ಬೆಂಗಳೂರು:ಸಿಡಿ ಪ್ರಕರಣದಸಂತ್ರಸ್ತೆ ಕೋರ್ಟ್ಗೆ ಬಂದು ಹೇಳಿಕೆ ನೀಡಿದ ಮೇಲೂ ಅತ್ಯಾಚಾರ ಆರೋಪಿಯ ಬಂಧನವಾಗಲಿಲ್ಲವೆಂದರೆ ಏನರ್ಥ ಎಂದು ರಾಜ್ಯ ಕಾಂಗ್ರೆಸ್ ಘಟಕ ಪ್ರಶ್ನಿಸಿದೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ, 'ಸಂತ್ರಸ್ತೆ ಬಂದು ನ್ಯಾಯಾಧೀಶರೆದುರು ಹೇಳಿಕೆಯನ್ನೂ ಕೊಟ್ಟಾಯಿತು. ಇಷ್ಟಾದರೂ ಅತ್ಯಾಚಾರ ಆರೋಪಿ ರಮೇಶ್ ಜಾರಕಿಹೊಳಿ ಬೀದಿ ಗೂಳಿಯಂತೆ ತಿರುಗಿಕೊಂಡಿದ್ದಾರೆ, ಇನ್ನೂ ಕೂಡ ಆರೋಪಿಯ ಬಂಧನವಾಗಲಿಲ್ಲ ಏಕೆ ಬೊಮ್ಮಾಯಿ ಅವರೇ?' ಎಂದು ಪ್ರಶ್ನಿಸಿದೆ.
ಯುವತಿ ವಿಡಿಯೋ ಹೇಳಿಕೆ ನೀಡಿದಾಗಲೂ ಪ್ರಕರಣ ಹಾಕಲಿಲ್ಲ. ಸಂತ್ರಸ್ತೆ ದೂರು ಸಲ್ಲಿಸಿ, ಎಫ್ಐಆರ್ ದಾಖಲಾದರೂ ಬಂಧಿಸಲಿಲ್ಲ. ಕೋರ್ಟ್ಗೆ ಹಾಜರಾಗಿ ಹೇಳಿಕೆ ನೀಡಿದರೂ ಬಂಧನವಿಲ್ಲ. ಇಷ್ಟಾದರೂ ಅತ್ಯಾಚಾರ ಆರೋಪಿಯನ್ನು ಬಂಧಿಸದಂತೆ ಯಾವ ಶಕ್ತಿ ತಡೆಯುತ್ತಿದೆ? ಜನತೆಗೆ ಕಾನೂನಿನ ಮೇಲಿದ್ದ ನಂಬಿಕೆಯನ್ನೇಕೆ ನಾಶಗೊಳಿಸುತ್ತಿದ್ದೀರಿ? ಎಂದು ಕಿಡಿ ಕಾರಿದೆ.
ಸಂತ್ರಸ್ತೆ ನಿರ್ಭೀತಿಯಿಂದ, ಯಾವುದೇ ಪ್ರಭಾವಕ್ಕೂ ಒಳಗಾಗದೆ, ಯಾವುದೇ ಅಂಜಿಕೆಯಿಲ್ಲದೆ, ಒತ್ತಡವಿಲ್ಲದೆ ನ್ಯಾಯಾಧೀಶರ ಎದುರು ಹೇಳಿಕೆ ನೀಡಿದ್ದಾಳೆ ಎಂದು ಆಕೆಯ ವಕೀಲರು ತಿಳಿಸಿದ್ದಾರೆ. ಹೀಗಿದ್ದರೂ ರಮೇಶ್ ಜಾರಕಿಹೊಳಿಯನನ್ನು ಬಂಧಿಸಿಲ್ಲವೇಕೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.