, ಫೇಸ್ ಶೀಲ್ಡ್, ಸ್ಯಾನಿಟೈಸರ್ ಇಟ್ಟುಕೊಂಡು ರಸ್ತೆ ಬದಿಯಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಲು ಮುಂದಾಗಿದ್ದಾರೆ. ಮೊದಲು ಓಲಾ, ಉಬರ್, ಖಾಸಗಿ ಕಂಪನಿಗಳಿಗೆ ಕ್ಯಾಬ್ ಅಟ್ಯಾಚ್ ಮಾಡಿಸಿ ಪ್ರತಿ ತಿಂಗಳು 40-50 ಸಾವಿರ ದುಡಿಯುತ್ತಿದ್ದರು. ಬಂದ ಹಣದಲ್ಲಿ ಕಾರಿನ ಲೋನ್, ಮನೆ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ, ಮನೆ ಖರ್ಚು ವೆಚ್ಚಗಳನ್ನು ಸರಿದೂಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ.